Monday, 29 November 2021
ಸಂವಿಧಾನ ಮತ್ತು ಮಕ್ಕಳ ದಿನಾಚರಣೆ
Saturday, 20 November 2021
ಶಿಕ್ಷಕರ ಕನ್ನಡ ಹಬ್ಬ
ಶಿಕ್ಷಕರ ಕನ್ನಡ ಹಬ್ಬ:
‘ಕನ್ನಡ
ಉಳಿಸಿ ಕನ್ನಡ ಬೆಳೆಸಿ’ ಎಂಬ ಕೂಗು ನವೆಂಬರ್ ತಿಂಗಳಲ್ಲಿ ಕಿವಿ ಮೇಲೆ ಬಿದ್ದು ಹೋಗುತ್ತದೆ. ಅದು ಮತ್ತೆ
ಕೇಳಬೇಕೆಂದರೆ ನವೆಂಬರ್ ಬರುವ ತನಕ ಕಾಯಬೇಕು. ಉಳಿಸಿ ಬೆಳೆಸಿ ಕೂಗಿನ ಆಚೆಗೆ ಕನ್ನಡದ ಹಬ್ಬ ಪ್ರತಿದಿನ
ನಡೆಯುವುದು ಕನ್ನಡ ನಾಡಿನ ಮೂಲೆ ಮೂಲೆಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ. ಲಕ್ಷ ಲಕ್ಷ ಮಕ್ಕಳು, ಸಾವಿರ
ಸಾವಿರ ಶಿಕ್ಷಕರು ಯಾವ ಘೋಷಣೆಯ ಕೂಗದೆ ಕನ್ನಡ ನುಡಿಯ ಜೀವಂತಿಕೆಯಂತೆ ಬದುಕುತ್ತಿದ್ದಾರೆ.
ಕನ್ನಡ ನುಡಿಯ ಕುರಿತು ಹಲವು ಸಮ್ಮೇಳನಗಳು ನಡೆಯುತ್ತವೆ. ಆದರೆ ಮಕ್ಕಳಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಅರಿವು ಬಿತ್ತುವ ಸರ್ಕಾರಿ ಶಾಲೆಯ ಶಿಕ್ಷಕರಿಗಾಗಿ ಕನ್ನಡ ಹಬ್ಬಗಳು ನಡೆಯುವುದು ಅಪರೂಪದಲ್ಲಿ ಅಪರೂಪವೇ ಸರಿ. ನಂಜನಗೂಡಿನಲ್ಲಿ ಅಂಥದ್ದೊಂದು ಅದ್ಭುತ ಪ್ರಯತ್ನ ಇದೇ ನವೆಂಬರ್ 19ರಂದು ನಡೆಯಿತು.
ಉತ್ಸಾಹಿ
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ.ಎನ್.ರಾಜು ಅವರ ಕನಸು ‘ಶಿಕ್ಷಕರ ಕನ್ನಡ ಹಬ್ಬ’ ಯಶಸ್ವಿಯಾಗಿ
ನಡೆಯಿತು. “ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು” ಎಂಬ ವರಕವಿ ಬೇಂದ್ರೆಯವರ ಮಾತಿನಂತೆ ತಾಲೂಕಿನಲ್ಲಿ
ಕನ್ನಡ ಕಲಿಸುವ ಕನ್ನಡ ಶಾಲೆಯ ನಾನೂರಕ್ಕೂ ಅಧಿಕ ಶಿಕ್ಷಕರು ಕನ್ನಡದ ಹಬ್ಬದಲ್ಲಿ ಪಾಲ್ಗೊಂಡಿದ್ದು
ಹೆಮ್ಮೆಯ ಸಂಗತಿ.
