Tuesday, 30 December 2014

ಪ್ರವಾಸ 2014

2014-15ನೇ ಸಾಲಿನ ಶೈಕ್ಷಣಿಕ ಪ್ರವಾಸದ ಒಂದಷ್ಟು ಸಂತಸದ ಕ್ಷಣಗಳು















Friday, 19 December 2014

ಸಂಚಿಕೆ -13

ನಮ್ಮ ನಾಡಿನಲ್ಲೊಬ್ಬ ಕಾಂಕ್ವಾಂಬಾ : ನಝೀಮ್

“ಇಡೀ ವಿಜ್ಞಾನ ಬೆಳೆದಿರುವುದು ಅನುಮಾನಗಳಿಂದ, ಸಂದೇಹಗಳಿಂದ, ಅಸ್ಪಷ್ಟ ನಿಲುವುಗಳಿಂದ” ಎಂಬ ಮಾತಿಗೆ ಉದಾಹರಣೆಯಂತೆ ಇದ್ದಾನೆ ಈ ನಝೀಮ್. ತ್ರೀ ಈಡಿಯಟ್ಸ್ ಎಂಬ ಸಿನಿಮಾದಲ್ಲಿ ವಿಮಾನದ ಮೇಲಿರುವ ಕ್ಯಾಮೆರಾವನ್ನು ಕಂಡು ಕುತೂಹಲದ ಬೆನ್ನುಬಿದ್ದ ನಝೀಮ್ ತಾನೊಂದು ಪ್ರಯೋಗಕ್ಕೆ ತೊಡಗಿಕೊಂಡ.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ನಝೀಮ್ ತನ್ನ ಬಿಡುವಿನ ವೇಳೆಯಲ್ಲಿ ಗ್ಯಾರೇಜೊಂದರಲ್ಲಿ ಕೆಲಸಮಾಡುತ್ತಾನೆ. ಅಲ್ಲಿ ಸಿಗುವ ವೈರು, ಸರ್ಕ್ಯೂಟ್ ಬೋರ್ಡುಗಳು ಹೀಗೆ ತನ್ನ ಪ್ರಯೋಗಕ್ಕೆ ಏನೆಲ್ಲಾ ಅವಶ್ಯಕವೋ ಅವುಗಳನ್ನೆಲ್ಲಾ ಸಂಗ್ರಹಿಸುತ್ತಾ ಹೋಗುತ್ತಾನೆ. ಹಳೆಯದೊಂದು ಮೊಬಯ್ಲು ಫೋನನ್ನು ತಗೆದುಕೊಂಡ.
ತನ್ನ ಪ್ರಯೋಗಕ್ಕೆ ಅವಶ್ಯಕವಿರುವ ವಸ್ತುಗಳನ್ನೆಲ್ಲಾ ಹೊಂದಿಸಿಕೊಂಡ ಮೇಲೆ ತನ್ನ ಅಪೂರ್ವ ಆವಿಷ್ಕಾರದಲ್ಲಿ ತೊಡಗುತ್ತಾನೆ. ಅವನ ಕುತೂಹಲದ ಮೂರ್ತ ರೂಪವೇ “ಸಿಸಿಟಿವಿ”
ನಝೀಮನ ಸಿಸಿಟಿವಿ

