ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ದಿವ್ಯ ಶಿಶು
ಇಂದು ನೋಡಿದಲ್ಲೆಲ್ಲ ಮಕ್ಕಳ ಮುಗ್ಧ, ಸುಕೋಮಲ, ತುಂಟತನದ, ಹೂ ಹೂ ಅರಳಿರುವ ಮಕ್ಕಳ ಚಿತ್ರಗಳು ಕಣ್ಣಿಗೆ ಬೀಳುತ್ತವೆ. ಕೀಲಿ ಕೈ ಚೈನ್, ಕ್ಯಾಲೆಂಡರ್, ಶುಭಾಶಯ ಕಾರ್ಡುಗಳು, ಬ್ಯಾಂಕಿನ ಆಕರ್ಷಕ ಜಾಹಿರಾತುಗಳು, ಸೋಪು, ಚಾಕ್ಲೇಟು, ಬಟ್ಟೆ– ಎಷ್ಟೊಂದು ಜಾಹೀರಾತುಗಳು ಮಕ್ಕಳನ್ನ ಆಶ್ರಯಿಸಿಕೊಂಡಿವೆ.
ಅಮೆರಿಕದ ಇತ್ತೀಚಿನ ಒಂದು ಸಮೀಕ್ಷೆ ಹೇಳುವಂತೆ ಅಲ್ಲಿ ವರುಷದುದ್ದಕ್ಕೂ ತೆಗೆಯುವ ೨೫ ಶತಕೋಟಿ ಫೋಟೋಗ್ರಾಫ್‌ಗಳಲ್ಲಿ ಸರಿ ಸುಮಾರು ಅರ್ಧದಷ್ಟು ಪುಟ್ಟ ಮಕ್ಕಳವೇ. ನಮ್ಮ ಸ್ವಾರ್ಥಮಯವಾದ ರಾಜಕೀಯ, ಹದಗೆಟ್ಟ ಆರ್ಥಿಕತೆ, ದಗಲಬಾಜಿತನ, ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳು, ಅತ್ಯಾಚಾರಗಳು– ಊಂ ಹೂಂ ಯಾವುದರ ಸೋಂಕೂ ಇಲ್ಲದೆ ಮೇಲೆಲ್ಲಿಂದಲೋ ಹಾರಿ ಬಂದ ಹೂವುಗಳಂತೆ ಮುಗ್ಧತೆಯನ್ನ ಹೊಂದಿರುವ ಮಕ್ಕಳ ಮುಖಗಳು, ಅವುಗಳ ಸೊಗಸಿನ ಮಾತುಕತೆಗಳು, ಓಡಾಟಗಳು ಇವನ್ನೇ ಈ ವ್ಯಾಪಾರಿ ಜಗತ್ತು ಆಶ್ರಯಿಸಿರುವುದು ಒಂದು ಬಗೆಯಲ್ಲಿ ವಿಡಂಬನಾತ್ಮಕವಾಗಿದೆ. ಅದು ನಮ್ಮೊಳಗಿನ ಕಳೆದುಕೊಳ್ಳುತ್ತಿರುವ ಸ್ವಚ್ಛ, ಅಕಲುಷಿತ ಮನಸ್ಸಿನ ಅಭಿವ್ಯಕ್ತಿಯೇ ಆಗಿದೆ ಎಂದರೆ ತಪ್ಪಿಲ್ಲ.
ಬಾಲ್ಯ ಒಮ್ಮೆ ಸರಿದು ಹೋದ ಮೇಲೆ ಮತ್ತೆ ಬರುವುದಿಲ್ಲ ಅನ್ನುವುದನ್ನ ನಾವು ಎಷ್ಟು ಸಲ ಹೇಳಿಕೊಂಡಿದ್ದೇವೆ, ಹೇಳಿಕೊಳ್ಳುತ್ತಲೇ ಇರುತ್ತೇವೆ. ನಾವು ಬಾಲ್ಯವನ್ನ ನಮ್ಮ ಸದ್ಯದ ತುರ್ತಿನಲ್ಲಿ, ಏನೇನೋ ಒತ್ತಡಗಳಲ್ಲಿ, ಅನಿವಾರ್ಯಗಳಲ್ಲಿ ಇರಿಸಿಯೇ ಕಾಣತೊಡಗುತ್ತೇವೆ. ಎಲ್ಲೋ ಕೆಲವರು ಏನೆಲ್ಲ ಧಾವಂತದ ವಾತಾವರಣದ ಮಧ್ಯೆಯೂ ನಿರಾಳವಾಗಿ ತಮ್ಮದೇ ಹೆಜ್ಜೆಗಳನ್ನ ಯಾರ ದನಿಗೂ ಕಿವಿಗೊಡದಂತೆ ಗಟ್ಟಿಯಾಗಿ ಇಡಲು ಬಯಸುತ್ತಾರೆ, ಅಂಥವು ನಮ್ಮ ಸುತ್ತಮುತ್ತ ವಿರಳಾತಿವಿರಳವಾದರೂ ಅಲ್ಲಲ್ಲಿ ಕಾಣಸಿಗುತ್ತವೆ.
