Thursday, 30 December 2021

ಅಗಣಿತ ಕುಶಿಯ ಗಣಿತ ಹಬ್ಬ


ಣಿತವನ್ನೂ ಹಬ್ಬವಾಗಿಸಬಹುದೆಂಬುವುದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ ನಂಜನಗೂಡಿನಲ್ಲಿ ನಡೆದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ. ನಂಜನಗೂಡು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ. ಎನ್. ರಾಜು ಅವರ ಕ್ರಿಯಾಶೀಲತೆಯಿಂದಾಗಿ ತಾಲೂಕಿನಲ್ಲಿ ಕಾರ್ಯನಿರ್ವಹಿಸಿತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರಿಗಾಗಿ ಅವರವರ ವಿಷಯಗಳ ಹಬ್ಬಗಳನ್ನು ಆಚರಿಸಿ ತಾಲೂಕಿನ ಶೈಕ್ಷಣಿಕ ಚಟುವಟಿಕೆಗಳಿಗೆ ಹೊಸ ಹುರುಪು ತಂದುಕೊಟ್ಟಿದೆ.

ಈಗಾಗಲೇ ತಾಲೂಕಿನ ಶಿಕ್ಷಕರಿಗಾಗಿ ವಿಜ್ಞಾನ ಹಬ್ಬ ಮತ್ತು ಕನ್ನಡಹಬ್ಬಗಳು ನಡೆದು ಅಭೂತಪೂರ್ವ ಯಶಸ್ಸು ಕಂಡಿವೆ.  ವಿಜ್ಞಾನ ಬೋಧನೆಯಲ್ಲಿ ಹೇಗೆಲ್ಲ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬಹುದೆಂಬುದನ್ನು ಶಿಕ್ಷಕರು ಮಾಡಿದ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ತೋರಿಸಿಕೊಟ್ಟಿದೆ. ಇನ್ನು ಕನ್ನಡ ಹಬ್ಬದಲ್ಲಿ ತಾಲೂಕಿನ ಕನ್ನಡ ಶಿಕ್ಷಕರ ಪ್ರತಿಭಾವಿಲಾಸಕ್ಕೊಂದು ವೇದಿಕೆ ರೂಪುಗೊಂಡಿತು. ಪ್ರತೀ ವಿಷಯಗಳ ಹಬ್ಬದಲ್ಲಿ ಆಯಾಯ ವಿಷಯದ ಉತ್ತಮ ಶಿಕ್ಷಕರನ್ನು ಗುರುತಿಸುವ ಗೌರವಿಸುವ ಸತ್ಸಂಪ್ರದಾಯ ಹಾಕಿಕೊಟ್ಟದ್ದು ಶ್ರೀ ರಾಜು ಸರ್ ಅವರು ಶಿಕ್ಷಕರ ಮೇಲಿಟ್ಟಿರುವ ನಂಬಿಕೆಯ ದ್ಯೋತಕಂತಿದೆ.

ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಗಣಿತ ಹಬ್ಬವನ್ನಾಗಿಸಿದ್ದು ಬಹುಶಃ ಶಿಕ್ಷಣಾಧಿಕಾರಿಯೊಬ್ಬರು ಹೇಗೆ ಧನಾತ್ಮಕವಾಗಿ ಶಿಕ್ಷಣದ ಬಗ್ಗೆ ಯೋಚಿಸಬಹುದೆಂಬುದಕ್ಕೆ ಸಾಕ್ಷಿ. ಗಣಿತ ಕ್ಷೇತ್ರದ ಮೇಧಾವಿ ಶ್ರೀನಿವಾಸನ್ ಅವರ ಜನುಮದಿನವನ್ನು, ಸಾಹಿತ್ಯ ಕ್ಷೇತ್ರದ ಮೇರು ವ್ಯಕ್ತಿತ್ವ ಮಹಾಕವಿ ಕುವೆಂಪು ಅವರ ಜನುಮದಿನದಂದು ಆಚರಿಸಿ ಎರಡು ಶ್ರೇಷ್ಠ ವ್ಯಕ್ತಿತ್ವಗಳಿಗೆ ಗೌರವ ಸಲ್ಲಿಸಿ, ತಾಲೂಕಿನ ಗಣಿತ ಶಿಕ್ಷಕರನ್ನು ಒಂದಿಡೀ ದಿವಸ ಹಬ್ಬದ ಸಂಭ್ರಮದಲ್ಲಿ ತೇಲಿಸಿತ್ತು. ಶಿಕ್ಷಕರಿಗಾಗಿ ಗಣಿತ ರಸಪ್ರಶ್ನೆ, ಗಣಿತ ವಸ್ತು ಪ್ರದರ್ಶನ, ಗಣಿತ ನಾಟಕ, ಗಣಿತದ ಬಗ್ಗೆ ವಿಚಾರ ಮಂಥನವು ಗಣಿತವೆಂದರೆ ಕಬ್ಬಿಣದ ಕಡಲೆ ಎಂಬ ಎಂಬ ಮಾತನ್ನು ಸುಳ್ಳಾಗಿಸುವಂತಿತ್ತು.

 

ಪೈಥಾಗೊರಸ್ ನಾಟಕ



ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ರಂಗ ಶಿಕ್ಷಕ ಸಂತೋಷ ಗುಡ್ಡಿಯಂಗಡಿ ನಿರ್ದೇಶನದಲ್ಲಿ ಪೈಥಾಗೊರಸ್ ಪ್ರಮೇಯವನ್ನು ರಂಗಕ್ಕೆ ಅಳವಡಿಸಿ ಗಣಿತ ಹಬ್ಬದಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದರು. ಪ್ರಮೇಯವೊಂದರ ಎಳೆ ಎತ್ತಿಕೊಂಡು… ಮಗುವೊಂದು ಶಾಲೆ ಬಿಡುವುದಕ್ಕೆ ಕ್ಲಿಷ್ಠಕರವಾದ ಗಣಿತವೂ ಕಾರಣವಾಗಬಹುದು ಮತ್ತು ಅದೇ ಗಣಿತ ಸರಳವಾದಾಗ ಮಗು ಮತ್ತೆ ಶಾಲೆಯತ್ತ ಮುಖಮಾಡುತ್ತದೆ. ನಂಜನಗೂಡಿನ ಗ್ರಾಮ್ಯಭಾಶೆಯಲ್ಲಿ ಕಟ್ಟಿದ ಪೈಥಾಗೊರಸ್ ನಾಟಕ ಹಾಡು ಆಟ, ಕುಣಿತಗಳ ಮೂಲಕ ಪ್ರಮೇಯವನ್ನು ತಿಳಿಸಿಕೊಡುತ್ತಲೆ ಸರ್ಕಾರಿ ಶಾಲೆಯ ಮಹತ್ವವನ್ನೂ ಸಾರುತ್ತಿತ್ತು. ತಾಲೂಕಿನ ಎಲ್ಲಾ ಗಣಿತ ಶಿಕ್ಷಕರು ಈ ನಾಟಕ ಪ್ರದರ್ಶನವನ್ನು ಮೆಚ್ಚಿಕೊಂಡು ಮಕ್ಕಳನ್ನು ಅಭಿನಂದಿಸಿದರು. ರಂಗಕಲೆಯ ತಂತ್ರಗಳನ್ನು ಅಳವಡಿಸಿಕೊಂಡು ಗಣಿತವನ್ನು ಸರಳವಾಗಿ ಕಲಿಸಿಕೊಡಬಹುದು ಎಂಬುದು ಈ ರಂಗಪ್ರಯೋಗದಿಂದ ಸಾಬೀತಾಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಗಳು ಮಕ್ಕಳ ತಂಡವನ್ನು ಅಭಿನಂದಿಸಿದರು.

