Monday, 21 July 2014


ಸಂಚಿಕೆ -9. ಜುಲೈ 2014



ಗಿಡ್ಡ ಕುದುರೆ ಮತ್ತು ನವಿಲು

ಒಂದು ಹಳ್ಳಿ ಇತ್ತು. ಅಲ್ಲಿ ಗಿಡ್ಡ ಕುದುರೆ ಮತ್ತು ನವಿಲು ಇದ್ದರು. ಅವರು ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದಿಲ್ಲ. ಒಂದು ಸಲ ನವಿಲಿಗೆ ಮೂರು ಮಕ್ಕಳಾದವು. ಆಗ ಗಿಡ್ಡಕುದುರೆ ಕೇಳಿತು ನಿನ್ನ ಮರಿಗಳಿಗೆ ಯಾವ ಹೆಸರು ಇಡುವೆ? ಅಲ್ಲಿ ಮೂರು ಮರಿಗಳಿದ್ದವು. ಒಂದು ಮರಿ ಬೋಳು ತರ ಕಾಣಿಸಿತು. ಅದಕ್ಕೆ ಬೊಗಳಪ್ಪ, ಎರಡನೇ ಮರಿಗೆ ತೆಗಳಪ್ಪ ಮೂರನೇ ಮರಿಗೆ ಕರಿಯಪ್ಪ ಎಂದು ಇಡೋಣವೇ ಎಂದು ಕೇಳಿತು. ಆಯಿತು ಎಂದಿತು ಗಿಡ್ಡಕುದುರೆ. ನವಿಲು ಮಕ್ಕಳಿಗಾಗಿ ಒಂದು ಹಾಡು ಹೇಳಿತು.
ಮಕ್ಕಳೇ ನೀವು ನಕ್ಕರೆ...
ಬದುಕು ಹಾಲು ಸಕ್ಕರೆ...

- ಶಿಲ್ಪ ಎಸ್.
9ನೇ ತರಗತಿ, ಹೆಗ್ಗಡಹಳ್ಳಿ


ನಾನೋದಿದ ಪುಸ್ತಕ

ಸಾಂಬಶಿವ ಪ್ರಹಸನ
ಲೇಖಕರು : ಚಂದ್ರಶೇಖರ ಕಂಬಾರ
ಸಾಂಬಶಿವ ಪ್ರಹಸನ ನಾಟಕವು ಒಂದು ನಗೆನಾಟಕ. ಈ ನಾಟಕದಲ್ಲಿ ಮನೋರಂಜನೆ, ಪ್ರೇಮ, ರಾಜಕೀಯ ಇದೆ. ಮಾತಿವೆ ಹಾಡಿವೆ ಕುಣಿತವಿದೆ ಸರ್ಕಸ್ಸಿದೆ. ಗಂಡಸರಿದ್ದಾರೆ ಹೆಂಗಸರಿದ್ದಾರೆ ಎರಡೂ ಅಲ್ಲದ ಮೂರನೆಯವರೂ ಇದ್ದಾರೆ. ಈ ನಾಟಕದ ತುಂಬ ನಗು.

- ಸಂಜಯ್ ಜೆ.
10ನೇ ತರಗತಿ, ಹೆಗ್ಗಡಹಳ್ಳಿ.


