Wednesday, 18 November 2020

TALP ತರಬೇತಿ ಸಂಪನ್ನವಾಯಿತು.

 

TALP ತರಬೇತಿ


ನಾನು ನಾಟಕದ ಮೇಷ್ಟ್ರು. ನಮ್ಮ ಶಾಲೆಯ ಇತರೆ ವಿಷಯ ಶಿಕ್ಷಕರುಗಳೆಲ್ಲ ಟಾಲ್ಪ್ ತರಬೇತಿಗೆ ಹೋಗುತ್ತಿದ್ದಾಗ ‘ಏನಿದು ಕಂಪ್ಯೂಟರ್ ತರಬೇತಿ?’ ಎಂಬ ಕುತೂಹಲವಿತ್ತು.

ಆದರೆ ನನ್ನ ತರಗತಿಗಳಲ್ಲಿ, ಮಕ್ಕಳ ಬಿಡುವಿನ ವೇಳೆಗಳಲ್ಲಿ, ಶಾಲಾ ಕಾರ್ಯಕ್ರಮಗಳಲ್ಲಿ, ವಿಶೇಷ ಲೈವ್ ಕಾರ್ಯಕ್ರಮಗಳಲ್ಲೆಲ್ಲ ನಾನು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಬಂದವನು. ಮುಖ್ಯವಾಗಿ ನಮ್ಮ ಶಾಲೆ ವಿಜ್ಞಾನ ನಾಟಕಗಳಿಗಂತೂ ತಂತ್ರಜ್ಞಾನವನ್ನು ರಂಗವೇದಿಕೆಗೂ ತಂದವನು. ಕಳೆದ ವರ್ಷದ ನಮ್ಮ ನಾಟಕ “ಕಾರ್ಬನ್ ಲೋಕ” ಲ್ಯಾಪ್ ಟಾಪ್, ಪ್ರೊಜೆಕ್ಟರ್, ಇಂಟರ್ನೆಟ್ ನಾಟಕದ ಪ್ರಮುಖ ಪಾತ್ರವೂ ಹೌದು. ಇದಲ್ಲದೆ ಶಿಕ್ಷಣ ಸಚಿವರಿಂದ ಮೊದಲುಗೊಂಡು ದೇಶ ವಿದೇಶಗಳಲ್ಲಿರುವ ವಿಜ್ಞಾನಿಗಳು, ಸಾಹಿತಿಗಳ ಜೊತೆ ನಮ್ಮ ಮಕ್ಕಳು ನೇರವಾಗಿ ಸಂವಾದಿಸಲಿಕ್ಕೆ ಸಾಧ್ಯವಾಗಿದ್ದು ತಂತ್ರಜ್ಞಾನದಿಂದ. ಇನ್ನು ನಮ್ಮ ಮಕ್ಕಳ “ನಿಮ್ಮ ಕಸ ನಿಮಗೆ” ಅಭಿಯಾನ ರಾಜ್ಯದ ಪ್ರಜ್ಞಾವಂತರ ಗಮನ ಸೆಳೆಯುವುದಕ್ಕೂ ಕಾರಣವಾಗಿದ್ದು ತಂತ್ರಜ್ಞಾನ. ನಮ್ಮ ಪತ್ರಿಕೆ ಮತ್ತು ಬ್ಲಾಗ್ “ಅಳ್ಳೀಮರ”, “ಮಕ್ಕಳಂಗಡಿ” ಯೂಟ್ಯೂಬ್ ಚಾನಲ್ https://www.youtube.com/channel/UCrf0EGCeyR-nVoIJKA6YBqQ  ಫೇಸ್ಬುಕ್  https://www.facebook.com/makkalangadi ಪುಟಗಳನ್ನು ಹೊಂದಿರುವ ನಮ್ಮ ಶಾಲೆಯನ್ನು ಸ್ವತಃ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ https://en.wikipedia.org/wiki/S._Suresh_Kumar  ಅವರು ಹುಡುಕಿಕೊಂಡು ಬರುವಂತಾಗಿದ್ದಕ್ಕೆ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡಿದ್ದು ಕಾರಣ.

