Sunday, 28 September 2014



ಮಕ್ಕಳ ದಸರಾ -2014

ಮೈನಾ ರಂಗ ಬಳಗ ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿ.
ದಿನಾಂಕ 27-09-2014ರ ಶನಿವಾರ ಮಯ್ಸೂರಿನ ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ 2014ರ ಉದ್ಘಾಟನಾ ಸಮಾರಂಭ ನಡೆಯಿತು. ನಾಲ್ಕು ದಿನಗಳ ಕಾಲ ನಡೆಯುವ ಈ ಮಕ್ಕಳ ದಸರೆಯಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಮ್ಮ ಶಾಲೆಯ ಮೈನಾ ರಂಗ ಬಳಗದ ಸದಸ್ಯರಿಂದ ಈ ಬಾರಿಯ ಮಕ್ಕಳ ದಸರೆಯಲ್ಲಿ ಮೊದಲ ಸಾಂಸ್ಕೃತಿಕ ಕಾರ್ಯಕ್ರಮ ಎರಡು ಕಿರುನಾಟಕಗಳ ಪ್ರದರ್ಶನ ನಡೆಯಿತು. ಶಿಕ್ಷಣ ಇಲಾಖೆಯವರೆ ನಮ್ಮ ಶಾಲೆಯನ್ನು ಆಯ್ದುಕೊಂಡು ವರ್ತಮಾನದ ಎರಡು ಪ್ರಮುಖ ವಿಷಯಗಳನ್ನು ನೀಡಿ ನಾಟಕ ಮಾಡಲು ತಿಳಿಸಿದ್ದರು. ಅದರಂತೆ ನಾವು ಮೈನಾ ರಂಗ ಬಳಗದ ಗೆಳೆಯರು "ಶಿಕ್ಷಣ ಹಕ್ಕು ಕಾಯಿದೆ" ಹಾಗೂ "ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ" ವಿಷಯಗಳಿಗೆ ಎರಡು ಕಿರುನಾಟಕದ ತಯಾರಿ ನಡೆಸಿದೆವು.

ಒಂದೆಡೆ ಮಧ್ಯವಾರ್ಷಿಕ ಪರೀಕ್ಷೆ, ಇನ್ನೊಂದೆಡೆ ವಿಜ್ಞಾನ ನಾಟಕ ಸ್ಪರ್ಧೆ, ಮತ್ತೊಂದೆಡೆ ಪ್ರತಿಭಾಕಾರಂಜಿಯ ತಯಾರಿ. ಇದರ ನಡುವೆಯೆ ದಸರಾ ರಜೆಯ ಆರಂಭ! ಇವೆಲ್ಲದರ ನಡುವೆ ನಮ್ಮ ಉತ್ಸಾಹ ಮಾತ್ರ ಚೂರೂ ಕುಂದಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ನಮ್ಮ ಮೇಲಿರಿಸಿದ ಭರವಸೆ, ಮತ್ತು ಜಗನ್ಮೋಹನ ಅರಮನೆ, ಮತ್ತು ಮಕ್ಕಳ ದಸರಾದಲ್ಲಿ ನೆರೆಯುವ ಸಾವಿರಾರು ಮಕ್ಕಳೆದುರು ನಿಲ್ಲುವ ಕ್ಷಣಗಳನ್ನು ಕಲ್ಪಿಸಿಕೊಂಡು ಪುಳಕಗೊಳ್ಳುತ್ತಾ ದಸರಾ ರಜೆ, ಶನಿವಾರ ಭಾನುವಾರಗಳೆನ್ನದೆ ಬುತ್ತಿ ಕಟ್ಟಿಕೊಂಡು ಇಡೀ ದಿನವಿದ್ದು ತಾಲೀಮು ನಡೆಸಿದೆವು.

ಅಂತೂ ಆ ಅಪೂರ್ವ ಕ್ಷಣ ಬಂದೇ ಬಿಟ್ಟಿತು. 27-09-2014ರ ಮುಂಜಾನೆಯೆ ಶಾಲೆಗೆ ಬಂದು ನಾವು 35 ಜನ ರಂಗ ಬಳಗದ ಗೆಳೆಯರು  ಸಜ್ಜಾಗಿ ಹೆಗ್ಗಡಹಳ್ಳಿಯಿಂದ ಮಯ್ಸೂರ ಕಡೆ ಹೊರಟೆವು. ಅರಮನೆಯಲ್ಲಿ ಸಾವಿರಾರು ಮಕ್ಕಳು, ಹಿರಿಯರು, ಮಂತ್ರಿ ಮಹೋದಯರು ನೆರೆದಿದ್ದರು. 