ದೀಪ ಬೆಳಗಿಸಿ ಹಬ್ಬಕ್ಕೆ ಚಾಲನೆ ನೀಡಿದ ಪ್ರಾದ್ಯಾಪಕಿ ಶ್ರೀಮತಿ ಜ್ಯೋತಿ ಶಂಕರ್ ಮಾತನಾಡಿ ‘ಕನ್ನಡ ಎಂದೂ ತಲೆ ತಗ್ಗಿಸುವ ಭಾಶೆಯಲ್ಲ ಆದರೂ ಕನ್ನಡ ಮಾತನಾಡುವುದಕ್ಕೆ ನಮಗೆ ಕೀಳರಿಮೆ. ಕನ್ನಡತನ ಬಹಳ ದೊಡ್ಡದು. ಭಾಶೆ ಒಂದು ಸಂಸ್ಕೃತಿಯನ್ನು ಕಟ್ಟಿಕೊಡುತ್ತದೆ. ಶಿಕ್ಷಕರ ಕೆಲಸ ಬಹಳ ಪರಿಶ್ರಮದ್ದು. ಬಳಪ ಹೇಗೆ ಹಿಡಿಯಬೇಕೆಂಬುದು ತಿಳಿಯದ, ಸುರಿಯುವ ಗೊಣ್ಣೆಯ ಒರೆಸಿಕೊಳ್ಳಲುಬಾರದ ಪುಟ್ಟ ಪುಟ್ಟ ಮಕ್ಕಳ ಕೈ ಹಿಡಿದು ತಿದ್ದಿ ತೀಡಿ ಕಲಿಸುವ ಕೆಲಸ ಶ್ರೇಷ್ಠವಾದುದು. ಯಾರು ಮಾತೃಭಾಶೆಯಲ್ಲಿ ಸಮರ್ಥರಲ್ಲವೋ ಅವರು ಎಂದೂ ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯವಿಲ್ಲ ಎಂದರು.
ಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಿನ ಹಿರಿಯ ವಿದ್ವಾಂಸರಾದ ಶ್ರಿ ಸಿ.ಪಿ.ಕೆ ಅವರು ಮಾತನಾಡುತ್ತಾ… ‘ಕನ್ನಡದ ಬೆಳಕು ಒಳಗೂ ಹೊರಗೂ ಸದಾ ಬೆಳಗುತಿರಬೇಕು. ಉತ್ಸವ ಎನ್ನುವ ಸಂಸ್ಕೃತ ಪದದ ಬದಲು ಇಲ್ಲಿ ಹಬ್ಬ ಎಂಬ ಕನ್ನಡದ ಪದ ಬಳಸಿದ್ದು ಆಪ್ತವಾಗಿದೆ. ಕನ್ನಡದ ಬಗ್ಗೆ ಶಿಕ್ಷಕರಿಗೆ ದೊಡ್ಡ ಜವಾಬ್ದಾರಿ, ಹೊಣೆಗಾರಿಕೆಯಿದೆ. ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಬೇಕು, ಚಾರಿತ್ರ್ಯವನ್ನು ಬೆಳೆಸಬೇಕು. ಕನ್ನಡ ಅನ್ನೋದು ಒಂದು ಭಾಶೆಯ ಹೆಸರಲ್ಲ; ಅದೊಂದು ಸಂಸ್ಕೃತಿ ಎಂದರು.
“ಹಿಂದಿ ರಾಷ್ಟ್ರ ಭಾಶೆ ಎಂಬ ತಪ್ಪು ಕಲ್ಪನೆ
ಇದೆ. ಭಾರತದ ಎಲ್ಲಾ ಭಾಶೆಗಳೂ ರಾಷ್ಟ್ರ ಭಾಶೆಗಳೆ. ಆದರೆ ಹಿಂದಿಯನ್ನು ಹಿಂದಿನಿಂದ ಹೇರಿಕೆ ಮಾಡಲಾಗುತ್ತಿದೆ.
ಅದು ಸರಿಯಲ್ಲ. ಪ್ರಾಥಮಿಕ ಹಂತದಲ್ಲಿ ಕನ್ನಡವೇ ಶಿಕ್ಷಣದ ಮಾಧ್ಯಮವಾಗಬೇಕು” –ಸಿ.ಪಿ.ಕೆ.