ಆಫ್ರಿಕಾ ಖಂಡದ ಮಲಾವಿ ದೇಶದ ವಿಲಿಯಂ ಕಾಂಕ್ವಾಂಬಾ ಎಂಬ ಹುಡುಗ ಹೀಗೆ ಕುತೂಹಲಕ್ಕೆ ಬಿದ್ದು ಗುಜರಿ ಅಂಗಡಿಗಳಲ್ಲಿ ತಿಂಗಳಾನುಗಟ್ಟಲೆ ಅಲೆದಾಡಿ ತನ್ನ ಪ್ರಯೋಗಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸುತ್ತಾನೆ. ಅದರಿಂದ ಅವನು ಗಾಳಿಯಂತ್ರವನ್ನು ಕಂಡುಹಿಡಿದು ತನ್ನ ಮನೆಯನ್ನು ಬೆಳಗಿಸುತ್ತಾನೆ. ಹುಚ್ಚುತನವೆಂದೇ ಕರೆಯಿಸಿಕೊಂಡಿದ್ದ ಕಾಂಕ್ವಾಂಬಾ ಗಾಳಿಯಂತ್ರದ ಆವಿಷ್ಕಾರ ಮುಂದೆ ಜಗದ್ವಿಖ್ಯಾತಗೊಂಡು ಅಮೆರಿಕ ದೇಶ ಆ ಮರಿವಿಜ್ಞಾನಿಯನ್ನು ಕರೆಯಿಸಿಕೊಂಡು ಗೌರವಿಸಿತು. (ಕಾಂಕ್ವಾಂಬಾನ ಯಶೋಗಾಥೆ “ಗಾಳಿ ಪಳಗಿಸಿದ ಬಾಲಕ” ಪುಸ್ತಕ ಕನ್ನಡದಲ್ಲೂ ಲಭ್ಯವಿದೆ. ಅನುವಾದ : ಕರುಣಾ ಬಿ. ಎಸ್. ಪ್ರಕಾಶಕರು: ಛಂದ ಪುಸ್ತಕ)
ಕಾಂಕ್ವಾಂಬಾನಂತೆ ಹುಚ್ಚು ಹಿಡಿಸಿಕೊಂಡ ನಮ್ಮ ನಝೀಮ್ “ಸಿಸಿಟಿವಿ”ಯನ್ನು ಕಂಡುಹಿಡಿದಿದ್ದಾನೆ. ಮಾರುಕಟ್ಟೆಯಲ್ಲಿ ಸಿಗುವ ಅತ್ಯಾಧುನಿಕ ಸಿಸಿಟಿವಿಗಿಂತ ಒಂದು ಕೈ ಮೇಲು ತನ್ನ ಸಿಸಿಟಿವಿ ಎನ್ನುತ್ತಾನೆ ನಝಿಮ್. ಹಳೆಯ ಮೊಬಯ್ಲ್ ಫೋನಿನ ಡಿಸ್ಪ್ಲೇ ಮತ್ತು ಕ್ಯಾಮೆರಾಗಳನ್ನು ಬಳಸಿ ಅದರಲ್ಲಿ ಸೆರೆ ಹಿಡಿದ ಚಿತ್ರ, ವಿಡಿಯೋಗಳನ್ನು ಸರ್ಕ್ಯೂಟ್ ಬೋರ್ಡೊಂದರ ಮೂಲಕ ಹಾದು ಇನ್ನೊಂದೆಡೆ ಅಳವಡಿಸಿರುವ ಮೆಮೊರಿ ಕಾರ್ಡಿನಲ್ಲಿ ಸಂಗ್ರಹಗೊಳ್ಳುತ್ತದೆ. ಗಂಟೆ, ನಿಮಿಷ, ಸೆಕೆಂಡುಗಳ ವಿವರಗಳೊಂದಿಗೆ ಸಂಗ್ರಹಗೊಳ್ಳುತ್ತದೆ. ಸಂಗ್ರಹಗೊಂಡ ದ್ರಶ್ಯಗಳನ್ನು ಕಂಪ್ಯೂಟರ್‍ಗೆ ಸಂಪರ್ಕಗೊಳಿಸಿದಾಗ ಎಲ್ಲಾ ವಿವರಗಳೊಂದಿಗೆ ಪರದೆಯಲ್ಲಿ ಕಾಣಿಸುತ್ತದೆ. ನಝೀಮ್ ಈ ಪ್ರಯೋಗವನ್ನು ಎಷ್ಟು ವ್ಯವಸ್ಥಿತವಾಗಿ ರೂಪಿಸಿದ್ದಾನೆಂದರೆ ಇಡೀ ವ್ಯವಸ್ಥೆಯೊಳಗೆ ಏನಾದರು ದೋಷ ಕಂಡುಬಂದಲ್ಲಿ ಅದನ್ನು ಕಂಪ್ಯೂಟರ್ಗೆ ಸಂಪರ್ಕಗೊಳಿಸಿದಾಗ ಎಲ್ಲಾ ವಿವರಗಳೊಂದಿಗೆ ಪರದೆಯಲ್ಲಿ ಕಾಣಿಸುತ್ತದೆ. ನಝೀಮ್ ಈ ಪ್ರಯೋಗವನ್ನು ಎಷ್ಟು ವ್ಯವಸ್ಥಿತವಾಗಿ ರೂಪಿಸಿದ್ದಾನೆಂದರೆ ಇಡೀ ವ್ಯವಸ್ಥೆಯೊಳಗೆ ಏನಾದರು ದೋಷ ಕಂಡುಬಂದಲ್ಲಿ ಅದನ್ನು ಕಂಪ್ಯೂಟರ್ಗೆ ಅಳವಡಿಸಿದರೆ ನ್ಯೂನ್ಯತೆ ಎಲ್ಲಿದೆ ಎಂದು ಕಂಪ್ಯೂಟರ್ ಗುರುತಿಸಿ ಹೇಳಬಲ್ಲುದು. ಅಷ್ಟು ತಾಂತ್ರಿಕ ನಿಪುಣತೆಯನ್ನು ಸಾಧಿಸಿದ್ದಾನೆ ನಝೀಮ್.

