Wednesday, 19 November 2014


ನಮ್ಮ ಶಾಲೆಯ ಅನಿತ ಎಚ್. ಕೆ. ಬರೆದ ಅತ್ಯಾಚಾರ ವಿರುದ್ಧದ ಕಿರು ಬರಹ ನಾಡಿನ ಪ್ರಖ್ಯಾತ ಪತ್ರಿಕೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ (16-11-2014) ಯಲ್ಲಿ ಪ್ರಕಟಗೊಂಡಿರುವುದು.



ಅನಿತ ಎಚ್. ಕೆ.





ಅಳ್ಳೀಮರದ ಹನ್ನೆರಡನೇ ಸಂಚಿಕೆ

ನವೆಂಬರ್ - 2014






ಹೆಣ್ಣೇ ಹೋರಾಡಬೇಕು.


ನಮ್ಮ ದೇಶದಲ್ಲಿ ಇತ್ತೀಚಿಗೆ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ನಿಮ್ಮೆಲ್ಲರಿಗು ಗೊತ್ತೇ ಇದೆ. ಅದರಿಂದ ಹೆಣ್ಣಿಗೆ ಈ ದೇಶದಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ನಿಮಗೆಲ್ಲಾ ಗೊತ್ತಿರುವ ಹಾಗೆ ನಮಗೆ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿದವರಲ್ಲಿ ಹೆಂಗಸರು ಸಹ ಇದ್ದರು. ಅವರಲ್ಲಿ ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದವರು ಹೋರಾಡಿ ಮಡಿದರು. ಆ ವೀರ ಮಹಿಳೆಯರು ಹೋರಾಡಿದ್ದು ದೇಶಕ್ಕಾದರೆ, ಈಗಿನ ನಮ್ಮ ದೇಶದ ಮಹಿಳೆಯರು ಹೋರಾಡುತ್ತಿರುವುದು ತಮ್ಮ ಮಾನ, ಪ್ರಾಣಕ್ಕಾಗಿ. ಎಲ್ಲರೂ ಹೆಣ್ಣಿಗೆ ಗೌರವ ನೀಡುತ್ತಾರೆ. ಆದರೆ ಅದೇ ಹೆಣ್ಣಿನ ಮಾನವನ್ನೂ ತೆಗೆಯುತ್ತಿದ್ದಾರೆ. ಇದನ್ನೆಲ್ಲಾ ಅನುಭವಿಸುತ್ತಿರುವ ಹೆಣ್ಣಿಗೆ ಸರ್ಕಾರ ಏನು ರಕ್ಷಣೆ ನೀಡುತ್ತಿದೆ? ಯಾವ ರೀತಿ ರಕ್ಷಣೆ ನೀಡುತ್ತಿದೆ? ಕೆಲವು ಆರೋಪಿಗಳು ಸಿಕ್ಕಿರಬಹುದು, ಶಿಕ್ಷೆಯೂ ಆಗಿರಬಹುದು. ಆದರೆ ಮತ್ತೆ ಮತ್ತೆ ಅಂಥಹ ಆರೋಪಿಗಳು ನಮ್ಮ ದೇಶದಲ್ಲಿ ಹುಟ್ಟುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ತೋರಿಸಲು ವೀರ ಮಹಿಳೆಯರ ಹಾಗೆ ಹೋರಾಡಲು ಸಾಧ್ಯವಿಲ್ಲ. ಆದರೆ ಅವರಿಗೆ ರಕ್ಷಣೆ ಹಾಗೂ ಧೈರ್ಯವನ್ನು ತುಂಬಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರತಿ ಹೆಣ್ಣು ಮಗುವನ್ನು ತಂದೆ-ತಾಯಿಯರು ಶಾಲೆ ಬಿಡಿಸುತ್ತಿವುದರಲ್ಲಿ ಈ ಕಾರಣವು ಒಂದಾಗಿದೆ.
ಹೆಣ್ಣನ್ನು ಸಹನೆ ಉಳ್ಳವಳು, ಶಾಂತ ಸ್ವಭಾವದವಳು, ಅವಳಿಗೆ ಏನು ಶಿಕ್ಷೆಕೊಟ್ಟರೂ ಅವಳು ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿದಿರುವ ಮೂರ್ಖರಿಗೆ ಹೆಣ್ಣು ಸಿಡಿದರೆ ಬೆಂಕಿ ಚೆಂಡಾಗಬಲ್ಲಳು ಎನ್ನುವುದು ತಿಳಿದಿಲ್ಲ. ಹೆಣ್ಣು ಸಹ ಗಂಡಿನ ದೌರ್ಜನ್ಯಕ್ಕೆ ಹೆದರದೆ ತನಗಾಗುತ್ತಿರುವ ದೌರ್ಜನ್ಯದ ಬಗ್ಗೆ ಚಿಂತಿಸಿ ಧೈರ್ಯಮಾಡಿ ತನಗೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಇದರ ಬಗ್ಗೆ ಪೊಲೀಸರು ಸಹ ತಕ್ಷಣ ಕ್ರಮಕೈಗೊಳ್ಳಬೇಕು. ಹೆಣ್ಣು ಸಹ ತನಗಾಗುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಬೇಕೆಂದು ಕೇಳಿಕೊಳ್ಳುತ್ತೇನೆ.