ಅವೆಲ್ಲ ಒಂದು ಬಗೆಯಲ್ಲಿ ಪ್ರಯೋಗಗಳೆನಿಸಿದರೂ ಕುತೂಹಲ ಮೂಡಿಸುತ್ತವೆ. ಆದರೆ ಜನಸಾಮಾನ್ಯ ಅಂದುಕೊಳ್ಳುವ ಉಳಿದೆಲ್ಲರು, ಅವರನ್ನ ಇವರು ನೋಡಿ ಇವರನ್ನ ಅವರು ನೋಡಿ ಒಬ್ಬರ ಹಿಂದೆ ಇನ್ನೊಬ್ಬರಾಗಿ ಅದ್ಯಾವುದೋ ಭರವಸೆಯ ಆಸರೆ ಭಾವಿಸಿಕೊಳ್ಳುತ್ತ ಹೆಜ್ಜೆ ಇಡುವವರೆ. ಅವರದ್ದೇನೂ ತಪ್ಪಲ್ಲ, ಬೆರಳು ಮಾಡಿ ತೋರಿಸುವಂತೆಯೂ ಇಲ್ಲ. ಯಾಕೆಂದರೆ ನಮ್ಮ ಮುಂದಿನ ಇಂದಿನ ಹತ್ತು ಹಲವು ಸವಾಲುಗಳಿಗೆ ನಮ್ಮ ಬಳಿ ಪರ್ಯಾಯದ ಉತ್ತರಗಳಿಲ್ಲ.
ಹಾಗಿದ್ದರೆ ಸುಮ್ಮನೆ ನಿರುತ್ತರರಾಗಿ ಕೂತು ಬಿಡೋಣವೆ? ಕೈ ಕೈ ಹೊಸಕಿಕೊಳ್ಳುತ್ತ ಅಸಹಾಯಕರಾಗಿಯೇ ಉಳಿದುಬಿಡೋಣವೆ? ಇರಲಿಕ್ಕಾಗದು, ಮನಸ್ಸು ಕೇಳಬೇಕಲ್ಲ, ಹಾವಾಡಿಸುತ್ತದೆ. ನಮ್ಮ ಮಕ್ಕಳನ್ನ ಏನೆಲ್ಲ ಗಡಿಬಿಡಿಯ ಮಧ್ಯೆಯೂ ಹಕ್ಕಿಯ ಹಾಗೆ ಭಾವಿಸಿಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ಹಾಗೆ ನಿಲ್ಲದಿರುವಿಕೆಯೇ ಏನಾದರೂ ದಾರಿಗಳನ್ನ ಕಂಡುಕೊಳ್ಳಲು ಹಚ್ಚುತ್ತದೆ.
ಮಕ್ಕಳದೇ ಸಮಯ ಅಂತ ಇರಬೇಕು. ಆ ಸಮಯದಲ್ಲಿ ಹಿರಿಯರು ದೂರ ಉಳಿದು ಅವಕ್ಕೆ ಸಾಧ್ಯವಾದಷ್ಟೂ ಸ್ವಾತಂತ್ರ್ಯ ನೀಡಬೇಕು ಅನಿಸುತ್ತದೆ. ಇವತ್ತಿನ ದಿನಗಳಲ್ಲಿ ಇದನ್ನ ಹೇಗೆಲ್ಲ ಸಾಧ್ಯ ಮಾಡಿಕೊಡಬೇಕು ಅನ್ನೋದನ್ನ ತಮ್ಮ ತಮ್ಮ ಪರಿಸರಗಳಲ್ಲಿ ಹಿರಿಯರು ಕಂಡುಕೊಳ್ಳಬೇಕು ಅನಿಸುತ್ತದೆ.
