ವಿಜ್ಞಾನಿಯೊಬ್ಬರ ಮನದಾಳದ ಮಾತು
ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ (28-02-2020) ವಿಜ್ಞಾನಿ ಡಾ. ದಿನೇಶ್ ಶೆಟ್ಟಿಯವರೊಡನೆ
ನೇರ ವಿಡಿಯೋ ಸಂವಾದ ನಡೆಯಿತು. ಅಬುಧಾಬಿಯಿಂದ ಅವರು ಮಕ್ಕಳೊಡನೆ ಮಾತನಾಡಿದರು. ಮೂಲತಃ ಉಡುಪಿ ಜಿಲ್ಲೆ
ಕುಂದಾಪುರದವರಾದ ದಿನೇಶ್ ಕ್ಯಾನ್ಸರ್ ಕಾಯಿಲೆ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಜ್ಞಾನ ಮತ್ತು
ನೆನಪು, ತಾನ್ಯಾಕೆ ಕ್ಯಾನ್ಸರ್ ಅನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡೆ, ಪರೀಕ್ಷೆಗಳಿಗೆ ಹೇಗೆ ತಯಾರಿ
ನಡೆಸಬೇಕು ಎಂಬ ಕುರಿತು ವಿವರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.
ಕ್ಯಾನ್ಸರ್ ಕುರಿತೇ ಸಂಶೊಧನೆ ಮಾಡಬೇಕು ಅಂತ ಯಾಕನಿಸಿತು?
ಎಂದು 9ನೇ ತರಗತಿಯ ಸಹನಾ ಕೇಳಿದಾಗ ದಿನೇಶ್ ಅವರು ತನ್ನ ಬಾಲ್ಯದ ಘಟನೆಯೊಂದನ್ನು ವಿವರಿಸಿದರು. ಈ
ಘಟನೆ ಮಕ್ಕಳಿಗೆ ಸ್ಪೂರ್ತಿ ಚೈತನ್ಯ ತುಂಬುವಂಥದ್ದಾಗಿತ್ತು. ಅವರು 9ನೇ ತರಗತಿಯಲ್ಲಿದ್ದಾಗ ಟಿ.ಬಿ.
ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಂದೆಯೊಂದಿಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಔಷಧಿಗೆ ಹೋಗಬೇಕಾಗಿತ್ತಂತೆ.
ಆಗ ವೈದ್ಯರು ಸಿಗುತ್ತಿರುಲಿಲ್ಲ. ಕಾರಣ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿದ್ದರೂ ತಮ್ಮದೇ ಖಾಸಗಿ ಆಸ್ಪತ್ರೆಯನ್ನು
ನಡೆಸುತ್ತಾ ರೋಗಿಗಳಿಗೆ ಸಿಗುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಶಕ್ತಿ
ತಮ್ಮ ತಂದೆಗೆ ಇರಲಿಲ್ಲ. ವೈದ್ಯರು ಸಿಗದೆ ಬಸ್ಸು ನಿಲ್ದಾಣದಲ್ಲಿ ದಿನೇಶ್ ಅವರ ತಂದೆ ಕಣ್ಣೀರಿಟ್ಟರಂತೆ.
ಅವರು ಅತ್ತಿದ್ದು ಕಾಯಿಲೆಯಿಂದಾಗಿಯಲ್ಲ ಈ ಸಮಾಜಿಕ ವ್ಯವಸ್ಥೆ ಬಡರೋಗಿಯನ್ನು ನಡೆಸಿಕೊಂಡ ಪರಿಗೆ.
ಅಂದು ಡಾ. ದಿನೇಶ್ ತಮ್ಮ ತಂದೆಗೆ ಎರಡು ಮಾತು ಕೊಟ್ಟಿದ್ದರಂತೆ
1. ಮುಂದೆ ತಾನು ಈ ಸಮಾಜದ ನಾಲ್ಕು ಜನರಿಗೆ ನೆರವಾಗುವಂತೆ ಬದುಕುತ್ತೇನೆ.
ಮೊದಲನೆಯ ಮಾತಿನಂತೆ ದಿನೇಶ್ ಸಮಾಜವನ್ನು ಕಾಡುತ್ತಿರುವ ಕ್ಯಾನ್ಸರ್
ಕಾಯಿಲೆಗೆ ಔಷಧಿಯನ್ನು ಕಂಡುಹಿಡಿದಿದ್ದು 19 ದೇಶಗಳಲ್ಲಿ ಆ ಔಷಧಿ ರೋಗಿಗಳ ಮೇಲೆ ಪ್ರಯೋಗವಾಗುತ್ತಿದೆ.