-ಅನಿತ ಎಚ್. ಕೆ.
10ನೇ ತರಗತಿ

*********************************************************************************

ಸುಳ್ಳು ವಾರ್ತೆಗಳು

ಹೀರೇಕಾಯಿ ಗ್ರಾಮದ ಸೋರೇಕಾಯಿರಾಯರ ಮಗಳಾದ ಪಡವಲಕಾಯಿ ಎಂಬಾಕೆ ಆತ್ಮಹತ್ಯೆಗೆ ಶರಣಾದ ಮಹಿಳೆ. ಘಟನೆಯ ಹಿನ್ನೆಲೆ. ಒಂದು ವರ್ಷದ ಹಿಂದೆ ಪಡವಲಕಾಯಿಯನ್ನು ಬದನೆಕಾಯಿಗೆ ಕೊಟ್ಟು ಮದುವೆ ಮಾಡಿದರು. ಆ ಸಮಯದಲ್ಲಿ ಪಡವಲಕಾಯಿಯ ತಂದೆ ತಾಯಿಗಳು ಐದು ಕೆ. ಜಿ. ತೊಂಡೆಕಾಯಿಯನ್ನು ವರದಕ್ಷಿಣೆಯಾಗಿ ಕೊಡುವೆವು ಎಂದು ಒಪ್ಪಿಕೊಂಡು ಅದನ್ನು ಕೊಡದ ಕಾರಣ ಪಡವಲಕಾಯಿಯ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದರು. ಇದನ್ನು ತಾಳಲಾಗದ ಪಡವಲಕಾಯಿಯಯ ಹತ್ತಿರದಲ್ಲಿದ್ದ ಅಂಗಡಿಗೆ ಹೋಗಿ ಕೊತ್ತಂಬರಿ ಸೊಪ್ಪನ್ನು ತಂದು ಅದರಿಂದ ನೇಣು ಹಾಕಿಕೊಂಡಿದ್ದಾಳೆ. ಈ ಘಟನೆ ತಿಳಿದ ಕುಂಬಳಕಾಯಿ ಗ್ರಾಮದ ಪೊಲೀಸರು ಸಬ್ ಇನ್ಸ್‍ಪೆಕ್ಟರಾದ ಮೆಣಸಿನಕಾಯಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂಗ್ರಹ -ಸಹನ ಎಚ್. ಡಿ.
10ನೇ ತರಗತಿ.

*********************************************************************************
ಚಿತ್ರ : ಚೈತ್ರ ಎಚ್. ಎನ್. 8ನೇ ತರಗತಿ

ವಿಸ್ಮಯ.