ನಮ್ಮ ಶಾಲೆ ಬಣ್ಣ ಬಣ್ಣ
ನಮ್ಮ ಶಾಲೆಯ ಪಕ್ಷಿಗಳು ಬಣ್ಣ ಬಣ್ಣ

ನಮ್ಮ ಶಾಲೆಯ ಅಳ್ಳೀಮರ ದಪ್ಪ ದಪ್ಪ
ನಮ್ಮ ಶಾಲೆಯಲ್ಲಿ ಪಕ್ಷಿಗಳು
ಕಿರುಚಾಡಿದರೆ ಚೆನ್ನ
ಮೈನಾ ಪಕ್ಷಿ ಕೂಗಿದರೆ ಚೆನ್ನ
ಶಾಲೆಯಲ್ಲಿ ಹಾಲು ಚೆನ್ನ ಹಾಲನ್ನು
ಕುಡಿಯದೆ ಇದ್ದರೆ ಬಲು ಸಣ್ಣ
ಅಕ್ಷರ ಅನ್ನ ಆರೋಗ್ಯ ಚಿನ್ನ
ಓದುವುದು ಚೆನ್ನ ಓದದೆ ಇದ್ರೆ
ಮೇಸ್ಟ್ರು ಮತ್ತು ಮೇಡಂಗೆ
ಬಲು ಕೋಪ ಆದಾಗ ನಮ್ಮ
ಕೈ ಕೆಂಪು
ನಮ್ಮ ಶಾಲೆ ಎಂದರೆ ಹೆಗ್ಗಡಹಳ್ಳಿ ಶಾಲೆ
ಹೆಗ್ಗಡಹಳ್ಳಿ ಶಾಲೆ ಬಲು ದೊಡ್ಡದು
ಅದರಲ್ಲಿ ಮಕ್ಕಳು ಆಟ ಆಡುತ್ತಾರೆ
ಆದ್ದರಿಂದ ಚೆನ್ನ ಚೆನ್ನ
ಹೆಗ್ಗಡಹಳ್ಳಿ ಶಾಲೆ ಚೆನ್ನ ಚೆನ್ನ

ಮಹೇಶ್ ಕುಮಾರ್, ರಾಜು ಡಿ. ಆರ್.,
ನಾಗರಾಜು ಡಿ. ಸಿ., ಮಣಿಕಂಠ ಪಿ.
10ನೇ ತರಗತಿ, ಹೆಗ್ಗಡಹಳ್ಳಿ


ಅಳ್ಳೀಮರ


ಬಾ ಬಾ ಅರಳೀಮರವೇ
ನೀ ಬಾರದೇ ಎರಡು ತಿಂಗಳ
ಕಾಲ ನನಗೇನು ತೋರದೆ

ನೀ ಬಾರದೇ ನನ್ನ ಮನಸ್ಸಿಗೆ
ಸಂತಸ ತಾರದೆ

ನಿನ್ನ ನುಡಿ ಮುತ್ತು ಕೇಳದೆ
ನನಗೆ ದಾರಿಯೇ ತೋರದೆ

ನಿನ್ನ ನೋಡುತ್ತಾ ಚಿಂತೆ ಮರೆತೆ
ನಿನ್ನ ನೋಡುವ ದಾರಿಯ ಕಾದೆ

ನಿನ್ನಂತೆ ಯಾರು ಇಲ್ಲ
ನೀನಾಡದ ಮಾತುಗಳೇ ಇಲ್ಲ

ಬಾ ಬಾ ಅಳ್ಳೀಮರವೇ
ಎರಡು ತಿಂಗಳ ಬಳಿಕ ಸಂತಸ ತಾ.