‘ಸಿಸಿಟಿವಿ’ ವಿಜ್ಞಾನಿ ಮಯ್ಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯ ಸರ್ಕಾರಿ ಪ್ರೌಢ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿ ನಝೀಮ್

ಮಾರುಕಟ್ಟೆಯ ಸಿಸಿಟಿವಿಗಳು ಅತಿ ದುಬಾರಿಯವಾದರೆ ಅದೇ ಫಲಿತಾಂಶಗಳನ್ನು ನೀಡುವ ನಝೀಮನ “ಸಿಸಿಟಿವಿ” ಅತ್ಯಂತ ಕಡಿಮೆ ಖರ್ಚಿನ, ನಾವು ಬಳಸಿ ಎಸೆದಿರುವಂತಹ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನೇ ಬಳಸಿಕೊಂಡು ತಯಾರಿಸಿರುವಂತದ್ದು. ನಮ್ಮ ಸಮಾಜದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳನ್ನು ಗಮನದಲ್ಲಿರಿಸಿಕೊಂಡು ಶಾಲೆಗಳಲ್ಲಿ ಸಿಸಿಟಿವಿಯನ್ನು ಅಳವಡಿಸಬೇಕೆಂದು ಸರ್ಕಾರ ಹೇಳುತ್ತಿದೆ. ಅದಕ್ಕೆ ನನ್ನ “ಸಿಸಿಟಿವಿ” ನೆರವಾಗಬಹುದು ಎನ್ನುತ್ತಾನೆ ನಝೀಮ್.
ಸರ್ಕಾರಿ ಶಾಲೆಯಲ್ಲಿ ಓದುತ್ತಾ, ಬಡತನದ ಬೇಗೆ ನೀಗಿಸಿಕೊಳ್ಳುವ ಸಲುವಾಗಿ ಗ್ಯಾರೇಜಿನಲ್ಲಿ ದುಡಿಯುತ್ತಾ ಇಂಥದ್ದೊಂದು ಪ್ರಯೋಗದಲ್ಲಿ ಯಶಸ್ವಿಯಾದ ನಝೀಮನಂತ ಸಾವಿರಾರು ಪ್ರತಿಭೆಗಳು ಈ ನಾಡಿನೆಲ್ಲೆಡೆ ಇರಬಹುದು. ಅವರನ್ನು ಗುರುತಿಸುವ ಅವರ ಆಸಕ್ತಿಗಳಿಗೆ ನೀರೆರೆವ ಕೆಲಸ ಅವರ ಶಿಕ್ಷಕರು ಮಾಡಬೇಕು.
ವರದಿ : ಸಂತೋಷ ಗುಡ್ಡಿಯಂಗಡಿ
*********************************************************************************