ವಿಸ್ಮಯ ಎಲ್ಲಾ ವಿಸ್ಮಯ
ಈ ಜಗವೆ ನನಗೆ ವಿಸ್ಮಯ

ತಿರುಗುವ ಭೂಮಿ ವಿಸ್ಮಯ
ಉರಿಯುವ ಸೂರ್ಯ ವಿಸ್ಮಯ
ಹೊಳೆಯುವ ತಾರೆ ವಿಸ್ಮಯ
ಉಕ್ಕುವ ಸಾಗರ ವಿಸ್ಮಯ || ವಿಸ್ಮಯ||

ಹಗಲು ರಾತ್ರಿಯ ಕಣ್ಣುಮುಚ್ಚಾಲೆ ಆಟವು ನನಗೆ ವಿಸ್ಮಯ
ಹುಟ್ಟು-ಸಾವಿನ ನಡುವೆ ಇರುವ ಗುಟ್ಟು ನನಗೆ ವಿಸ್ಮಯ
ಮಡಿಲಲಿ ಮಗುವ ಭಾರವ ಹೊತ್ತ ತಾಯಿ ನನಗೆ ವಿಸ್ಮಯ
ಬಳುಕುವ ತೆಳ್ಳನೆ ಬಳ್ಳಿಗೆ ಒಂದು ದೊಡ್ಡಕಾಯಿ ವಿಸ್ಮಯ || ವಿಸ್ಮಯ||

ಅರಳಿದ ಹೂವಿನ ಪಕಳೆಗಳುದುರಿ 
ಕಾಯಾಗುವುದು ವಿಸ್ಮಯ
ಕಾಯಿಯೊಳಗಿನ ಬೀಜವೇ ಪುನಃ 
ಮರವಾಗೊಂದೊಂದು ವಿಸ್ಮಯ
ಮಂಗನಿಂದ ಮಾನವನಾದ ಎಂಬುದೆ
ನನಗೆ ವಿಸ್ಮಯ
ಅಜ್ಜನ ಹೋಲುವ ಮೊಮ್ಮಗುವೊಂದು 
ಹುಟ್ಟೋದಿಲ್ಲಿ ವಿಸ್ಮಯ ||ವಿಸ್ಮಯ||

ಕಾಗೆಯ ಹೋಲುವ ಕೋಗಿಲೆ ಸ್ವರದ 
ಇಂಪೇ ನನಗೆ ವಿಸ್ಮಯ
ಅರಳಿದ ಪುಟ್ಟ ಮಲ್ಲಿಗೆ ಹೂವಿನ 
ಕಂಪೇ ನನಗೆ ವಿಸ್ಮಯ
ಸುಂಯ್ಯನೆ ಬೀಸುವ ಗಾಳಿಯಲಿರುವ 
ತಂಪೇ ಒಂದು ವಿಸ್ಮಯ
ಹಸಿರು ಎಲೆಯ ಮದರಂಗಿಯಲಿ ಅಡಗಿಹ
ಕೆಂಪೇ ವಿಸ್ಮಯ ||ವಿಸ್ಮಯ||

ಹಾರುವ ವಿಮಾನ ವಿಸ್ಮಯ
ತೇಲುವ ದೋಣಿ ವಿಸ್ಮಯ
ಜಿಗಿಯುವ ರಾಕೆಟ್ ವಿಸ್ಮಯ
ಓಡುವ ಕಾರು ವಿಸ್ಮಯ
ವಿಸ್ಮಯ, ವಿಸ್ಮಯ. ವಿಸ್ಮಯ. ವಿಸ್ಮಯ
ಎಲ್ಲವನ್ನೂ ಕಂಡುಹಿಡಿದ ಪುಟ್ಟ ಮಿದುಳೆ ವಿಸ್ಮಯ
ವಿಸ್ಮಯ ಎಲ್ಲಾ ವಿಸ್ಮಯ
ಈ ಜಗದೊಳಗೆಲ್ಲಾ ವಿಸ್ಮಯ.