ಹೀಗೆ ಮಕ್ಕಳದೇ ಆದ ಸಮಯವಿರುವಾಗ ಮಗು ತನ್ನದನ್ನ ಯಾವ ಸಂಕೋಚವಿಲ್ಲದೆ ಹೊರಹಾಕಲು, ತನ್ನ ಸುತ್ತಲಿನದರೆಡೆಗೆ ಅರಿವಿನ ಕಣ್ಣಿಂದ ನೋಡಲು ಸಾಧ್ಯವಾಗುತ್ತದೆ. ಇಂಥಲ್ಲಿ ಹಿರಿಯರು ಮೂಗು ತೂರಿಸುವುದನ್ನ ನಿಲ್ಲಿಸುವುದು ಎಲ್ಲಕ್ಕಿಂತ ಅಗತ್ಯ. ಯಾವ ಸಂಕೋಚಗಳು, ನಿರ್ಬಂಧಗಳು ಇರಕೂಡದು.
ಇಂಥ ಸಮಯವನ್ನ ಇಂದು ರಜೆಯ ದಿನಗಳಲ್ಲಿ ಶಹರಗಳಲ್ಲಿ ಹುಟ್ಟಿಕೊಂಡಿರುವ ಮಕ್ಕಳ ಕ್ಯಾಂಪುಗಳು, ರಜಾ ಶಿಬಿರಗಳು ಇಂಥವುಗಳಲ್ಲಿ ಕಾಣುವುದಾಗಬಾರದು ಎಂದೇ ನಾನನ್ನುವುದು. ಇಂಥಲ್ಲಿ ಏನೇ ಪಠ್ಯೇತರ ಚಟುವಟಿಕೆಗೆ ನಾವು ಮಕ್ಕಳನ್ನ ತೆರೆದುಕೊಳ್ಳುತ್ತೇವೆ ಎಂದರೂ ದೊಡ್ಡವರ ಆವಾರಗಳಲ್ಲಿಯೇ ಇವು ನಡೆಯುವುದು ಖಂಡಿತ.
ಮತ್ತೆ ನಮ್ಮ ದೊಡ್ಡ ತಲೆಗಳೇ ತಮ್ಮ ಅಗತ್ಯಗಳಿಗೆ ದಾರಿಮಾಡಿಕೊಳ್ಳುವುದು ಇಲ್ಲಿ ನಡೆಯುತ್ತದೆ. ಇದೆಲ್ಲ ಬೇಡವೇ ಬೇಡ ಎನ್ನುವುದೂ ವ್ಯತಿರಿಕ್ತವಾದೀತು. ಆದರೆ ಇಂಥ ಪ್ರಯತ್ನಗಳಿಂದಾಚೆ ಸಹಜವಾದ ಮಕ್ಕಳದೇ ಆದ ಸಮಯ ಕಂಡುಕೊಳ್ಳುವ ಜರೂರಿ ಇದೆ.
ದೊಡ್ಡವರು ಮಕ್ಕಳ ಜೊತೆಗೆ ಕಳೆಯುವ ಸಮಯದ ಅಗತ್ಯವಂತೂ ಯಾವಾಗಲೂ ಇದ್ದದ್ದೇ. ಮಕ್ಕಳು ಇದನ್ನ ಅನಿವಾರ್ಯವಾಗಿಯೂ, ಅಭಿಲಾಶೆಯಾಗಿಯೂ ಹಂಬಲಿಸುತ್ತಾರೆ. ವಿವಿಧ ವಯೋಮಾನಗಳ ಬಯಕೆಗಳು ವಿವಿಧವಾಗಿರುತ್ತವೆ ಎನ್ನುವುದು ಮತ್ತೊಂದು.