ಶಿಕ್ಷಕರ ಕನ್ನಡ ಹಬ್ಬದ ಬೆಳಗಿನ ಅವಧಿಯಲ್ಲಿ ಇಬ್ಬರು ಮಹನೀಯರ ಮಾತುಗಳ ನಂತರ ತಾಲೂಕಿನಲ್ಲಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಶಿಕ್ಷಕರಾದ ವೈ. ಎಸ್. ಹರಗಿ (ಹುಲ್ಲಹಳ್ಳಿ ಪ್ರೌಢ ಶಾಲೆ) ಸಂತೋಷ ಗುಡ್ಡಿಯಂಗಡಿ ( ಹೆಗ್ಗಡಹಳ್ಳಿ ಪ್ರೌಢಶಾಲೆ), ವಿಜಯಕುಮಾರ್ (ಹುಲ್ಲಹಳ್ಳಿ ಪ್ರೌಢ ಶಾಲೆ) ಸತೀಶ್ ದಳವಾಯಿ(ಹಳ್ಳದಕೇರಿ ಶಾಲೆ) ಮಹದೇವ ನಾಯಕ (ಕಳಲೆ ಶಾಲೆ) ಇವರನ್ನು ಸನ್ಮಾನಿಸಲಾಯಿತು.
ಜಾನಪದ ವಿದ್ವಾಂಸರಾದ ಶ್ರೀ ಪಿ.ಕೆ.ರಾಜಶೇಖರ್
ಮದ್ಯಾಹ್ನದ
ಅವಧಿಯಲ್ಲಿ ಹಿರಿಯ ಜಾನಪದ ವಿದ್ವಾಂಸರಾದ ಶ್ರೀ ಪಿ.ಕೆ.ರಾಜಶೇಖರ್ ಅವರು ಕನ್ನಡ ಜಾನಪದ ಸಿರಿಯ ಕುರಿತು
ಮಾತನಾಡಿದರು. ‘ಜಾನಪದ ಎಂದರೆ ಜನರ ಪದ. ಪದ ಎಂದರೆ ಪಾದ. ಪದ ಬಿಟ್ಟು ಪದ ಬಿಟ್ಟು ಮಾಡಿಕೊಂಡ ಹಾದಿಯೇ
ಜನಪದ. ಸಮಗ್ರ ಜಾನಪದ ಎಂದರೆ ಒಂದು ಜನ ಸಮುದಾಯದ ಪರಿಪೂರ್ಣ ಬದುಕು. ಜನಪದ ಇನ್ನು ಯಾಕೆ ಜೀವಂತವಾಗಿದೆಯೆಂದರೆ
ಅದರಲ್ಲಿರುವ ಸತ್ವದಿಂದ, ಅದರಲ್ಲಿ ಚಿತ್ರಿತವಾಗಿರುವ ಜೀವನ ಚಿತ್ರಣದಿಂದ’ ಎಂದು ಜನಪದದ ಹಿರಿಮೆಯನ್ನು
ಸಾರುತ್ತಲೆ ಕತೆ, ಹಾಡು, ಒಗಟು, ಹಾಸ್ಯಗಳ ರಸಧಾರೆಯನ್ನು ಶಿಕ್ಷಕರಿಗೆ ಉಣಬಡಿಸಿದರು.