-ಗಾರ್ಗಿ ಸೃಷ್ಠೀಂದ್ರ
5ನೇ ತರಗತಿ
ಬಂದಗದ್ದೆ ಕೆಳದಿ ಅಂಚೆ, ಸಾಗರ ತಾ||
ಶಿವಮೊಗ್ಗ ಜಿ||

(ಈ ಜಗತ್ತನ್ನೇ ವಿಸ್ಮಯದಿಂದ ನೋಡುವ ಪುಟ್ಟ ಮಗು ಗಾರ್ಗಿಯೇ ವಿಸ್ಮಯ. ಕನ್ನಡ ನಾಡಿನ ದಿಗ್ಗಜರ ಸಾಲುಗಳನ್ನು ನೋಡಿ ಆ ಸಾಲಿನಲ್ಲಿ ತಾನೂ ಇರಬೇಕೆಂಬ ಬಯಕೆ ಹೊತ್ತ ಗಾರ್ಗಿ ತನ್ನ ಅಪರೂಪದ ಬರಹಗಳಿಂದ ದೊಡ್ಡವರನ್ನು ಬೆರಗುಗೊಳಿಸಿದ್ದಾಳೆ. ಈಗಾಗಲೇ ನಾಟಕ ರಚನೆಯಲ್ಲಿ ತೊಡಗಿರುವ ಗಾರ್ಗಿ, ಅದ್ಭುತ ವಾಕ್ಪಟು. ಅವಳು ಕತೆ ಹೇಳುವ ಪರಿಗೆ ಎಂಥವರೂ ಬೆರಗಾಗಬೇಕು. ಗಾರ್ಗಿಯ ವಿಸ್ಮಯ ಅಳ್ಳೀಮರದಲ್ಲಿ.)
*********************************************************************************

ಈ ಸಲ ವಿನಿಗೆ ಸೈಸ್ನಿನಲ್ಲಿ
ಎರಡು ಮಾರ್ಕು ಕಡಿಮೆ


ಯಾಕೋ ಏನೋ
ಹೀಗಾಯಿತು ಅದು
ಯಾರೊಡನೆಯು ಅವ
ಉಂ ಹುಂ ಉಂ ಹುಂ
ಮಾತನಾಡುತಲೆ ಇಲ್ಲಾ
ಸುಮ್ಮನೆ ಸುಮ್ಮನೆ
ದಿನವಿಡಿ ಸುಮ್ಮನೆ
ಸಂಜೆ ವಾಕಿಂಗಿಗು
ಒಬ್ಬನೆ ಒಬ್ಬನೆ
ಕೆರೆಯ ದಂಡೆಯಲಿ
ಕುಳಿತಿದ್ದನೆ ಅವ
ಒಂದೊಂದಾಗಿ
ಒಂದೊಂದಾಗಿ
ಕಲ್ಲು ಒಗೆಯುತಲಿ ಇದ್ದನವ
ವಾಪಸು ಬರುವಾ ದಾರಿಯಲಿ
ಮುಸ್ಸಂಜೆಯ ಮಸು ಮಸುಕಲ್ಲಿ
ಯಾರೋ ಭುಜವನು ತಟ್ಟಿದರು
ತಡೆದು ನಿಲ್ಲಿಸಿಯೆ ಬಿಟ್ಟರು ಅವರು
ಓಹೊಯ್ ಹಳೆಯ ಗೆಳೆಯನವ
ಚಡ್ಡೀ ದೋಸ್ತಿ ಇನ್ನೇನು ಕೇಳ್ತಿ
ಇಷ್ಟುದಿನ ಕಾಣದೆ ಇದ್ದವ
ಬಾನಲಿ ಚಂದಿರ ಇಳಿದಿದ್ದ
ಹೆಗಲಲಿ ಕೈ, ಕೊರಳಿಗೆ ಬಳ್ಳಿ
ನೆನಪುಗಳೂ ಒಂದೆರಡಲ್ಲ
ಒಂದರ ಹಿಂದೆ ಒಂದು ಒಂದು
ಉದ್ದನೆ ರೈಲೇ ಆಯ್ತಲ್ಲ
ಕಳೆದು ಹೋದ ಆ ಎರಡಂಕಗಳು
ಮನ ಮುದುರಿಸಿದಾ ಮಾಯದವು
ನಕ್ಕವು ಕಪ್ಪನೆ ಮುಗಿಲಲ್ಲಿ
ಅಲ್ಲಿ ಚಂದಿರನ ಬಿಳಿಯಲ್ಲಿ !