ಮಕ್ಕಳ ನಡುವೆ ಸಮಯ ಮಾಡಿಕೊಳ್ಳುವುದಕ್ಕೆ ವಿಶೇಷ ಪರಿಣತಿ ಬೇಕಿಲ್ಲ, ನಾವು ನಾವಾಗಿದ್ದರೆ ಅದೇ ಸಾಕು. ಅವುಗಳ ನಗೆಯೊಂದಿಗೆ ನಗೆ ಬೆರೆಸಲು, ಜಿಗಿತ ಕುಣಿತದೊಂದಿಗೆ ಮೈಮಾಟಗಳನ್ನ ಹೊಂದಿಸಿಕೊಳ್ಳಲು, ಎಲ್ಲ ಮರೆತು ಸೋಲನ್ನ ಅನುಭವಿಸಲು, ಗೆಲುವನ್ನ ಭಾವಿಸಲು ಸಿದ್ಧವಾದರಾಯಿತು. ಪುಟ್ಟ ಮಗುವೊಂದು ಅಪ್ಪ ಅಮ್ಮನ ಸ್ಪರ್ಶಕ್ಕೆ ಏನೆಲ್ಲ ಬಗೆಯಲ್ಲಿ ಕಾಯುತ್ತದಂತೆ. ನಾವೊಂದಿಷ್ಟು ನಮ್ಮ ಕೆಲಸಗಳನ್ನ, ನಮ್ಮ ಧಾವಂತಗಳನ್ನ, ಒಂದಿಷ್ಟು ಬದಿಗೆ ಇಡುವುದನ್ನ ರೂಢಿ ಮಾಡಿಕೊಳ್ಳುವ ಅಗತ್ಯ ಖಂಡಿತ ಇದೆ.
ಯಾವ ಕಾಳಜಿಯೂ ಇಲ್ಲದ ಮಕ್ಕಳೂ ನಮ್ಮ ನಡುವೆ ಇರುವ ಹಾಗೆ ಅತಿ ಮುದ್ದಿಸುವಿಕೆಯಲ್ಲಿ ಇರುವ ಮಕ್ಕಳ ಜಗತ್ತೂ ನಮ್ಮ ನಡುವಿದೆ. ಇಂದು ಒಂದೆಡೆ ಸರಕಾರದ ನಾನಾ ಬಗೆಯ ಯೋಜನೆಗಳು, ಸಂಘ ಸಂಸ್ಥೆಗಳು ಅತಿ ಕನಿಷ್ಠದ ಮಗುವನಿಡೆಗೂ ಚಾಚಿಕೊಳ್ಳುವ ಹಲವಿಧಧ ಚಟುವಟಿಕೆಗಳನ್ನ ರೂಪಿಸಿಕೊಳ್ಳುವುದನ್ನ ನೊಡುತ್ತಿದ್ದೇವೆ.
ಅದೇ ಇನ್ನೊಂದೆಡೆಗೆ ಅಪ್ಪ ಅಮ್ಮ ಮಕ್ಕಳನ್ನ ಏನೆಲ್ಲ ಕಟ್ಟುನಿಟ್ಟಿನ ತಯಾರಿಯಲ್ಲಿ, ಒಂದಿಷ್ಟೂ ಕೊರತೆ ಬೀಳದಿರುವಂತೆ ನೊಡಿಕೊಳ್ಳಲು ಶ್ರಮ ಪಡುವುದನ್ನ ನೋಡುತ್ತಿದ್ದೇವೆ. ವಿಪರ್ಯಾಸದ ನಾನಾ ಬಗೆಯ ಸಂದರ್ಭಗಳು ನಮ್ಮ ನಡುವೆ ಹಬ್ಬಿ ಹೋಗಿವೆ. ಯಾವ ಯಾವ ಮಗುವಿಗೆ ಏನೇನನ್ನ ನೀಡಲು ನಾವು ಶಕ್ತರಾಗುತ್ತೇವೋ ಗೊತ್ತಿಲ್ಲ.
ಮಕ್ಕಳಿಗೆ ಕೇವಲ ಆದರ್ಶವನ್ನ ಹೇಳುವುದರಲ್ಲಿ ಯಾವ ಅರ್ಥವೂ ಇಲ್ಲ. ಜೆ.ಎಮ್. ಬೆರ್ರಿಯ ಪೀಟರ್ ಪ್ಯಾನ್ ಅನುಭವಿಸುವ ‘ನೆವರ್ ಲ್ಯಾಂಡ್’ ಕೇವಲ ರೂಪಕವಾಗಿ ಉಳಿದುಹೋಗುವುದಕ್ಕಿಂತ ಸಾಧ್ಯವಾದ ಬಗೆಯಲ್ಲಿ ನಮ್ಮ ನಡುವೆ ಅರಳುವುದರ ಕಡೆಗೆ ನಮ್ಮೆಲ್ಲ ತುಡಿತ ಇರಬೇಕು.