- ರಾಜಶೇಖರ್ ಎಸ್.
10ನೇ ತರಗತಿ, ಹೆಗ್ಗಡಹಳ್ಳಿ



 ಮಕ್ಕಳು ಹೇಳಿದ ಶುಭಾಶಯಗಳು

ರಾಜನ ಸುಪ್ರಭಾತ


ಮುಂಗೋಳಿ ಕೂಗುವುದು ಮುಂಬೆಳಕು ಮೂಡುವುದು
ಚಾಪೆಯಿಂದೆದ್ದೇಳು ರಾಜಾ ನಮ್ಮ ರಾಜಾ

ಸುಖ ನಿದ್ದೆ ಸಾಕಿನ್ನು ಸ್ವಪ್ನಕ್ಕೆ ಬೈ ಎನ್ನು
ಕಣ್ಣುಗಳ ತೆರೆದುಕೋ ರಾಜಾ ನಮ್ಮ ರಾಜಾ

ಕೈಕಾಲು ಮುಖ ತೊಳೆದು ಪಾಠ ಪುಸ್ತಕ ತೆಗೆದು
ಅಭ್ಯಾಸ ಮಾಡಯ್ಯ ರಾಜಾ ನಮ್ಮ ರಾಜಾ

ಚೆನ್ನಾಗಿ ಮಿಂದು ಬಾ ಸಮವಸ್ತ್ರ ತೊಟ್ಟುಬಾ
ತಿಂಡಿ ತಿನ್ನಲು ಕೂಡು ರಾಜಾ ನಮ್ಮ ರಾಜಾ

ಶೂಗಳನು ಕಟ್ಟಿಕೋ ಚೀಲವನು ಎತ್ತಿಕೋ
ಶಾಲೆಕಡೆ ಹೆಜ್ಜೆಯಿಡು ರಾಜಾ ನಮ್ಮ ರಾಜಾ

ನಿಜವೆಂದ್ರೆ ನನ್ನವ್ವ ಈವತ್ತು ರವಿವಾರ
ಶಾಲೆಗೆ ರಜಾ ಎನುವ ರಾಜಾ ನಮ್ಮ ರಾಜಾ

ಅಕಟಕಟ! ವಾರಕ್ಕೆ ಒಂದೆ ರವಿವಾರಕಣ
ಅದು ನಿನ್ನೆಗಾಯಿತ್ತು ರಾಜಾ ನಮ್ಮ ರಾಜಾ!

--ಕೆ. ವಿ. ತಿರುಮಲೇಶ್
(ಕನ್ನಡದ ಹಿರಿಯ ಕವಿ ನಮ್ಮ ಮಕ್ಕಳಿಗಾಗಿ ಬರೆದುಕೊಟ್ಟಿರುವ ಪದ್ಯ. )



ಅಮೃತ ಎಚ್. ಎಸ್.

ಈ ಬಾರಿ ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ. ಅವಳ ಭವಿಷ್ಯ ಸುಂದರವಾಗಿರಲೆಂದು ‘ಅಳ್ಳೀಮರ’ದ ಹಾರೈಕೆಗಳು

ನ್ಯಾಯ ಎಲ್ಲಿದೆ?

ಒಂದು ಕಾಡಿನಲ್ಲಿ ಕೋತಿ ಮತ್ತು ಗೌಜಲಕ್ಕಿ ಶತ್ರುಗಳಾಗಿರುತ್ತಾರೆ. ಒಂದು ದಿವಸ ಮಳೆ ಬಂದ ಕಾರಣ ಹಕ್ಕಿಗಳು ಬೇಲಿಯಲ್ಲಿ ಗೂಡು ಮಾಡಿರುತ್ತವೆ. ಆಗ ಕೋತಿಗಳು ಗೂಡನ್ನು ಹಾಳು ಮಾಡುತ್ತವೆ. ಆಗ ಹಕ್ಕಿಗಳು ಪಂಚಾಯಿತಿ ಅಧ್ಯಕ್ಷ ನರಿಯತ್ತ ನ್ಯಾಯ ಕೇಳಲು ಹೋಗುತ್ತವೆ. ಆಗ ನರಿಯು ಕೋತಿಗಳನ್ನು ಪಂಚಾಯಿತಿಗೆ ಬರ ಹೇಳುತ್ತದೆ. ಮೊದಲನೆ ದಿನ ಯಾವುದೇ ಸಾಕ್ಷಿ ಸಿಗದೆ ಇರುವುದರಿಂದ ನಾಳೆ ಬನ್ನಿ ಎಂದು ಹೇಳುತ್ತದೆ. ಆಗ ಕೋತಿಗಳು ಒಂದು ಉಪಾಯವನ್ನು ಯೋಚಿಸಿ ನರಿಯು ಕುಳಿತುಕೊಂಡು ನ್ಯಾಯ ಹೇಳುವ ಜಾಗದ ಹಿಂದೆ ಒಂದು ಹಲಸಿನ ಹಣ್ಣನ್ನು ಬಗೆದು ಇಟ್ಟಿರುತ್ತವೆ. ಆಗ ನರಿಯು ನ್ಯಾಯ ಹೇಳಲು ಬರುತ್ತದೆ. ಆಗ ಕೋತಿಗಳು ಅಧ್ಯಕ್ಷರೇ ನ್ಯಾಯ ಹೇಳುವಾಗ ಹಿಂದೆ ಮುಂದೆ ನೋಡಿ ಹೇಳಿ ಎಂದು ಹೇಳುತ್ತವೆ. ಆಗ ನರಿಯು ಹಿಂದೆ ತಿರುಗಿ ನೋಡುತ್ತದೆ. ಆಗ ಹಲಸಿನ ಹಣ್ಣನ್ನು ನೋಡಿ ಕೋತಿಗಳ ಕಡೆಗೆ ನ್ಯಾಯ ಹೇಳುತ್ತದೆ. ಗೌಜಲಹಕ್ಕಿಗಳು ಹಿಂತಿರುಗಿ ಗೂಡಿಗೆ ಹೋಗುತ್ತವೆ.