-ಡಾ. ಆನಂದ ವಿ. ಪಾಟೀಲ್


(ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರಕ್ಕೆ ಈ ಬಾರಿ ಆನಂದ ಪಾಟೀಲರು ಭಾಜನರಾಗಿದ್ದಾರೆ. ನಮ್ಮ ಶಾಲೆಗೆ ಆಗಮಿಸಿ ನಿಜದ ಅಳ್ಳೀಮರದ ನೆಳಲಲ್ಲಿ ನಮ್ಮ ಮಕ್ಕಳಿಗೆ ಕಥೆ ಹೇಳಿ ಇಡೀ ದಿನವ ಕಳೆದು ನಮನ್ನೆಲ್ಲ ಕುಷಿಗೊಳಿಸಿದ  ಹಿರಿಯರಾದ ಆನಂದ ಪಾಟೀಲರಿಗೆ ರಾಷ್ಟ್ರಪ್ರಶಸ್ತಿ ಸಂದ ಈ ಗಳಿಗೆ ನಮಗೂ ಹೆಮ್ಮೆಯಾಗಿದೆ. ಈ ಹಿರಿಯ ವ್ಯಕ್ತಿತ್ವಕ್ಕೆ ನಾವು ಪುಟ್ಟಮಕ್ಕಳು ಶುಭಾಶಯಗಳನ್ನು ಹೇಳುತ್ತಿದ್ದೇವೆ.)
*********************************************************************************

ಸತತ ಎರಡನೇ ಬಾರಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಹಳ್ಳಿಯ ಹುಡುಗಿ ಶರಧಿ ಶೆಟ್ಟಿ