ಮೇಲಿನ ಪೀಠಿಕೆಯನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಈ ಟಾಲ್ಪ್ ತರಬೇತಿ ಎಂಬುದು ಶಿಕ್ಷಕರು  ಶೈಕ್ಷಣಿಕವಾಗಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕೆಂಬುದರ ಬಗ್ಗೆ ಸವಿವರವಾಗಿ ತಿಳಿಸಿಕೊಡುತ್ತದೆ; ಈ ತರಬೇತಿಯಲ್ಲಿ ಕಲಿಸಲಾಗುವ ಕೆಲವಾರು ವಿಚಾರಗಳನ್ನು ನಾನು ಈಗಾಗಲೇ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ಬಂದವನು. ನನಗೆ ತಿಳಿದಿರುವ ಮಾಹಿತಿಗಳಿಗೆ ಇನ್ನಷ್ಟು ಲಭ್ಯ, ಆವಶ್ಯಕ ಆಕರಗಳನ್ನು ಈ ತರಬೇತಿ ನನಗೆ ಒದಗಿಸುತ್ತಾ ಬಂತು. ಹೀಗಾಗಿ ತರಬೇತಿ ನನಗೆ ಸುಲಭ ಮತ್ತು ಪ್ರಯೋಜನಕಾರಿಯಾಯಿತು.

ಹತ್ತು ದಿನಗಳ ನಮ್ಮ ತರಬೇತಿ ನಂಜನಗೂಡಿನ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ನಮ್ಮ ಜೊತೆ ತರಬೇತಿಗೆ ಬಂದವರಲ್ಲಿ ಕೆಲವರು ಕಂಪ್ಯೂಟರ್ ಪರಿಣತರಿದ್ದರೆ, ಇನ್ನು ಕೆಲವರು ಹೊಸ ಲೋಕವೊಂದಕ್ಕೆ ಪ್ರವೇಶ ಪಡೆಯುತ್ತಿದ್ದವರಾಗಿದ್ದರು. ಎಲ್ಲರೂ ಸಮನ್ವಯದಿಂದ ತರಬೇತಿ ಸಂಪನ್ನವಾಯಿತು.

ನಮ್ಮ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶ್ರೀನಿವಾಸ ಶೆಟ್ಟಿಗಾರ್ ಮತ್ತು ಶ್ರೀ ಜಿ.ಎಸ್.ವಿಶ್ವನಾಥ ಅವರು ತಮ್ಮ ಅನುಭವವನ್ನು ಧಾರೆ ಎರೆಯುವುದರ ಜೊತೆಗೆ ನಮ್ಮಲ್ಲಿರುವ ಅನುಭವಿಗಳ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿಸಿಕೊಟ್ಟು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದ್ದರು. ನಮ್ಮಲ್ಲಿ ಬೇಗ ಬೇಗ ಕಲಿತುಕೊಂಡವರು, ಉಳಿದವರಿಗೆ ಸಹಾಯ ಮಾಡುತ್ತಾ ಇನ್ನಷ್ಟು ಕಲಿಯುತ್ತಾ ಹತ್ತು ದಿನಗಳ ಈ ಮೌಲ್ಯಯುತ ತರಬೇತಿಯನ್ನು ಮುಗಿಸಿದೆವು ನಿಜ ಅರ್ಥದಲ್ಲಿ ನಾವು ಹೊಸದಾಗಿ ಕಲಿಕೆಯನ್ನು ಆರಂಭಿಸಿದೆವು. ಇನ್ನು ತರಬೇತಿಯಲ್ಲಿ ಪಡೆದ ಮಾಹಿತಿಗಳನ್ನು ಹೆಚ್ಚು ಹೆಚ್ಚು ನಮ್ಮ ಭೋದನಾ ಕ್ರಮಗಳಿಗೆ ಅಳವಡಿಸಿಕೊಳ್ಳುತ್ತಾ ವೈಜ್ಞಾನಿಕ ಜಗತ್ತು ನಮಗೆ ನೀಡಿದ ತಂತ್ರಜ್ಞಾನವನ್ನು ನಮ್ಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಒದಗಿಸುತ್ತಾ ನಮ್ಮ ಶೈಕ್ಷಣಿಕ ಕ್ರಮವನ್ನು ಉತ್ತುಂಗಕ್ಕೇರಿಸುವ ಹೊಸ ಆಶಯಗಳೊಂದಿಗೆ ಶಾಲೆಗೆ ತೆರಳುತ್ತಿದ್ದೇವೆ.

 

ನಾವು ನಾಟಕ ಶಿಕ್ಷಕರಾಗಿ ಆಯ್ಕೆಯಾದಾಗ ನೀನಾಸಮ್  http://www.ninasam.org ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಕೆ.ವಿ.ಅಕ್ಷರ https://en.wikipedia.org/wiki/K._V._Akshara  ಅವರು ನಮಗೆಲ್ಲ “ನೀವು ಕೆಲಸ ಮಾಡುವ ಶಾಲೆಗಳು ಸಾಂಸ್ಕೃತಿಕ ಕೇಂದ್ರಗಳಾಗಿ ಗುರುತಿಸಿಕೊಳ್ಳಬೇಕೆಂದು” ಕಿವಿ ಮಾತು ಹೇಳಿದ್ದರು. ಆ ಸಂದರ್ಭದಲ್ಲಿ ಆಗಿನ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ https://en.wikipedia.org/wiki/Vishweshwar_Hegde_Kageri ಅವರು ಉಪಸ್ಥಿತರಿದ್ದಿದ್ದರು.