-ಜಗದೀಶ
10ನೇ ತರಗತಿ, ಹೆಗ್ಗಡಹಳ್ಳಿ

ಒಡನಾಟ

ಒಂದಾನೊಂದು ಕಾಡಿನಲ್ಲಿ ಒಂದು ಪುಟ್ಟ ಮರದಲ್ಲಿ ಎರಡು ಗುಬ್ಬಚ್ಚಿಗಳಿದ್ದವು. ತಾಯಿ ಗುಬ್ಬಚ್ಚಿ ಮತ್ತು ಮರಿಗುಬ್ಬಿ. ಈ ಎರಡು ಗುಬ್ಬಚ್ಚಿಗಳು ಸುತ್ತಮುತ್ತಲಿನ ಎಲ್ಲಾ ಪ್ರಾಣಿಗಳೊಂದಿಗೆ ಒಡನಾಟ ಹೊಂದಿದ್ದವು. ಒಂದು ದಿನ ಅಮ್ಮ ಗುಬ್ಬಚ್ಚಿ ಆಹಾರ ಹುಡುಕಿಕೊಂಡು ಮರದ ಪೊಟರೆಯಿಂದ ಹೊರ ಹೋಯಿತು. ಇದನ್ನು ಕಂಡ ನರಿಗೆ ಆ ಮರಿ ಗುಬ್ಬಿಯನ್ನು ಹೇಗಾದರೂ ತಾಯಿಂದ ದೂರಮಾಡಿ ಅದನ್ನು ನಾನು ತಿನ್ನಲೇಬೇಕೆಂದು ದುರಾಸೆ ಹುಟ್ಟುತ್ತದೆ. ಹೀಗೆ ಕೆಲವು ದಿನಗಳ ನಂತರ ಗುಬ್ಬಚ್ಚಿ ಆಹಾರ ಹುಡುಕಲು ಹೊರ ಹೋದಾಗ ನರಿಯು ಮರಿಗುಬ್ಬಿಯನ್ನು ಕರೆದು “ಓ ಗುಬ್ಬಿಮರಿ ಹೊರಗೆ ಬಾ ನಿನ್ನ ಜೊತೆ ಆಟವಾಡಲು ನಾನು ನರಿಯಣ್ಣ ಬಂದಿದ್ದೇನೆ ಬಾ” ಎಂದು ಕರೆಯುತ್ತದೆ. ಆಗ ಮರಿಗುಬ್ಬಿ ಹೊರ ಬಂದು “ನೀನ್ಯಾರು?” ಎಂದು ಕೇಳಿದಾಗ ನರಿ “ನಾನು ನರಿಯಣ್ಣ ನಿನ್ನ ಗೆಳೆಯ” ಎಂದು ಹೇಳುತ್ತದೆ. ಇದನ್ನು ನಂಬಿದ ಗುಬ್ಬಿಮರಿ ಪೊಟರೆಯಿಂದ ಹೊರ ಬರುತ್ತದೆ. ಇದೇ ಸರಿಯಾದ ಸಮಯವೆಂದು ನರಿಯು “ಬಾ ಗುಬ್ಬಿಮರಿ ಹೊರಗೆ ಹೋಗಿ ಸುತ್ತಾಡಿ ಬರೋಣ” ಎಂದು ಹೇಳಿದಾಗ ಗುಬ್ಬಿಮರಿ “ಇಲ್ಲ ಅಮ್ಮ ಬರುವ ಹೊತ್ತಾಗಿದೆ ನಿನ್ನೊಡನೆ ಬಂದರೆ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ” ಎಂದು ಹೇಳುತ್ತದೆ. ಆಗ ನರಿಯು “ಇಲ್ಲ ಗುಬ್ಬಿಮರಿ ನಿನ್ನಮ್ಮ ನನ್ನ ಗುಹೆಯಲ್ಲಿಯೇ ಇದ್ದಾಳೆ ನಿನ್ನನ್ನು ಅಲ್ಲಿಗೆ ಕರೆದುಕೊಂಡು ಬಾ ಎಂದು ಹೇಳಿದ್ದಾಳೆ” ಎಂದು ಹೇಳುತ್ತದೆ. ಆಗ ಇದು ನಿಜವೆಂದು ನಂಬಿ ಗುಬ್ಬಿಮರಿ ನರಿಯ ಜೊತೆ ಹೊರಟು ಹೋಗುತ್ತದೆ.