    ಕಳೆದ ವರ್ಷ ದೆÀಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾದ 2012-13 ನೇ ಸಾಲಿನ INSPIRE (Innovation in   Science   Pursuit   for   Inspired   Research)
ಈ ವರ್ಷ ಶರಧಿ ಶೆಟ್ಟಿಯವರಿಗೆ ಇನ್ನೊಂದು ರಾಷ್ಟ್ರ ಪ್ರಶಸ್ತಿ ದೊರೆತಿದೆ. ನವೆಂಬರ್ 14 ರ ಮಕ್ಕಳ ದಿನಾಚರಣೆಯಂದು ದೇಶದ ಇಪ್ಪತ್ತು ಮಕ್ಕಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಪ್ರಶಸ್ತಿ ನೀಡಿ ಗೌರವಿಸಿದರು.ಈ ಪ್ರಶಸ್ತಿ ಪಡೆದ ಕರ್ನಾಟಕದ ಐವರು ಮಕ್ಕಳಲ್ಲಿ ಉಡುಪಿ ಜಿಲ್ಲೆಯ ಶಿರಿಯಾರವೆಂಬ ಗ್ರಾಮದ ಹುಡುಗಿ ಶರಧಿ ಶೆಟ್ಟಿಯೂ ಒಬ್ಬರು. ಆರನೇ ತರಗತಿಯವರೆಗೆ ಉಡುಪಿ ಜಿಲ್ಲೆಯ ಕುಂದಾಪುರ ಶೈಕ್ಷಣಿಕ ವಲಯದಲ್ಲಿರುವ ಹಳ್ಳಾಡಿ-ಹರ್ಕಾಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ ಶರಧಿ ನಂತರ ಕಾರ್ಕಳ ತಾಲೂಕಿನ ಮೂರಾರ್ಜಿ ದೇಸಾಯಿ ವಸತಿ ಶಾಲೆ ಸೇರಿಕೊಂಡರು. ಈಗವರು ಅಲ್ಲಿ 9 ನೇ ತರಗತಿಯ ವಿದ್ಯಾರ್ಥಿನಿ. ಶರಧಿಯ ತಂದೆ ಶಿರಿಯಾರದ ಕೃಷಿಕ ಶ್ರೀ ಭಾಸ್ಕರ್ ಶೆಟ್ಟಿ, ಮಗಳ ಅಭಿಯಾನದಲ್ಲಿ ಜೊತೆಯಾಗಿರುವವರು ತಾಯಿ ಶ್ರೀಮತಿ ಸರೋಜಿನಿ.
   ವಸತಿ ನಿಲಯದ ವಿದ್ಯಾರ್ಥಿಯಾದ ಶರಧಿಗೆ ಮಳೆಗಾಲದಲ್ಲಿ ತರಗತಿಯಲ್ಲಿರುವಾಗಲೂ ಹೊರಗೆ ಒಣಹಾಕಿದ ಬಟ್ಟೆಗಳ ಬಗ್ಗೆಯೇ ಯೋಚನೆ ಬರುತಿತ್ತು. ಆಗೆಲ್ಲ, ಮಳೆಯಾಗುತ್ತಲೇ ಒಳಹೋಗುವ ಬಿಸಿಲು ಬಂದಾಗ ಹೊರಬರುವ ಉಪಕರಣವಿದ್ದರೆ ಚೆನ್ನಾಗಿತ್ತು ಎಂದು ಅನಿಸುತಿತ್ತಂತೆ. ತನ್ನ ಯೋಚನೆಯನ್ನು ವಿಜ್ಞಾನ ಶಿಕ್ಷಕ ಸುಧೀರಕುಮಾರ ಅವರಲ್ಲಿ ಶರಧಿ ತಿಳಿಸಿದಾಗ, ಅವರು ಈ ಯೋಚನೆಯನ್ನು ಮಾಡೆಲ್ ಆಗಿ ತಯಾರಿಸಲು ಸಹಕರಿಸಿದರು. ಹೀಗೆ, ಮ¼ಗಾಲದಲ್ಲಿ ಒಗೆದು ಬಿಸಿಲಿಗೆ ಒಣಹಾಕಿದ ಬಟ್ಟೆಗಳು ಮಳೆ ಬರುವ ಚಿನ್ಹೆಗಳನ್ನು ಗುರುತಿಸಿ ಒಳಬರುವ ಮತ್ತು ಬಿಸಿಲು ಬಂದಾಗ ಹೊರಹೋಗುವ `ರೇನ್ ಸೆನ್ಸರ್’ ಮಾದರಿ ತಯಾರಾಯಿತು. ಕಳೆದ ವರ್ಷ ಇನಸ್ಪೈರ್ ಸ್ವರ್ಣ ಪ್ರಶಸ್ತಿ ಮತ್ತು ಈ ವರ್ಷ ಮಕ್ಕಳ ದಿನಾಚರಣೆಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಹಗಲಿಡೀ ದುಡಿಯುವ ಜನಕ್ಕೆ ಹೊಟ್ಟೆಯ ಚಿಂತೆ ಇದ್ದೇ ಇರುತ್ತದೆ; ಒಣಗಿಸಲು ಹಾಕಿದ ಬಟ್ಟೆಯ ಚಿಂತೆಯೂ ಸೇರಿಕೊಳ್ಳಬಾರದೆಂಬ ಶರಧಿಯ ಕಾಳಜಿ ಕೂಡಾ ಈ ಮಾಡೆಲ್ ತಯಾರಿಯ ಹಿಂದೆ ಕೆಲಸಮಾಡಿದೆ.
   ಪ್ರತಿಭೆಯ ಜ್ಯೋತಿ ಸದಾ ಬೆಳಗುವಂತೆ ಎಣ್ಣೆಯುಣ್ಣಿಸುತ್ತಿರುವ ಸುಧೀರಕುಮಾರರಂತಹ ಶಿಕ್ಷಕರು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ತಂದೆ-ತಾಯಂದಿರು ಮತ್ತು ಕುತೂಹಲ, ಅನ್ವೇಷಣೆ ,ಯೋಚನೆಗಳನ್ನು ಕಾರ್ಯರೂಪಕ್ಕಿಳಿಸುವ ಛಲ, ಇವೆಲ್ಲವೂ ಒಂದುಗೂಡಿದರೆ  ಶರಧಿಯಂತಹ ಗ್ರಾಮೀಣ ಪರಿಸರದ ಹುಡುಗಿ ಸಹ ರಾಷ್ಟ್ರದ ಉನ್ನತ ಗೌರವವನ್ನು ಪಡೆಯಲು ಸಾಧ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
  ರಾಜ್ಯದ ಹಿರಿಮೆಯನ್ನು ದೇಶದ ರಾಜದಾನಿಯವರೆಗೆ ಕೊಂಡೊಯ್ದ ಶರಧಿ ಶೆಟ್ಟಿಯವರಿಗೆ ಅಭಿನಂದನೆಗಳು!
ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ರಾಷ್ಟ್ರಪ್ರಶಸ್ತಿ ಸ್ವೀಕರಿಸುತ್ತಿರುವ ಶರಧಿ ಶೆಟ್ಟಿ