ಶಿಕ್ಷಣ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ ಅವರು ಮಾತನಾಡುತ್ತಾ "ಈ ಭೂಮಿಯ ಮೇಲೆ ದೇವರು ಅಂತೇನಾದರೂ ಇದ್ದರೆ ಅದು ಮಕ್ಕಳು" ಎಂದರು. ಹೌದು, ಅವರು ವೇದಿಕೆಯ ಮೇಲೆ ಹಾಗೆ ಅದ್ಭುತವಾಗಿ ಮಾತನಾಡುತ್ತಿದ್ದರೆ, ಪ್ರೇಕ್ಷಾಂಗಣದಲ್ಲಿ ಸಾವಿರಾರು ದೇವರುಗಳು ಅವರವರದೇ ಗದ್ದಲದಲ್ಲಿ ಮುಳುಗಿ ಹೋಗಿದ್ದರು. ಅದಕ್ಕೇ ಏನೋ ಸಚಿವರ ಅಪರೂಪದ ಮಾತುಗಳು ಮಯ್ಸೂರಿನ ಮಾಧ್ಯಮ ಮಿತ್ರರಿಗೆ ಕೇಳಿಸದೇ ಹೋದದ್ದು. ಯುವ ದಸರಾದಲ್ಲಿ ಹುಚ್ಚೆದ್ದು ಕುಣಿಯುವ ಕಿರುಚುವುದೇ ಪ್ರಮುಖವಾಗಿ ಹೋಯಿತು.

ಅಂತೂ ಸಭಾ ಕಾರ್ಯಕ್ರಮ ಮುಗಿದು, ಮಕ್ಕಳ ವಿವಿಧ ವೇಷಭೂಷಣ ಸ್ಪರ್ಧೆ ನಡೆದು ವೇದಿಕೆ ಮೈನಾ ರಂಗ ಬಳಗಕ್ಕೆ ತೆರೆದುಕೊಂಡಿತು. "ಶರಣು ಹೇಳೆವ್ರಿ ಸ್ವಾಮಿ ನಾವು ನಿಮಗ" ಎಂಬ ಕಂಬಾರರ ಹಾಡಿನೊಂದಿಗೆ ನಮ್ಮ ಕಾರ್ಯಕ್ರಮ ಆರಂಬಿಸಿದೆವು. 
ಶಿಕ್ಷಣ ಹಕ್ಕು ಕಾಯಿದೆ ಕುರಿತಾದ ಕಿರುನಾಟಕ. ಸರ್ಕಾರಿ ಶಾಲೆ, ಶಾಲೆಗೆ ಮಕ್ಕಳಿಗೆ ಸರ್ಕಾರ ನೀಡುವ ಸೌಲಭ್ಯದ ಕುರಿತು ನಂಜನಗೂಡಿನ ಸಾಮಾನ್ಯ ಹಳ್ಳಿಯ ಜನರು ನೋಡುವ ದೃಷ್ಠಿಕೋನದಲ್ಲಿ ಇಡೀ ನಾಟಕ ಕಟ್ಟಲ್ಪಟ್ಟಿತ್ತು. ಅಂತರಾಳದಲ್ಲಿ ಹೆಣ್ಣು ಮಗಳೊಬ್ಬಳ ಹೋರಾಟ, ಗೌಡನೆನ್ನಿಸಿಕೊಳ್ಳುವ ಗಂಡಸೊಬ್ಬನ ದೌರ್ಜನ್ಯದ ಮೇಲೆ ಬೆಳಕು ಚಲ್ಲುತ್ತಾ ಶಿಕ್ಷಣ ಹಕ್ಕು ಕಾಯಿದೆಯ ಕುರಿತು ನಮ್ಮ ನಾಟಕ ರೂಪುಗೊಂಡಿತ್ತು.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಸ್ವರೂಪ, ಅವುಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಮಹಿಳೆ ಸಂಘಟಿತ ಗೊಳ್ಳುವ ಚಿತ್ರಣದ ನಾಟಕ. ಈ ದೇಶದಲ್ಲಿ ನಡೆಯುವ ಬಾಲ್ಯವಿವಾಹ, ದೌರ್ಜನ್ಯ, ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳನ್ನು ಪ್ರಧಾನವಾಗಿರಿಸಿಕೊಂಡು ಹೆಣೆಯಲ್ಪಟ್ಟ ಈ ರೂಪಕವನ್ನು ನಮ್ಮ ರಂಗಬಳಗದ ಹೆಣ್ಣು ಮಕ್ಕಳೇ ಅಭಿನಯಿಸಿದ್ದರು. ದೌರ್ಜನ್ಯದ ಪ್ರತೀಕವಾಗಿ ನಾಲ್ವರು ಘೋರ ರೂಪಿ ಗಂಡಸಿದ್ದರಷ್ಟೆ.