ಆಗ ಬಂದ ತಾಯಿ ಗುಬ್ಬಿ ತನ್ನ ಮರಿಯನ್ನು ಕೂಗುತ್ತದೆ. ಗುಬ್ಬಿಮರಿ ಪೊಟರೆಯಲ್ಲಿ ಇಲ್ಲದೇ ಇದ್ದುದ್ದನ್ನು ಕಂಡು ತಾಯಿ ಗುಬ್ಬಚ್ಚಿಗೆ ಆತಂಕವಾಗುತ್ತದೆ. ಆಗ ಸುತ್ತಮುತ್ತ ಎಷ್ಟೇ ಹುಡುಕಿದರೂ ಸಿಕ್ಕಲೇ ಇಲ್ಲ. ಗುಬ್ಬಿಮರಿಯನ್ನು ನರಿ ಕರೆದುಕೊಂಡು ತನ್ನ ಗುಹೆಯಲ್ಲಿ ಇಟ್ಟಿರುವುದನ್ನು ಕಂಡ ಗಿಳಿಯು ತಾಯಿ ಗುಬ್ಬಚ್ಚಿಗೆ ವಿಷಯವನ್ನು ಹೇಳುತ್ತದೆ. ತಾಯಿ ಗುಬ್ಬಚ್ಚಿ ತಕ್ಷಣ ಹಾರಿ ನರಿಯ ಗುಹೆಯ ಬಳಿ ಬಂದು “ಓ.. ಮೋಸಗಾರ ನರಿಯೇ ಹೊರಗೆ ಬಾ ನೀನು ನನ್ನ ಮರಿಗುಬ್ಬಿಗೆ ಏನಾದರೂ ತೊಂದರೆ ಮಾಡಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಕೂಗಿ ಹೇಳುತ್ತದೆ. ನರಿಯು ಹೊರ ಬಂದು “ಏ ಗುಬ್ಬಚ್ಚಿಯೇ ನಿನ್ನ ಮರಿಗುಬ್ಬಿಯನ್ನು ನಾನು ಬಿಡುವುದಿಲ್ಲ. ನೀನು ಬುದ್ಧಿವಂತಾಳದರೆ ನಿನ್ನ ಮರಿಯನ್ನು ಬಿಡಿಸಿಕೊಂಡು ಹೋಗು” ಎಂದು ಹೇಳುತ್ತದೆ. ತಾಯಿ ಗುಬ್ಬಿಗೆ ಏನು ಮಾಡಬೇಕಂಬುದು ತೋಚದೆ ಗಿಳಿಯ ಬಳಿ ಎಲ್ಲವನ್ನೂ ಹೇಳಿದಾಗ ಗಿಳಿಯು ಉಪಾಯದಿಂದ ನರಿಯ ಗುಹೆಯ ಬಳಿ ಹೋಗಿ ನರಿಯು ಹೊರಬರುವುದನ್ನೇ ಕಾಯುತ್ತ ಮರದ ಮೇಲೆ ಕುಳಿತಿತು. ಆಗ ನರಿಯು ಹೊರ ಬಂದು  ಸುತ್ತಮುತ್ತ ನೋಡಿ ಹೊರಗೆ ಹೋಗಿ ಬರುವೆನು ಎಂದು ತಾನೆ ಮಾತನಾಡಿಕೊಂಡು ಹೋಗುತ್ತದೆ. ಇದೇ ಸಂದರ್ಭದಲ್ಲಿ ಗಿಳಿಯು ಹಾರಿ ಬಂದು ಗುಹೆಯ ಒಳಗೆ ಇದ್ದಂತ ಗುಬ್ಬಿಮರಿಯನ್ನು ಮೆಲ್ಲಗೆ ಕರೆದುಕೊಂಡು ತಾಯಿ ಗುಬ್ಬಿಯ ಬಳಿ ಬಿಡುತ್ತದೆ. ತಾಯಿಗುಬ್ಬಿಗೆ ಇದರಿಂದ ಸಂತೋಷವಾಗುತ್ತದೆ.