*********************************************************************************
ಚಿತ್ರ : ದೀಪಿಕಾ ಎಚ್. ಪಿ. 9ನೇ ತರಗತಿ


ನನ್ನ ಊರು ನನ್ನಯ ಕೇರಿ


ನನ್ನ ಊರು ನನ್ನಯ ಕೇರಿ
ತುಂಬಾ ಕೊಳಕೋ ಇಲ್ಲಿಯ ಮೋರಿ
ಇಲ್ಲಿಯ ಹುಡುಗರ ಸ್ಟೈಲೋ ಸ್ಟೈಲೋ
ನೀರಿಗೆ ಹೆಂಗಸರ ಗೋಳೋ ಗೋಳೋ

ಇಲ್ಲಿಯ ಮನೆಗಳು ಬಹಳ ನೀಟು
ಮನೆಗಳ ಪಕ್ಕ ತುಂಬಾ ಘಾಟು
ಕುಡುಕರೆ ಇಲ್ಲಿಯ ಶಿಸ್ತು ಸಿಪಾಯಿ
ಇಲ್ಲಿಯ ಬೆಳೆಯು ತೆಂಗಿನಕಾಯಿ

ಇಲ್ಲಿಯ ಜನರಿಗೆ ಸ್ವಲ್ಪ ಜಂಬ
ಒಳ್ಳೆ ಮನಸ್ಸು ತುಂಬಾ ತುಂಬಾ
ಮಕ್ಕಳ ಆಸೆ ಪೂರೈಸೊಲ್ಲ
ಅದಕ್ಕೆ ನಾವು ಕನಸು ಕಾಣೊಲ್ಲ

ಮಾರಿ ಇದ್ದಾಳೆ ಅನ್ನೋ ನಂಬಿಕೆ
ರಾತ್ರಿ ಊರಿಗೆ ಬರಬೇಡಿ ಎಚ್ಚರಿಕೆ
ಆದ್ರೂ ಬಂದ್ರೆ ನಿಮ್ಮಿಷ್ಟ
ಬಂದಾದ ಮೇಲೆ ಬಲು ಕಷ್ಟ

-ಲೋಕೇಶ್ ಎಚ್. ಎಂ.
9ನೇ ತರಗತಿ.

*********************************************************************************

 ಚಿತ್ರ : ವಸಂತ್ ಕುಮಾರ್ 9ನೇ ತರಗತಿ

ಟೀಚರ್ ಒಮ್ಮೆ

ಟೀಚರ್, ಒಮ್ಮೆ ನಕ್ಕು ಬಿಡಿ
ಎಲ್ಲಾ ದುಃಖ ಮರೆತು ಬಿಡಿ
ಮುಖ ನೋಡೋಕೇ ಆಗ್ತಿಲ್ಲ
ಅಳುವೇ ಬರ್ತಿದೆ ನಮಗೆಲ್ಲ!

ಯಾಕೇ ಟೀಚರ್, ಏನಾಯ್ತು
ನಮ್ಮಿಂದೇನು ತಪ್ಪಾಯ್ತು?
ಉತ್ತರ ಪತ್ರಿಕೆ ನೋಡಿದ್ರಾ
ಯಾರೂ ಚನ್ನಾಗ್ ಬರ್ದಿಲ್ವಾ?