ಸುಮಾರು 50 ನಿಮಿಷಗಳ ನಮ್ಮ ಪ್ರದರ್ಶನ ಯಶಸ್ವಿಯಾಗಿತ್ತು ಎನ್ನುವುದಕ್ಕೆ ಪ್ರೇಕ್ಷಕ ಸಮೂಹ ನಿಮಿಷಗಳ ಕಾಲದ ಕರತಾಡನವೇ ಸಾಕ್ಷಿಯಾಗಿತ್ತು. ಗೌಡನ ಪಾತ್ರಧಾರಿ ಲೋಕೇಶ ಎಚ್. ಎಂ. ಪರಿಚಯ ಮಾಡುತ್ತಿದ್ದಂತೆ ಇಡೀ ಸಭಾಂಗಣ ಮುಗಿಲುಮುಟ್ಟುವಂತೆ ಕೂಗಿತು.ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿರೂಪಿಸಿದರು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಡಾ. ಡಿ. ವಿ. ಕಾಂತ ಅವರಿಗೆ ಪ್ರೇಕ್ಷಕರು ಮಾಡಿದ ಕರತಾಡನವೇ ಸಾಕಾಗುತ್ತಿರಿಲಿಲ್ಲ; ನಾಲ್ಕಾರು ಬಾರಿ ಈ ಮಕ್ಕಳನ್ನು ನಿಮ್ಮ ಜೋರಾದ ಚಪ್ಪಾಳೆಯೊಂದಿಗೆ ಅಭಿನಂದಿಸಿ ಎಂದು ಕೂಗಿ ಕೂಗಿ ಹೇಳುತ್ತಿದ್ದರು.
ಹಲವಾರು ಸರ್ಕಾರಿ ಶಾಲೆಯ ಶಿಕ್ಷಕರು ನೇಪಥ್ಯಕ್ಕೆ ಧಾವಿಸಿ ಅಭಿನಂದಿಸಿದರು. ಮಾತುಗಳೆ ಬಾರದ ಮಕ್ಕಳ ಕೈಕುಲುಕಿ ಅಭಿನಂದಿಸುವ ಪರಿಯೆ ಹೇಳುತ್ತಿತ್ತು ಅವರ ಸಂಭ್ರವನ್ನು.

ಸಾಕಲ್ಲವೆ ನಮ್ಮ ಮಕ್ಕಳ ಶ್ರಮ ಸಾರ್ಥಕಗೊಳ್ಳಲು ಇಂಥದ್ದೊಂದು ಅಭೂತಪೂರ್ವ ಕ್ಷಣ?
ಹೌದು, ನಾಟಕ ಮುಗಿದ ಗಳಿಗೆಯೆ ನಮ್ಮ ಆತಂಕಗಳೆಲ್ಲ ಮಾಯವಾಗಿ ಹೊನಲಾಗಿತ್ತು ಸಂಭ್ರಮ. ಇಂಥದ್ದೊಂದು ಸಂಭ್ರಮವನ್ನು ನಮಗೊದಗಿಸಿಕೊಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲೆಯ ಡಿಡಿಪಿಐ ಶ್ರೀ ಎಚ್. ಆರ್. ಬಸಪ್ಪ, ಶಿಕ್ಷಣಾಧಿಕಾರಿಗಳಾದ ಡಾ. ಡಿ. ವಿ. ಕಾಂತ, ಶ್ರೀಮತಿ ಮಂಜುಳಾ ಡಯಟ್ ಮೈಸೂರು, ಶ್ರೀ ಚಂದ್ರ ಪಾಟೀಲ್, ಶ್ರೀ ಎಸ್. ಪಿ. ನಾಗರಾಜು ಅವರು, ಮಕ್ಕಳ ದಸರಾ ಉಪಸಮಿತಿಯವರಿಗೆ ನಮ್ಮ ಮೈನಾ ರಂಗ ಬಳಗ ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿಯ ಪರವಾಗಿ ಧನ್ಯವಾದಗಳು.