ಮರಿವಿಜ್ಞಾನಿಗಳ ಸಮಾಗಮ

ಇತ್ತೀಚೆಗೆ ಮಯ್ಸೂರು ಡಯಟ್ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮರಿವಿಜ್ಞಾನಿಗಳ ಸಮಾವೇಶದಂತಿತ್ತು. ಶಿಕ್ಷಕರ ಸಹಕಾರದೊಂದಿಗೆ ತಾವು ಆವಿಷ್ಕರಿಸಿದ ಹೊಸ ಹೊಸ ವಿಜ್ಞಾನ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಫಿಲೋಮಿನಾ ಲೋಬೋ (ನಿರ್ದೇಶಕರು ಪ್ರೌಢ ಶಿಕ್ಷಣ, ಆಯುಕ್ತರ ಕಛೇರಿ, ಸಾ. ಶಿ. ಇಲಾಖೆ, ಬೆಂಗಳೂರು) “ನಾವು ಮಾದರಿಗಳನ್ನಷ್ಟೇ  ಮಾಡುತ್ತಿದ್ದೇವೆ ಆದರೆ ಅದನ್ನು ನಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಮಕ್ಕಳನ್ನು ಸ್ಪರ್ಧೆಗೆ ಸಜ್ಜುಗೊಳಿಸುತ್ತೇವೆಯೋ ಅಥವಾ ಬದುಕಿಗೆ ಸಜ್ಜುಗೊಳಿಸುತ್ತೇವೆಯೋ? ಎಂಬುದನ್ನು ವಿಜ್ಞಾನ ಶಿಕ್ಷಕರು ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ವಿದ್ಯಾರ್ಥಿಗಳು ಸದಾ ಪ್ರಶ್ನೆ ಕೇಳಬೇಕು. ವಿಜ್ಞಾನವನ್ನು ಪರೀಕ್ಷೆಗಾಗಿ ಓದುವುದಲ್ಲ, ಬೋಧಿಸುವುದಲ್ಲ; ಅದೊಂದು ಜೀವನ ಶೈಲಿಯಾಗಬೇಕು. ನಾವು ಇಂದು ಏನನ್ನು ಓದಿತ್ತೇವೆಯೋ ಅದನ್ನು ಜೀವನಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಎಷ್ಟೇ ಎತ್ತರಕ್ಕೇರಲಿ ಮಾನವೀಯತೆಯನ್ನು ಮರೆಯಬಾರದು” ಎಂದರು.
INDIGENOUS TECHNOLOGY FOR INCLUSIVE GROWTH ವಿಷಯದ ಮೇಲೆ ಮಾತನಾಡುತ್ತಾ ಮಾನಸ ಗಂಗೋತ್ರಿಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಕೆ. ಎಸ್. ಮಲ್ಲೇಶ ಅವರು “ಇಡೀ ವಿಜ್ಞಾನ ಬೆಳೆದಿರುವುದು ಅನುಮಾನಗಳಿಂದ, ಸಂದೇಹಗಳಿಂದ, ಅಸ್ಪಷ್ಟ ನಿಲುವುಗಳಿಂದ. ಶಿಕ್ಷಕರು ತಮ್ಮ ಅಜ್ಞಾನವನ್ನು ಮುಚ್ಚಿಕೊಳ್ಳುವ ಯತ್ನದಲ್ಲಿ ಮಕ್ಕಳ ಜ್ಞಾನದ ಬಾಗಿಲನ್ನು ಮುಚ್ಚಬಾರದು. ನಾವಿಂದು ವಿಜ್ಞಾನ ಮೇಸ್ಟ್ರಾಗಿರುತ್ತೇವೆಯೇ ಹೊರತು  ಒಳಗಡೆ ವಿಜ್ಞಾನವೇ ಇರುವುದಿಲ್ಲ; ಅಂಧಶ್ರದ್ಧೆಯ ಗೂಡಾಗಿರುತ್ತೇವೆ. ಮಗು ಇಂದು ತರಗತಿಯಲ್ಲಿ ಮಾತ್ರ ವಿದ್ಯಾರ್ಥಿಯಾಗಿರುತ್ತದೆಯೇ ಹೊರತು ಬದುಕಿನಲ್ಲಿ ವಿದ್ಯಾರ್ಥಿಯಾಗಿರುವುದಿಲ್ಲ. ಹಾಗೆ ನಾವು ಮಕ್ಕಳನ್ನು ಬೆಳೆಸುತ್ತಿಲ್ಲ. ಮಗು ಮಾಡಬಹುದಾದ ಎಲ್ಲಾ ಕೆಲಸಗಳನ್ನು ಆದಷ್ಟು ಕಡಿಮೆ ಮಾಡುವುದೇ ಇತ್ತೀಚಿನ ನಾಗರೀಕ ಲಕ್ಷಣವಾಗಿದೆ. ನಾವೆಲ್ಲ ಮೌಢ್ಯದಿಂದ ಹೊರಬೇಕು” ಎಂದು ವಿಜ್ಞಾನ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲರಾದ ಬಿ.ಕೆ. ಬಸವರಾಜು, ಸಾ.ಶಿ.ಇ. ಉಪನಿರ್ದೇಶಕರಾದ ಎಚ್. ಆರ್. ಬಸಪ್ಪ, ಡಯಟ್ ಉಪಪ್ರಾಂಶುಪಾಲರಾದ ನಾರಾಯಣ ಗೌಡ ಮುಂತಾದವರು ಹಾಜರಿದ್ದರು.


 ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಹುಣಸೂರು ತಾಲೂಕು ಕೊತ್ತೇಗಾಲ ಸರ್ಕಾರಿ ಪ್ರೌಢ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿಗಳಾದ ಅಕ್ಷತ್, ನಿತಿನ್ ಮತ್ತು ಸ್ವಾಮಿ ಪ್ರದರ್ಶಿಸಿದ ಪ್ಲಾಸ್ಟಿಕ್‍ನಿಂದ ಡಾಂಬರು ತಯಾರಿಸುವ ಮಾದರಿ
*****************************************************************


ನಂಜನಗೂಡಿನ ಜೆ.ಎಸ್.ಎಸ್. ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯರಾದ ಹರಿಣಿ ಎಸ್. ರಾವ್ ಮತ್ತು ಸೋನು ಎಂ. ಎಸ್. ಇವರು ಪ್ರದರ್ಶಿಸಿದ ‘ಹೈಡ್ರೊಲಿಕ್ ಬ್ರಿಡ್ಜ್’ ಮಾದರಿ
*********************************************************


ನಮ್ಮ ಊರಿನ ಹುಡುಗರು ಪೆದ್ದರು
ಆದರು ಅವರು ಕೆಲಸದಲ್ಲಿ ನಿಪುಣರು
ರೋಷ ಆವೇಷ ಬಿಟ್ಟವರು
ಚಡ್ಡಿ ಪಂಚೆ ತೊಟ್ಟವರು
ಲಂಗು ಲಗಾಮಲ್ಲಿ ಇರುವವರು
ಪ್ರಾಣಿಗಳನ್ನು ಸಾಕುವರು
ಅದರಿಂದ ಉಪಯೋಗ ಪಡೆಯುವರು
ರಾಗಿಮುದ್ದೆ ತಿನ್ನುವರು
ಉಪ್ಪೆಸ್ರು ಬಸ್ಸಾರ್ ಕುಡಿಯುವರು