ನಿಮ್ಮಿ ಬರ್ತಡೇ ಈವತ್ತೇ
ವಿಶ್ ಮಾಡೋಲ್ವಾ, ಹೇಳಿ ಮಿಸ್
ಪಮ್ಮಿ ಮಲ್ಲಿಗೆ ಕೈಯಲ್ಲೇ
ಬಾಡ್ತಿದೆ, ತಗೊಳ್ಳಿ, ಏಳಿ, ಪ್ಲೀಸ್!

ಹೇಳಿ ಟೀಚರ್, ಏನ್ ವಿಷ್ಯ
ಹೇಗಿದೆ ಪಾಪೂ ಆರೋಗ್ಯ?
ಸರ್ ಜೊತೆ ಜಗಳ ಏನಾದ್ರೂ....
ಮಾತೇ ಬಿಟ್ರಾ ನೀವಿಬ್ರೂ?

ಟೀಚರ್, ಟೀಚರ್, ಹೋಗ್ಲಿ ಬಿಡಿ
ನಾವಿದ್ದೀವಿ ನಿಮ್ಮ ಜೊತೆ
ನಾಟಕ ಮಾಡಿ ಹಾಡ್ ಹಾಡ್ತೀವಿ
ಹೇಳ್ತೀವ್ ಪುಣ್ಯ ಕೋಟಿ ಕತೆ!

-ರಾಧೇಶ್ ತೋಳ್ಪಾಡಿ
ಹಿರಿಯ ಮಕ್ಕಳ ಸಾಹಿತಿ, ಬಂಟ್ವಾಳ

*********************************************************************************

ನಾಳೆಗಳು ನಮ್ಮದು....

‘ಅಳ್ಳೀಮರ’ಕ್ಕೆ ಪ್ರತಿ ಸಂಚಿಕೆಯೂ ಮಕ್ಕಳ ಹಬ್ಬವೆ. ಆದರೂ ನವೆಂಬರ್‍ನಲ್ಲೊಂದು ಶುಭಾಶಯ ಹೇಳಬೇಕು. ಹೇಗೆ? ಹೇಗೆಂದರೆ, ಅದು ಸಂಚಿಕೆಯನ್ನು ಸಮೃದ್ಧಗೊಳಿಸಿ. ಗಾರ್ಗಿ, ಶರಧಿ, ಅನಿತ, ಸಹನ, ದೀಪಿಕಾ, ಲೋಕೇಶ, ವಸಂತ, ಚೈತ್ರರ ಜೊತೆಗೆ ನಾಡಿನ ಹಿರಿಯರು ಮಕ್ಕಳ ಸಾಹಿತ್ಯ ವಿಶಿಷ್ಟ ದನಿಗಳಾದ ಆನಂದ ಪಾಟೀಲರು, ರಾಧೇಶ್ ತೋಳ್ಪಾಡಿಯವರು ಈ ಸಂಚಿಕೆಯನ್ನು ವಿಶೇಷವಾಗಿಸಿದ್ದಾರೆ.
ಮಕ್ಕಳ ದಿನಕ್ಕೆಂದೇ ಪುಟ್ಟ ಮಗು ಗಾರ್ಗಿಯ ವಿಸ್ಮಯವನ್ನು ಹೊತ್ತುಕೊಂಡು ‘ಅಳ್ಳೀಮರ’ ಬಂದಿದೆ. ಇಂತಹ ವಿಸ್ಮಯಗಳನ್ನು ಹುಡುಕುತ್ತಲೇ ನಮ್ಮ ನಮ್ಮ ಹಾದಿಯ ಹುಡುಕಿಕೊಳ್ಳುವ ಎಳೆಯೇ ಈ ಸಂಚಿಕೆ...

-ಸಂಪಾದಕ




ಅಳ್ಳೀಮರದ ಹನ್ನೊಂದನೇ ಸಂಚಿಕೆ. 

ಅಕ್ಟೋಬರ್ - 2014