ಟಾಲ್ಪ್ ತರಬೇತಿಯ ಬಳಿಕ ಅಕ್ಷರ ಅವರ ಹೇಳಿಕೆಯನ್ನು “ನಮ್ಮ ಶಾಲೆಗಳು ತಂತ್ರಜ್ಞಾನಾಧಾರಿತ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದುಕೊಳ್ಳುತ್ತೇನೆ. ಇಂಥದ್ದೊಂದು ತರಬೇತಿಯನ್ನು ನಮಗೆ ನೀಡಿದ ಘನ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ.

-ಸಂತೋಷ ಗುಡ್ಡಿಯಂಗಡಿ

 

ತರಬೇತಿಯ ಸಮಾರೋಪ

ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಾ.ಪ.ಪೂ.ಕಾಲೇಜಿನ ನೂತನ ಉಪಪ್ರಾಂಶುಪಾಲರಾದ ಶ್ರೀಮತಿ ಬಾಲಸರಸ್ವತಿಯವರು ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀ ಸಿದ್ಧರಾಜು, ದೈ.ಶಿ.ಪರಿವೀಕ್ಷಕರಾದ ಶ್ರೀ ಸ್ವಾಮಿ ಪ್ರಕಾಶ್ ಹಾಜರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಜಿ.ಎಸ್.ವಿಶ್ವನಾಥ ಮತ್ತು ಶ್ರೀನಿವಾಸ ಶೆಟ್ಟಿಗಾರ್ ಅವರು ತಂತ್ರಜ್ಞಾನಾಧಾರಿತ ಕಲಿಕೆಯ ಮಹತ್ವಗಳನ್ನು ಹಂಚಿಕೊಂಡರು. ಶ್ರೀಮತಿ ಶೋಭಾ (ಸಂಸ್ಕೃತ ಶಿಕ್ಷಕಿ, ಬಾ.ಸ.ಪ.ಪೂ.ಕಾ. ನಂಜನಗೂಡು), ಸಂತೋಷ ಗುಡ್ಡಿಯಂಗಡಿ (ನಾಟಕದ ಮೇಷ್ಟ್ರು ಸ.ಪ್ರೌ.ಶಾ. ಹೆಗ್ಗಡಹಳ್ಳಿ) ತರಬೇತಿಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಸ್ವಾಗತ ಕೋರಿದವರು ಶ್ರೀಮತಿ ಟಿ. ಎಸ್. ಪದ್ಮಿನಿ (ಸ.ಶಿಕ್ಷಕಿ ಬಾ.ಸ.ಪ.ಪೂ.ಕಾ. ನಂಜನಗೂಡು). ಪ್ರಾರ್ಥನೆ ಮಾಡಿದವರು ಶ್ರೀ ಅಂದಾನಪ್ಪ (ಸಂಗೀತ ಶಿಕ್ಷಕರು ಬಾ.ಸ.ಪ.ಪೂ.ಕಾ. ನಂಜನಗೂಡು). ನಿರೂಪಣೆ ಶ್ರೀ ದೀಪು (ದೈ.ಶಿ.ಶಿ. ಸ.ಪ್ರೌ.ಶಾಲೆ ಕುಪ್ಪರವಳ್ಳಿ) ವಂದನಾರ್ಪಣೆ ಮಾಡಿದವರು ಶ್ರೀಮತಿ ಪೂರ್ಣಿಮ ಪ್ರಸಾದ್ (ಸ.ಶಿಕ್ಷಕಿ ಬಾ.ಸ.ಪ.ಪೂ.ಕಾ. ನಂಜನಗೂಡು). ಕಾರ್ಯಕ್ರಮದಲ್ಲಿ ಶ್ರೀ ಬಾಲಚಂದ್ರ ಭಟ್ (ಸ.ಶಿ., ಸ.ಪ್ರೌ.ಶಾಲೆ ಹೆಡತಲೆ) ಹಾಜರಿದ್ದರು.


ತರಬೇತಿಯ ಚಿತ್ರ ಸಂಪುಟ










No comments:

Post a Comment