-ವಸಂತ್ ಕುಮಾರ್ ಡಿ. ಪಿ.
9ನೇ ತರಗತಿ
****************************************************

ನಾನು ಒಂದು ಪೆನ್ನು ತೆಗೆದುಕೊಂಡಿದ್ದೆ. ಆ ಪೆನ್ನು ಕುಣಿದಾಡುತ್ತ, ನಲಿಯುತ್ತ ಸಂತೋಷ ಪಡುತ್ತಿತ್ತು.
ನಮ್ಮ ಅಮ್ಮ ಮಾಡಿದ ಅನ್ನ ಮಾತನಾಡುತ್ತಿತ್ತು. ಆ ಅನ್ನ ನನ್ನನ್ನು ಬದುಕಿಸಿಕೊಳ್ಳಿ ಎಂದು ಬೇಡಿಕೊಳ್ಳುತ್ತಿತ್ತು.
-ಅಪ್ಪು ಎಚ್. ಜಿ.
8ನೇ ತರಗತಿ
****************************************************

ನನ್ನ ಶಾಲೆ ಬಣ್ಣದ ಶಾಲೆ
ಹಸಿರು ಹಸಿರಿನ ನನ್ನ ಶಾಲೆ
ಇಲ್ಲಿಗೆ ಓದಲು ಬರುತ್ತೇವೆ
ಮಕ್ಕಳು ಶಾಲೆ ದೇಗುಲ
ಇದ್ದಂಗೆ ಅಂತ ಹೇಳುತ್ತಾರೆ
ನಿಜ ಶಾಲೆ ದೇಗುಲ
ಇಲ್ಲಿ ಭೇದ ಭಾವ ಜಾತಿ ಎಂಬುದು ಇಲ್ಲ
ಗೆಳೆತನದ ಸುವಿಶಾಲ ತರತರದ ಹೂವು
ಎರಡು ದಿನಕ್ಕೊಮ್ಮೆ ಕೊಡುತ್ತಾರೆ ಹಾಲು
ಮಧ್ಯಾಹ್ನ ಬಿಸಿಯೂಟ ಕೊಡುತ್ತಾರೆ
ಶಾಲೆ ಶಾಲೆ ಬಣ್ಣದ ಶಾಲೆ
ಹೆಗ್ಗಡಹಳ್ಳಿಯ ಶಾಲೆ
ಬಣ್ಣದ ಶಾಲೆಗೆ ಎಲ್ಲರೂ ಹೋಗೋಣ
ವಿದ್ಯೆ ಬುದ್ಧಿ ಕಲಿಯೋಣ

- ಕಾವ್ಯ ಎನ್.
8ನೇ ತರಗತಿ
****************************************************

ಬಣ್ಣ ಬಣ್ಣದ ನಮ್ಮೂರ ಶಾಲೆ
ಎಲ್ಲಿ ಇಹುದು ಬಣ್ಣದ ಶಾಲೆ?
ಎಲ್ಲಿ ನೋಡಿದರೂ ಬಣ್ಣ ಬಣ್ಣದ ನಗು
ನೋಡು ನೋಡು ಬಣ್ಣದ ನಮ್ಮೂರ ಶಾಲೆ
ಮಕ್ಕಳ ಮಾತೇ ಬಣ್ಣದ ಮಾತು
ಬೆಳಿಗ್ಗೆ ಬಂದರೆ ಬೆಳ್ಳನೆ ಹಾಲು
ಬೆಲ್ಲು ಹೊಡೆದರೆ ಪಾಠ ನೀ ಓದು
ಮಧ್ಯಾಹ್ನ ಆದರೆ ಬಿಸಿ ಊಟ
ನೋಡು ನೋಡು ಹೆಗ್ಗಡಹಳ್ಳಿ
ಬಣ್ಣದ ಶಾಲೆ ಸಂಜೆ ಆದರೆ
ಮನೆಗೆ ಓಟ
ಮತ್ತೆ ನಾಳೆ ಬರುವುದು
ಬಣ್ಣ ಬಣ್ಣದ ನಗುವು
-ರಕ್ಷಿತ ಎಚ್. ಪಿ.
8ನೇ ತರಗತಿ
****************************************************