ಮಕ್ಕಳಿಗೆ ನಾನಾ ಕಡೆಯ ಅಂದದ ಪುಸ್ತಕಗಳನ್ನ ಒದಗಿಸೋಣ, ಓದಿನ ಸಂತಸದ ಸಮಯ ಮಾಡಿಕೊಡೋಣ, ಟ್ರೆಕ್ಕಿಂಗ್ ಅಂತ ಕರೆದುಕೊಂಡು ಹಸಿರು ಪ್ರಕೃತಿಯಲ್ಲಿ ಸುತ್ತಾಡಿಸೋಣ, ಬಯಲಿನಲ್ಲಿ ಹಲವಂದದ ಆಟಗಳಲ್ಲಿ ಮುಳುಗಿಸೋಣ, ಚೆಂದದ ಕರಕುಶಲ ಕಲೆಯಲ್ಲಿ ಮನ ತೊಡಗಿಸೋಣ, ನಾಟಕಗಳಲ್ಲಿ ಸಮಯ ಕಂಡುಕೊಳ್ಳೋಣ, ಏನೇನು ಬೇಕನಿಸುತ್ತೋ ಎಲ್ಲವನ್ನ ಮಾಡೋಣ.
ಅದರೊಟ್ಟಿಗೇ ಮಕ್ಕಳ ಮೇಲೆ ನಮ್ಮದನ್ನ ಹೇರುವುದನ್ನ ಬದಿಗಿರಿಸಿ ಅವರ ಹತ್ತಿರದಲ್ಲಿದ್ದು ಅವರನ್ನ ಆಲಿಸುವುದಕ್ಕೆ ನಮ್ಮ ಮನಸ್ಸುಗಳನ್ನು ಸಜ್ಜುಗೊಳಿಸಿಕೊಳ್ಳೋಣ. ನಾಟಕಗಳಲ್ಲಿ ತುಂಬಾ ಸಮಯದಿಂದ ತೊಡಗಿಕೊಂಡಿರುವ ಮೂರ್ತಿ ದೆರಾಜೆ ಅವರು ಕಂಡುಕೊಂಡಿರುವ ಸಂಗತಿ ನಾಟಕವೂ ಒಂದು ಆಟವಾಗುವುದರಿಂದ ಆನಂದದಾಯಕವಾಗಿರುತ್ತದೆ. ಇದು ನಾಟಕವನ್ನ ಕೇವಲ ಪ್ರದರ್ಶನಕ್ಕಿಂತ ಆಚೆ ವಿಸ್ತರಿಸಿಕೊಂಡಿರುವುದು, ಮಕ್ಕಳ ನಡುವೆ ಹೊಸ ಲೋಕವನ್ನ ಕಂಡುಕೊಳ್ಳುವ ಹವಣಿಕೆಯದು.
ಕುವೆಂಪು ಅವರ ಈ ಪ್ರಸಿದ್ಧ ಸಾಲುಗಳು ಮಕ್ಕಳನ್ನ ಮಕ್ಕಳನ್ನಾಗಿ ಉಳಿಸಿಕೊಳ್ಳುವುದು ಮಕ್ಕಳಿಗಿಂತ ನಮಗಾಗಿ ಎನ್ನುವ ಹಂಬಲವನ್ನ ಗಾಢವಾಗಿ ಹೇಳುತ್ತವೆ...
ದೊಡ್ಡವರೆಲ್ಲರ ಹೃದಯದಿ ಕಟ್ಟಿಹ / ತೊಟ್ಟಿಲ ಲೋಕದಲಿ /
ನಿತ್ಯ ಕಿಶೋರತೆ ನಿದ್ರಿಸುತಿರುವುದು / ವಿಸ್ತೃತ ನಾಕದಲಿ /
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ / ಆನಂದದ ಆ ದಿವ್ಯ ಶಿಶು /
ಹಾಡಲಿ ಕುಣಿಯಲಿ ಹಾರಲಿ ಏರಲಿ / ದಿವಿಜತ್ವಕೆ ಈ ಮನುಜ ಪಶು
ನಿತ್ಯ ಕಿಶೋರತೆ ನಿದ್ರಿಸುತಿರುವುದು / ವಿಸ್ತೃತ ನಾಕದಲಿ /
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ / ಆನಂದದ ಆ ದಿವ್ಯ ಶಿಶು /
ಹಾಡಲಿ ಕುಣಿಯಲಿ ಹಾರಲಿ ಏರಲಿ / ದಿವಿಜತ್ವಕೆ ಈ ಮನುಜ ಪಶು
ಡಾ. ಆನಂದ ವಿ. ಪಾಟೀಲ
No comments:
Post a Comment