-ಅನಿತಾ ಎಚ್. ಕೆ.
10ನೇ ತರಗತಿ, ಹೆಗ್ಗಡಹಳ್ಳಿ


 

ಹೇಗಿದೆ ಗಿಳಿ ಮರಿ?


ಇವನು ಸುರೇಶ. ನಮ್ಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ. ಶಾಲೆಯ ಸುತ್ತ ಮುತ್ತ ಸಿಗುವ ಎಕ್ಕದ ಕಾಯಿ, ಎಲೆ. ಗಸಗಸೆ ಕಾಯಿ, ಹೂವು ಬಳಸಿ ಮಾಡಿದ ಗಿಳಿಮರಿ. ನಿಜದ ಗಿಳಿಯನ್ನೇ ನಾಚಿಸುವ ಸುರೇಶನ ನಾಟಿ ಗಿಳಿಯನ್ನೊಮ್ಮೆ ನೋಡಿ.

ನಾಳೆಗಳು ನಮ್ಮದು

‘ಅಳ್ಳೀಮರ’ದ ನೆರಳಲ್ಲಾಡಿದ ಒಂದಷ್ಟು ಮಕ್ಕಳು ಬದುಕಿನ ಹೊಸ ಹಾದಿ ಹುಡುಕಿ ಹೊರಟರೆ, ಮತ್ತಷ್ಟು ಹೊಸ ಮಕ್ಕಳು ನೆರಳಿಗೆ ಬಂದಿದ್ದಾರೆ. ಬಂದವರಿಗೆಲ್ಲ ನೆರಳನೀವ ‘ಅಳ್ಳೀಮರ’ ವರುಷ ತುಂಬಿ ಮತ್ತೆ ಚಿಗುರಿದೆ.
ಹಿರಿಯರಾದ ಶ್ರೀ ಕೆ.ವಿ. ತಿರುಮಲೇಶ್ ಅವರು ನಮ್ಮ ಮಕ್ಕಳಿಗಾಗಿ ಸುಂದರವಾದ ಪದ್ಯವನ್ನು ಕಳಿಸಿದ್ದಾರೆ. ಎಂದಿನಂತೆ ನಮ್ಮ ಮಕ್ಕಳು ಲವಲವಿಕೆಯಿಂದ ಬರೆದ ಬರಹಗಳಿವೆ. ಬೇರೆ ಶಾಲೆಯ ಮಕ್ಕಳ ಬರಹಕ್ಕೂ ಸ್ವಾಗತ. ಕ್ರಿಯಾಶೀಲ ಶಿಕ್ಷಕ ಬಂಧುಗಳೆ ನಿಮ್ಮ ವಿದ್ಯಾರ್ಥಿಗಳ ಚಟುವಟಿಕೆ ನಮಗೂ ಕಳುಹಿಸಿ ಎನ್ನುತ್ತಾ ಹೊಸ ಸಂಚಿಕೆಯೊಂದಿಗೆ ನಿಮ್ಮ ಮುಂದೆ. ಹೇಗನಿಸಿತು ತಿಳಿಸಿ...,

-ಸಂಪಾದಕ