ನಮ್ಮ ಶಾಲೆ ಸುಂದರವಾಗಿದೆ. ನಮ್ಮ ಶಾಲೆಯಲ್ಲಿ ಬಣ್ಣ ಬಣ್ಣದ ಪಕ್ಷಿಗಳು. ನಮ್ಮ ಶಾಲೆಯಲ್ಲಿ ಗಿಡಮರಗಳು ಹಸಿರಾಗಿವೆ.
ನಮ್ಮ ಶಾಲೆಯಲ್ಲಿ ಚನ್ನಾಗಿ ಪಾಠ ಹೇಳಿಕೊಡುತ್ತಾರೆ. ನಮ್ಮ ಶಾಲೆ ಎಂದರೆ ನನಗೆ ತುಂಬಾ ಇಷ್ಟ. ನಾಟಕ, ಕೋಲಾಟ, ಕಥೆ ಇತ್ಯಾದಿಗಳನ್ನು ಹೇಳಿಕೊಡುತ್ತಾರೆ. ನಮ್ಮ ಶಾಲೆಯಲ್ಲಿ ಕುಳಿತುಕೊಳ್ಳುವುದಕ್ಕೆ ನೆರಳಿದೆ. ನಮ್ಮ ಶಾಲೆಯಲ್ಲಿ ದೊಡ್ಡ ದೊಡ್ಡ ಮರಗಳಿವೆ. ನಮ್ಮ ಶಾಲೆಯಲ್ಲಿ ಪಕ್ಷಿಗಳು ಕಿಚ ಕಿಚ ಎಂದು ಸದ್ದು ಮಾಡುತ್ತವೆ. ನಮ್ಮ ಪ್ರಕೃತಿ ಚನ್ನಾಗಿದೆ.
-ರಂಜಿತಾ ಎನ್.
8ನೇ ತರಗತಿ
****************************************************

ಬಣ್ಣದ ಶಾಲೆ
ನನ್ನ ಶಾಲೆ
ಬಣ್ಣದ ಶಾಲೆ
ನಮ್ಮೆಲ್ಲರ ಶಾಲೆ
-ಸುದೀಪ್ ಪಿ.
8ನೇ ತರಗತಿ
****************************************************

2014ರ ನೋಬೆಲ್ ಶಾಂತಿ ಪುರಸ್ಕಾರ

ನೋಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸುತ್ತಿರುವ 
ಮಲಾಲ ಯೂಸಫ್‍ಝೈ ಮತ್ತು ಕೈಲಾಸ್ ಸತ್ಯಾರ್ಥಿ

ಕೈಲಾಸ್ ಸತ್ಯಾರ್ಥಿ  
ಪ್ರೀತಿಯ ಮಕ್ಕಳೆ, ಕೈಲಾಸ್ ಸತ್ಯಾರ್ಥಿ ಎಂಬ ಹೆಸರು ಎರಡು ತಿಂಗಳ ಹಿಂದೆ ಭಾರತದಲ್ಲಿ ಅಷ್ಟೇನೂ ಪರಿಚಿತವಲ್ಲದ ಹೆಸರು. 2014ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ ಪ್ರಕಟವಾದಾಗ ಹಳೆಯ ಸಿನಿಮಾಗಳಲ್ಲಿ ದೇವರು ದಿಢೀರನೇ ಪ್ರತ್ಯಕ್ಷವಾಗುವಂತೆ ನಮಗೆಲ್ಲ ಆ ಹೆಸರು ಕಣ್ಮಣಿಯಾಯಿತು ನೋಡಿ! 
ಕಳೆದ 34ವರ್ಷಗಳಿಂದ ಮಕ್ಕಳ ಹಕ್ಕುಗಳಿಗಾಗಿ ನಿಷ್ಠೆಯಿಂದ ಹೋರಾಡುತ್ತಿರುವ ಕೈಲಾಸ್ ಸತ್ಯಾರ್ಥಿಯವರು ಆರಂಭಿಸಿದ “ಬಚಪನ್ ಬಚಾವೋ ಆಂದೋಲನ”ದ ಮೂಲಕ 80ಸಾವಿರಕ್ಕೂ ಹೆಚ್ಚು ಬಾಲ ಕಾರ್ಮಿಕರ ಮುಕ್ತಿ ಮತ್ತು ಪುನರ್ವಸತಿಗಾಗಿ ದುಡಿಯುತ್ತಿದ್ದಾರೆ. ಆ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಒದಗಿಸಿ ಹೊಸ ಜೀವನವನ್ನು ಕಲ್ಪಿಸಿಕೊಟ್ಟಿದ್ದಾರೆ.
1954 ಜನವರಿ 11ರಂದು ಮಧ್ಯಪ್ರದೇಶದ ವಿದಿಶಾದಲ್ಲಿ ಜನಿಸಿರುವ ಕೈಲಾಸ್ ಸತ್ಯಾರ್ಥಿಯವರು ತನ್ನ ಜೀವನವನ್ನು ಮಕ್ಕಳಿಗಾಗಿ ಮುಡಿಪಾಗಿಟ್ಟವರು. ಇದೇ ಕಾರ್ಯಕ್ಕಾಗಿ ಅವರಿಗೆ 2014ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಈ ಪ್ರಶಸ್ತಿಯನ್ನು ಅವರು ಪಾಕಿಸ್ತಾನದ 17ವರ್ಷದ ಬಾಲಕಿ ಮಲಾಲ ಯೂಸಫ್‍ಝೈ ಅವರೊಂದಿಗೆ ಹಂಚಿಕೊಂಡಿದ್ದಾರೆ.
ನೋಬೆಲ್‍ನಂತಹ ಅತ್ಯುನ್ನತ ಗೌರವ ದೊರಕುವವರೆಗೂ ನಮ್ಮದೇ ನಾಡಿನ ಇಂಥದ್ದೊಂದು ಮಹಾನ್ ವ್ಯಕ್ತಿತ್ವ ನಮಗೆಲ್ಲ ಪರಿಚಯವೇ ಇಲ್ಲವೆನ್ನುವುದು ನಮ್ಮ ದೌರ್ಭಾಗ್ಯವಲ್ಲದೆ ಮತ್ತೇನು?