ಗಣಿತ ರಸಪ್ರಶ್ನೆ

ತಾಲೂಕಿನ ಕ್ರಿಯಾಶೀಲ ಗಣಿತ ಶಿಕ್ಷಕರಾದ ಹೆಡತಲೆ ಪ್ರೌಢ ಶಾಲೆಯ ಹರ್ಷ ಎಸ್. ಮತ್ತು ಹುಲ್ಲಹಳ್ಳಿ ಪ್ರೌಢ ಶಾಲೆಯ ಸತೀಶ್ ಅವರ ನೇತೃತ್ವದಲ್ಲಿ ಶಿಕ್ಷಕರಿಗಾಗಿ ಗಣಿತ ರಸಪ್ರಶ್ನೆ ನಡೆಯಿತು. ಆರು ಸುತ್ತಗಳಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಗೋಪಾಲ್, ಚೇತನ್ ಮತ್ತು ವಿದ್ಯಾ ಅವರ ತಂಡ ಪ್ರಥಮ ಸ್ಥಾನಗಳಿಸಿದರು. ಮಲ್ಲಿಕಾರ್ಜುನ, ರುಕ್ಮಿಣಿ, ಮೂರ್ತಿ ಅವರ ತಂಡ, ದ್ವಿತೀಯ ಸ್ಥಾನ ಗಳಿಸಿದರು.

 

ಗಣಿತ ವಸ್ತುಪ್ರದರ್ಶನ

ಗಣಿತ ವಸ್ತುಪ್ರದರ್ಶನದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬದನವಾಳು ಕ್ಲಸ್ಟರ್ ಪ್ರಥಮ, ದೇಬೂರು ಕ್ಲಸ್ಟರ್ ದ್ವಿತೀಯ ಸ್ಥಾನಗಳಿಸಿದವು. ಪ್ರೌಢಶಾಲಾ ವಿಭಾಗದಲ್ಲಿ ದೇಬೂರಿನ ಆದರ್ಶ ಶಾಲೆಯ ಕಿರಣ್ ಕುಮಾರ್ ಪ್ರಥಮ ಮತ್ತು ಬಾಲಕರ ಪ.ಪೂರ್ವ ಕಾಲೇಜಿನ ಪದ್ಮಶ್ರೀ ದ್ವಿತೀಯ ಬಹುಮಾನ ಗಳಿಸಿದರು.

 

ನಂಜನಗೂಡು ತಾಲೂಕಿನಲ್ಲಿ ಹೀಗೆ ಸತತವಾಗಿ ಶಿಕ್ಷಕರಿಗಾಗಿ ಆಯೋಜನೆಗೊಳ್ಳುತ್ತಿರುವ ವಿಷಯವಾರು ಹಬ್ಬಗಳು ಶಿಕ್ಷಕರಲ್ಲಿ ಬೋಧನೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹೊಸ ಚೈತನ್ಯ ನೀಡಿದೆ. ಅಲ್ಲದೆ ಗಣಿತ ವಿಷಯದಲ್ಲಿ ವಸ್ತುಪ್ರದರ್ಶನ, ನಾಟಕ, ರಸಪ್ರಶ್ನೆ ಕಾರ್ಯಕ್ರಮ ನಡೆದಿರುವುದು ತಾಲೂಕಿ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ. ಇನ್ನುಳಿದ ಮೂರು ವಿಷಯಗಳ ಶಿಕ್ಷಕರು ತಮ್ಮ ವಿಷಯಗಳ ಹಬ್ಬಕ್ಕೆ ಕಾತರದಿಂದ ಕಾಯುವಂತಾಗಿದೆ.