ಮತ್ತು ಮೆದುಳಿನ ಕ್ಯಾನ್ಸರ್ ಗೆ ಕಂಡುಹಿಡಿದರುವ ಔಷಧಿ ಇನ್ನೇನು ರೋಗಿಗಳ ಮೇಲೆ ಪ್ರಯೋಗಗೊಳ್ಳಲು ಸಿದ್ಧವಾಗಿದೆ
ಎಂದು ತಮ್ಮ ತಂದೆಯನ್ನು ನೆನೆದು ಭಾವುಕವಾದರು ದಿನೇಶ್. ಎರಡನೇ ಮಾತಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ,
ಆ ದಿನಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದು ತಾವು ಕ್ಯಾನ್ಸರ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡದ್ದನ್ನು
ವಿವರಿಸಿದರು.
ವಿಜ್ಞಾನಿಯಾಗ ಬೇಕಾದರೆ ಏನು ಓದಬೇಕು? ನಮ್ಮ ಮನಸ್ಥಿತಿಗಳು
ಹೇಗಿರಬೇಕು? ಎಂದಮು 9ನೇ ತರಗತಿಯ ಜಿ. ಅನನ್ಯ ಕೇಳಿದ ಪ್ರಶ್ನೆಗೆ ದಿನೇಶ್ ಅವರು ಉತ್ತರ ನೀಡುತ್ತಾ,
ವಿಜ್ಞಾನಿ ಎಂದರೆ ವಿಶೇಷವಾದ ಜ್ಞಾನವುಳ್ಳ ಎಲ್ಲರೂ ವಿಜ್ಞಾನಿಗಳೆ. ಆದರೆ ವಿಜ್ಞಾನದ ಪರಿಭಾಷೆಯಲ್ಲಿ
ಅಂದರೆ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ವಿಜ್ಞಾನಿಯಾಗಬೇಕೆಂದರೆ ಮೊದಲು ಆಸಕ್ತಿ ಇರಬೇಕು, ಕುತೂಹಲ
ಇರಬೇಕು, ತಾಳ್ಮೆ ಸಹನೆ ಇರಬೇಕು. ಸೋಲು ಗೆಲುವುಗಳನ್ನು ಸ್ವೀಕರಿಸುವ ಗುಣವಿರಬೇಕು, ಉತ್ಸಾಹವಿರಬೇಕು,
ಸಮಾಜಕ್ಕಾಗಿ ಏನಾದರೂ ಒಳಿತನ್ನು ನೀಡಬೇಕೆಂಬ ಹಂಬಲವನ್ನು ಹೊಂದಿರಬೇಕು. ಕಠಿಣ ಪರಿಶ್ರಮ ಪಡಬೇಕು.
ಮುಖ್ಯವಾಗಿ ತನಗೆ ಆಸಕ್ತಿಯಿದೆಯೇ ಎಂದು ತನ್ನನ್ನು ತಾನು ಗುರುತಿಸಿಕೊಳ್ಳಬೇಕು.
ಒಂದರಿಂದ ಹತ್ತನೇ ತರಗತಿಯವರೆಗಿನ ಜ್ಞಾನ ಮೂಲಜ್ಞಾನ. ಈ ಮೂಲಜ್ಞಾನವನ್ನು
ಮನಸ್ಸಿನಲ್ಲಿ ಉಳಿಯುವಂತೆ ಓದಬೇಕು. ಪರೀಕ್ಷೆಯಲ್ಲಿ ಗಳಿಸುವ ಅಂಕ ನಮ್ಮ ಜ್ಞಾನದ ಪ್ರತಿಫಲ ಅಲ್ಲ,
ನಮ್ಮ ನೆನಪಿನ ಶಕ್ತಿಯ ಸಾಮರ್ಥ್ಯ. ವಿದ್ಯಾರ್ಥಿಗಳಲ್ಲಿ ಮೂರು ವಿಧ.
1) ಪರೀಕ್ಷೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನಿರೀಕ್ಷಿಸಿದಷ್ಟು
ಅಂಕಗಳು ಬರದೇ ಇದ್ದರೆ ತನ್ನ ಪಾಲಿಗೆ ಜೀವನವೇ ಮುಗಿದು ಹೋಯ್ತು ಎಂದು ತಿಳಿದವರು.
2) ಪರೀಕ್ಷೆಯನ್ನು ಗಂಭೀರವಾಗಿಯೇ ಸ್ವೀಕರಿಸಿ ತಮ್ಮ ಪ್ರಯತ್ನ
ಮಾಡ್ತಾರೆ ತಾವು ನಿರೀಕ್ಷಿಸಿದಷ್ಟು ಅಂಕ ಬರದಿದ್ದಲ್ಲಿ ಅದನ್ನು ಧನಾತ್ಮಕವಾಗಿ ಸ್ವೀಕರಿಸುತ್ತಾರೆ.
3) ಯಾವುದನ್ನೂ ಗಂಭೀರವಾಗಿ ಸ್ವೀಕರಿಸದೆ ತಮ್ಮ ಪಾಡಿಗೆ ತಾವಿರುವವರು.
No comments:
Post a Comment