ಮಲಾಲ ಯೂಸಫ್‍ಝೈ
ಎರಡು ವರ್ಷಗಳ ಕೆಳಗೆ ಅಂದರೆ 2012ರ ಅಕ್ಟೋಬರ್ 9ರಂದು ತಾಲಿಬಾನ್ ಉಗ್ರಗಾಮಿಗಳು ಮಲಾಲ ಶಾಲೆಯಿಂದ ಬಸ್ಸಿನಲ್ಲಿ ಬರುವಾಗ ಗುಂಡಿನ ದಾಳಿ ನಡೆಸಿದರು. ಮಲಾಲಳ ತಲೆ, ಕುತ್ತಿಗೆಗೆ ಗುಂಡು ತಗುಲಿ ಪ್ರಜ್ಞಾಹೀನ ಸ್ಥಿತಿಗೆ ಜಾರಿದಳು. ಅವಳನ್ನು ಇಂಗ್ಲೆಂಡಿನ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸಿದ ಮಲಾಲ ನಿಧಾನಕ್ಕೆ ಗುಣಮುಖವಾದಳು.
ಮಲಾಲ ಹುಟ್ಟಿದ್ದು 1997ರ ಜುಲೈ 12ರಂದು. ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಮಿಂಗೋರ ಗ್ರಾಮದಲ್ಲಿ. ಸ್ವಾತ್ ಕಣಿವೆ ತಾಲಿಬಾನ್ ಉಗ್ರರ ಹಿಡಿತದಲ್ಲಿರುವ ಪ್ರದೇಶ. ಮಲಾಲ ತನ್ನ 10-12ನೇ ವಯಸ್ಸಿನಲ್ಲಿ ತಾಲಿಬಾನ್ ಆಡಳಿತ ಮತ್ತು ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಗುಪ್ತ ಹೆಸರಿಟ್ಟುಕೊಂಡು ಪ್ರತಿಷ್ಠಿತ ಃಃಅ ಸುದ್ಧಿ ಸಂಸ್ಥೆಗೆ ಸತತವಾಗಿ ಲೇಖನಗಳನ್ನು ಬರೆಯತೊಡಗಿದಳು. ಇದೇ ಕಾರಣಕ್ಕಾಗಿ ತಾಲಿಬಾನ್ ಉಗ್ರರು ಅವಳ ಮೇಲೆ ಗುಂಡಿನ ಮಳೆಗರೆದರು.
ತಾನು ಸಂಪೂರ್ಣ ಗುಣಮುಖವಾದ ಮೇಲೆ ಇಂಗ್ಲೆಂಡಿನಲ್ಲಿಯೇ ನೆಲೆಸಿ ಮಹಿಳೆಯರ ಹಕ್ಕು, ಶಿಕ್ಷಣಕ್ಕಾಗಿ ದುಡಿಯುತ್ತಿರುವ ಮಲಾಲ ಇಂದು ಜಗತ್ತಿನಾದ್ಯಂತ ಕೋಟ್ಯಾಂತರ ಮಕ್ಕಳ ಕಣ್ಮಣಿಯಾಗಿದ್ದಾಳೆ. ಅತೀ ಕಿರಿಯ ವಯಸ್ಸಿಗೆ ಅಂದರೆ 17ನೇ ವಯಸ್ಸಿಗೇ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯುತ್ತಾಳೆ. ಈ ಪ್ರಶಸ್ತಿಯನ್ನು ಮಕ್ಕಳಿಗಾಗಿಯೇ ಜೀವನವ ಮುಡಿಪಾಗಿಟ್ಟಿರುವ ಕೈಲಾಸ್ ಸತ್ಯಾರ್ಥಿಯವರೊಂದಿಗೆ ಹಂಚಿಕೊಂಡರು.
ಈ ಇಬ್ಬರು ಮಹನೀಯರಿಗೆ ನಾವೆಲ್ಲ ಅಭಿನಂದನೆ ಹೇಳಿ ಸುಮ್ಮನಾಗದೆ ಅವರ ಮಾರ್ಗವನ್ನು ನಮ್ಮ ಜೀವನದಲ್ಲಿ ಅನುಸರಿಸಲು ಯತ್ನಿಸೋಣ.
ಕೈಲಾಸ್ ಸತ್ಯಾರ್ಥಿ ಮತ್ತು ಮಲಾಲ
*********************************************************************************