‘ಹಚ್ಚೇವು ಕನ್ನಡದ ದೀಪ’ ಎಂದು ಹೆಗ್ಗಡಹಳ್ಳಿಯ ಶಿಕ್ಷಕಿ ಸುನಂದ ಅವರ ಮುಂದಾಳತ್ವದಲ್ಲಿ ತಾಲೂಕಿನ ವಿವಿಧ ಶಾಲೆಯ ಶಿಕ್ಷಕಿಯರು ನೃತ್ಯ ಮಾಡಿದರು. ‘ಚೆಲುವಯ್ಯ ಚೆಲುವೋ’ ಎಂದು ಕೋಲಾಟ ಮಾಡಿದ್ದು ಶಿಕ್ಷಕಿ ರಾಧಿಕಾ ಮತ್ತವರ ಹಿರಿಯ ಶಿಕ್ಷಕಿಯರನ್ನೊಳಗೊಂಡ ತಂಡ. ದೇಬೂರು ಶಾಲೆಯ ರವಿಕುಮಾರ್ ಮತ್ತು ತಂಡದವರು ಕಂಸಾಳೆ ಹಿಡಿದು ಕುಣಿದರು. ಸಿ.ಆರ್.ಪಿ. ಮಂಜುನಾಥ್ ಮತ್ತು ತಂಡದವರು ಸಿದ್ದಪ್ಪಾಜಿಯ ನೆನೆದು ತಂಬೂರಿ ಪದವ ಹಾಡಿದರು. ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಹಬ್ಬದ ಸಮಿತಿಯ ಸದಸ್ಯರೊಂದಿಗೆ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’ ಹಾಡನ್ನು ಹಾಡಿದರೆ ವಿವಿಧ ಶಿಕ್ಷಕರು ಕನ್ನಡಗೀತೆಗಳನ್ನು ಹಾಡಿದರು.
ಶಿಕ್ಷಕರ ಕವಿಗೋಷ್ಠಿ.
ಕನ್ನಡ
ಹಬ್ಬದಲ್ಲಿ ತಾಲೂಕಿನ 24 ಶಿಕ್ಷಕ ಕವಿಗಳ ಕವಿಗೋಷ್ಠಿ ನಡೆಯಿತು. ಅಧ್ಯಕ್ಷತೆಯನ್ನು ಹುಲ್ಲಹಳ್ಳಿ ಸರ್ಕಾರಿ
ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ವೈ.ಎಸ್.ಹರಗಿ
ವಹಿಸಿದ್ದರು. ಹಳ್ಳದಕೇರಿ ಶಾಲೆಯ ಸತೀಶ್ ದಳವಾಯಿ ಕವಿಗೋಷ್ಠಿ ನಡೆಸಿಕೊಟ್ಟರು. ಕನ್ನಡ ನಾಡು ನುಡಿ
ಕುರಿತಾಗಿಯೇ ಬಹುತೇಕ ಕವಿತೆಗಳಿದ್ದವು. ಮಡುವಿನಹಳ್ಳಿ ಪ್ರೌಢ ಶಾಲೆಯ ಪ್ರಕಾಶ್ ಅವರ ಗಡಿನಾಡ ಕನ್ನಡಿಗರ
ನೋವಿಗೆ ಮಿಡಿದ ‘ನಾವು ನಿಮ್ಮವರಲ್ಲವೆ’ ಎಂಬ ಕವಿತೆ ವಿಶಿಷ್ಠವಾಗಿತ್ತು.
ಕನ್ನಡ
ಹಬ್ಬದ ಬೆಳಗಿನ ಅವಧಿಯ ಕಾರ್ಯಕ್ರಮದ ನಿರೂಪಣೆ ಮಾಡಿದವರು ದೇಬೂರಿನ ಆದರ್ಶ ಶಾಲೆಯ ಶ್ರೀ ಮಹೇಶ್ ಮತ್ತು
ತಾಯೂರು ಸ|| ಹಿ|| ಪ್ರಾ|| ಶಾಲೆಯ ಶ್ರೀಮತಿ ರೇಖಾ ಅವರು. ಮದ್ಯಾಹ್ನದ ಅವಧಿಯ ಕಾರ್ಯಕ್ರಮ ನಿರೂಪಿಸಿದವರು
ನವಿಲೂರಿನ ಸ|| ಪ್ರೌ|| ಶಾಲೆಯ ಶ್ರೀಕಂಠಮೂರ್ತಿ ಎಂ. ಮತ್ತು ಸ||ಹಿ||ಪ್ರಾ|| ಶಾಲೆ ಬೊಕ್ಕಹಳ್ಳಿಯ
ಶ್ರೀಮತಿ ರೇಖಾ ಅವರು.