ಇಂತಹ ಶೈಕ್ಷಣಿಕ ಹಬ್ಬಗಳು ರಾಜ್ಯದಾದ್ಯಂತ ನಡೆಯುವಂತಾಗಬೇಕು. ಪ್ರತೀ ತಾಲೂಕುಗಳಲ್ಲಿ ಶಿಕ್ಷಕರನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವಂತೆ ಮಾಡುವ, ಆಯಾಯ ವಿಷಯ ಶಿಕ್ಷಕರುಗಳು ಒಂದೆಡೆ ಸೇರಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ, ಸಂಭ್ರಮಿಸುವ ಹಬ್ಬಗಳು ನಡೆಯುತ್ತಿದ್ದರೆ ಶಿಕ್ಷಕರು ತಮ್ಮನ್ನು ಒರೆಗೆ ಹಚ್ಚಿಕೊಳ್ಳುವ, ಹೊಸ ವಿಚಾರಧಾರೆಗೆ ಅಪ್ಡೇಟ್ ಆಗುವುದು ಸಾಧ್ಯವಾಗುತ್ತದೆ. ಇಂಥದ್ದೊಂದು ಶೈಕ್ಷಣಿಕ ಕ್ರಾಂತಿಗೆ ನಂಜನಗೂಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸಿ. ಎನ್. ರಾಜು ಅವರು ಮುನ್ನುಡಿಯನ್ನು ಬರೆದಿದ್ದಾರೆ. ಶಿಕ್ಷಣ ಇಲಾಖೆ ಈ ಶೈಕ್ಷಣಿಕ ಹಬ್ಬವನ್ನು ಪ್ರತೀ ತಾಲೂಕುಗಳಲ್ಲಿ ಆಚರಿಸುವಂತಾಗಬೇಕು.

 

ಗಣಿತ ಹಬ್ಬಕ್ಕೆ ಆಗಮಿಸಿದ ತಹಶೀಲ್ದಾರ್ ಎಂ. ಶಿವಮೂರ್ತಿ ಅವರು ಹಬ್ಬವನ್ನು ಮೆಚ್ಚಿಕೊಂಡಿರಲ್ಲದೆ ತಾಲೂಕಿನಲ್ಲಿ ಗುರುಭವನ ನಿರ್ಮಿಸಲು ಒಂದು ಎಕರೆ ಜಾಗ ನೀಡುವುದಕ್ಕೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು. ಗಣಿತ ಹಬ್ಬದಲ್ಲಿ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಧರ್ಮರತ್ನಾಕರ, ಜಿಲ್ಲಾ ಕಾರ್ಯದರ್ಶಿ ಮಹೇಶ್, ತಾಲೂಕು ಕಾರ್ಯದರ್ಶಿ ಸೋಮೇಶ್, ಉಪಾಧ್ಯಕ್ಷ ರಾಜುಸ್ವಾಮಿ, ಖಜಾಂಚಿ ಎಂ.ವಿ. ಗಿರೀಶ್, ಸಂಘಟನಾ ಕಾರ್ಯದರ್ಶಿ ಎಚ್. ಸುನಂದಾ ರವಿ ಇದ್ದರು.

ನಂಜನಗೂಡು ತಾಲೂಕಿನಲ್ಲಿ ಇದೇ ಮೊದಲಬಾರಿಗೆ ನಡೆದ ಗಣಿತ ಹಬ್ಬದ ಆಯೋಜನೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಕೈಜೋಡಿಸಿದವರು ಬಿಆರ್ಸಿ ಕೆ.ಜಿ. ಮಹೇಶ್, ಶಿಕ್ಷಣ ಸಂಯೋಜಕರಾದ ಎನ್. ಎಸ್. ರಮೇಶ, ಬಿಆರ್ಪಿ ಸಿ.ವಿ. ಶ್ರೀನಾಥ್ ಗಣಿತ ಶಿಕ್ಷಕರಾದ ಎಸ್. ಹರ್ಷ, ಸತೀಶ್, ಕಿರಣ್ ಮತ್ತು ನಂದೀಶ್ ಅವರು.

: ಸಂತೋಷ ಗುಡ್ಡಿಯಂಗಡಿ









 

No comments:

Post a Comment