ಬೆನ್ಬಲ


ನಮಸ್ತೆ...
ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಬಹಳ ದೊಡ್ಡ ಕೆಲಸ ನಿಮ್ಮದು. ‘ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ತೋರಿಸಲು ವೀರ ನಾರಿಯಂತೆ ಹೋರಾಡಲು ಸಾಧ್ಯವಿಲ್ಲ’ ಎಂಬ ಅನಿತಾ ಅವರ ಮಾತು ಅದೆಷ್ಟು ನಿಜವೆಂದು ಯೋಚಿಸಿ ಬಹಳ ಸಂಕಟವಾಯಿತು.
-ಬೊಳುವಾರು ಮಹಮದ್ ಕುಂಞಿ
ಹಿರಿಯ ಸಾಹಿತಿಗಳು ಬೆಂಗಳೂರು.

ಅಳ್ಳೀಮರ ನೋಡಿದೆ. ಸಂತಸಪಟ್ಟೆ. ಕವಿತೆಗಳು, ಪ್ರಶಸ್ತಿ ಪಡೆದ ಪುಟ್ಟಿಯ ಬಗ್ಗೆ ಓದಿದೆ. ಒಳಿತಾಗಲಿ
-ನಾ. ಡಿಸೋಜ
ಹಿರಿಯ ಸಾಹಿತಿಗಳು ಸಾಗರ.

ಪುಟ ಪುಟವೂ ಮಕ್ಕಳ ಮನಸಿನ ವಿಸ್ಮಯ, ಆಂತಕ, ಸಂಭ್ರಮ ಬಿಡಿಸಿಡುವ ಶ್ರದ್ಧೆಗೆ ಧನ್ಯವಾದಗಳು.
-ರೂಪ ಹಾಸನ
ಮಕ್ಕಳ ಶಿಕ್ಷಣ ಹೋರಾಟಗಾರರು, ಕವಯಿತ್ರಿ.

ಶರಧಿಯ ಸಾಧನೆ ಸ್ಫೂರ್ತಿದಾಯಕ
-ತ್ರಿವೇಣಿ ಕೆ.
ಉಪನ್ಯಾಸಕರು, ಡಯಟ್ ಮಯ್ಸೂರು.
*********************************************************************************
ನಾಳೆಗಳು ನಮ್ಮದು...
ಮಲಾಲ ಮತ್ತು ಕೈಲಾಸ್ ಸತ್ಯಾರ್ಥಿಯವರಿಗೆ ನೋಬೆಲ್ ಶಾಂತಿ ಪುರಸ್ಕಾರ ದೊರಕಿದೆ. ಇಬ್ಬರೂ ಮಕ್ಕಳಿಗಾಗಿ ಮಿಡಿಯುವವರು. ಮಕ್ಕಳ ಬದುಕು ಬಾಲ್ಯ ನಾನಾ ಕಾರಣಗಳಿಗಾಗಿ ಸಂಕೀರ್ಣ ಸ್ಥಿತಿಯಲ್ಲಿರುವ ಈ ಕಾಲಘಟ್ಟದಲ್ಲಿ ನೋಬೆಲ್ ಶಾಂತಿ ಪುರಸ್ಕಾರ ಆಸರೆಯಂತೆ ಕಂಡಿದೆ. ಮಕ್ಕಳ ಮೇಲೆ ಅವ್ಯಾಹತ ದೌರ್ಜನ್ಯ, ಮಕ್ಕಳ ಕಳ್ಳತನ, ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳಲ್ಪಡುತ್ತಿರುವ ಕ್ರೂರ ಸಮಾಜದೊಳಗೆ ಕೈಲಾಸ್ ಸತ್ಯಾರ್ಥಿ, ಮಲಾಲರಂತಹ ಸಾವಿರಾರು ಜೀವಗಳು ಹುಟ್ಟಿಕೊಳ್ಳಲಿ, ನಾಳಿನ ಜಗದೊಳಗೆ ಮಕ್ಕಳು ನಿರಾತಂಕವಾಗಿ ಬದುಕುವಂತಾಗಲಿ ಎಂಬ ಆಶಯದೊಂದಿಗೆ...
-ಸಂಪಾದಕ
*********************************************************************************
ಈ ಸಂಚಿಕೆಯ ಪ್ರಕಟಣೆಗೆ ನೆರವು ನೀಡಿದವರು ಶ್ರೀ ಕೆ. ಎಂ. ಎಂ. ರಾಜು ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಜಯನಗರ ಬೆಂಗಳೂರು.
*********************************************************************************