ಮತ್ತು ಈ ಎಲ್ಲಾ ಸಂಭ್ರಮವನ್ನು ಸಾಧ್ಯವಾಗಿಸಿದ ರಂಗಭೂಮಿಗೆ. ಮಕ್ಕಳು ತಾಲೀಮಿನಲ್ಲಿ ಬಹುತೇಕ ಚನ್ನಾಗಿ ಮಾಡುವುದೇ ಇಲ್ಲ; ಆದರೆ ಪ್ರದರ್ಶನ ನೀಡಲು ಪ್ರೇಕ್ಷಕನ ಮುಂದೆ ನಿಂತಾಗ ಅವರು ಆವೇಶಗೊಂಡಂತೆ ಅಥವಾ ಮೈದುಂಬಿಕೊಂಡು ಪ್ರೇಕ್ಷಕ ಮತ್ತು ನಿರ್ದೇಶಕನನ್ನು ಚಕಿತಗೊಳಿಸಿಬಿಡುತ್ತಾರೆ. ಅದು ಸಾಧ್ಯವಾಗುವುದು ರಂಗಭೂಮಿಯಲ್ಲಿ, ನಾಟಕದಲ್ಲಿ.


ಇದೇ ಸಂಭ್ರಮದಲ್ಲಿ ಅಂಬಾವಿಲಾಸ ಅರಮನೆಯನ್ನು ನೋಡಿಕೊಂಡು, ನಂತರ "ನಟನ" ತಂಡದ 'ಧಾಂ ಧೂಂ ಸುಂಟರಗಾಳಿ' (ನಿರ್ದೇಶನ : ಜೀವನ್ ರಾಂ ಸುಳ್ಯ) ಹಾಗೂ 'ಕಂಸಾಯಣ (ನಿರ್ದೇಶನ : ಸಂತೋಷ ಗುಡ್ಡಿಯಂಗಡಿ) ನಾಟಕವನ್ನು ನೋಡಿಕೊಂಡು ಹೆಗ್ಗಡಹಳ್ಳಿಯನ್ನು ತಲುಪಿದೆವು.


ಶರಣು ಹೇಳೆವ್ರಿ ಸ್ವಾಮಿ ನಾವು ನಿಮಗ ಎಂದು ಕಾರ್ಯಕ್ರಮ ಆರಂಭಿಸುತ್ತಾ.......






ಶಿಕ್ಷಣ ಹಕ್ಕು ಕಾಯಿದೆಯ ನಾಟಕ ಆರಂಭ ಗೊಂಡು.... ಕುಡುಕ ಬಸ್ಯ, ಗೌಡ, ಗೌಡನ ಛತ್ರಿ























ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ವಿರೋದಿಸುತ್ತಾ....



ಡಾ. ವಿನಯಾ ಅವರ ಅದ್ಭುತಹಾಡು "ಹಾದಿಯುದ್ದಕ್ಕೂ ಗಿಡ ನೆಡುತ್ತಾ...." ಹಾಡಿಕೊಂಡು ದೂರ್ತರನ್ನು ತುಳಿದು ಒಂದಾಗಿ ಹೆಜ್ಜೆ ಹಾಕುತ್ತಾ......


ನಾವಿಷ್ಟು ಜನ ಮೈನಾ ರಂಗ ಬಳಗದ ಗೆಳೆಯರು


ಸಭೆಗೆ ನಮ್ಮ ಪರಿಚಯ ಮಾಡಿಕೊಡುತ್ತಾ.....




ಡಿಡಿಪಿಐ ಶ್ರೀ ಎಚ್. ಆರ್. ಬಸಪ್ಪ, ಡಾ. ಡಿ.ವಿ. ಕಾಂತ, ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಚಂದ್ರಕಾಂತ್, ಶ್ರೀ ಬೆಟ್ಟನಾಯಕ ಅವರೊಂದಿಗೆ ನಮ್ಮ ಗೆಳೆಯರ ಬಳಗ.....








ಮಯ್ಸೂರಿನ ಹೆಮ್ಮೆ "ಅಂಬಾ ವಿಲಾಸ ಅರಮನೆ" ಮುಂದೆ ಕೆಲವು ಕ್ಷಣಗಳು....