Saturday, 20 September 2014


ಹೆಡಿಯಾಲದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 16-09-2014 ರಂದು ನಡೆದ ಹೋಬಳಿಮಟ್ಟದ ಪ್ರತಿಭಾಕಾರಂಜಿಯಲ್ಲಿ ನಮ್ಮ ಶಾಲೆಯ ಮಕ್ಕಳ ಚಿತ್ರಗಳು



 ಛದ್ಮವೇಷ


 ಇವನು ಮಹದೇವಸ್ವಾಮಿ. ಹೆಡಿಯಾಲದಲ್ಲಿ ಪ್ರಥಮ ಪಿ.ಯು.ಸಿ. ಓದುತ್ತಿರುವ ಇವನು ಕಳೆದ ವರ್ಷ ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಜಾನಪದಗೀತೆ ಸ್ಪರ್ಧೆಯಲ್ಲಿ ರಾಜ್ಯಕ್ಕೇ ದ್ವಿತೀಯ ಸ್ಥಾನಗಳಿಸಿ ನಂಜನಗೂಡು ತಾಲೂಕಿಗೆ ಕೀರ್ತಿ ತಂದಿರುತ್ತಾನೆ. ಇವನನ್ನು ತರಬೇತಿಗೊಳಿಸಿದವರು ಹೆಡಿಯಾಲ ಶಾಲೆಯ ಚಿತ್ರಕಲಾ ಶಿಕ್ಷಕ ಸೂರ್ಯಕಾಂತ ನಂದೂರ್.



 ಕಂಸಾಳೆ 


 ನಾಟಕಕ್ಕೆ ಪ್ರಥಮ ಬಹುಮಾನ

 ಕೋಲಾಟಕ್ಕೆ ಪ್ರಥಮ ಬಹುಮಾನ

 ಕಂಸಾಳೆಗೆ ಪ್ರಥಮ ಬಹುಮಾನ

ನಾವೆಲ್ಲ ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿದವರು.

Monday, 18 August 2014




ಹತ್ತನೇ ಸಂಚಿಕೆ

_____________________________________________________________

ಕುಸ್ತಿಯಲ್ಲಿ ಪ್ರಶಸ್ತಿ



ಇತ್ತೀಚೆಗೆ ಮೈಸೂರಿನ ಲಯನ್ಸ್ ಸೆಂಟ್ರಲ್ ಸಮುಚ್ಛಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಉಮೇಶ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 10ನೇ ತರಗತಿ ಕೇಶವಮೂರ್ತಿ ಡಿ. ಎಸ್. ತೃತೀಯ ಸ್ಥಾನ ಪಡೆದಿರುತ್ತಾನೆ. ಈ ಇಬ್ಬರೂ ಕುಸ್ತಿ ಪೈಲ್ವಾನರಿಗೆ ‘ಅಳ್ಳೀಮರ’ ಶುಭಕೋರುತ್ತದೆ.
*******************************

ಅತ್ಯಾಚಾರ :- ಮಕ್ಕಳ ಸ್ಪಂದನೆ


ಇತ್ತೀಚೆಗೆ ಅತ್ಯಾಚಾರ ಹೆಚ್ಚಾಗಿದೆ. ಗಂಡು ಮಕ್ಕಳಿಗೆ ಸಮಾಜದ ಬಗ್ಗೆ ಭಯವಿಲ್ಲ, ಯಾರೇನಂದರೂ ಹೆದರಿಕೆ ಇಲ್ಲ. ಯಾರ ಮಾತನ್ನೂ ಕೇಳುವುದಿಲ್ಲ. ಯೋಚನೆ ಮಾಡುವುದಿಲ್ಲ. ದುರಾಸೆ ಸ್ವಾರ್ಥ ಇವೆಲ್ಲ ಮನುಷ್ಯನಲ್ಲಿ ಹೆಚ್ಚಾಗಿಬಿಟ್ಟಿದೆ.
ಹೆಣ್ಣು ಮಕ್ಕಳನ್ನು ಒಂಟಿಯಾಗಿ ಬಿಡಬಾರದು. ಹಾಗಂತ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಹಿಸಬೇಡಿ ಅಂತಲ್ಲ. ಅವರು ಚನ್ನಾಗಿ ಓದಲಿ. ಗಂಡು ಮಕ್ಕಳು ಅಂದರೆ ಎಲ್ಲಾ ಗಂಡು ಮಕ್ಕಳೂ ಅಲ್ಲ. ಓದದೆ ಶಾಲೆಗೆ ಬಾರದೆ ಇರ್ತಾರಲ್ಲ ಅಂತಹ ಮಕ್ಕಳನ್ನ ಊರಿನ ಮುಖಂಡರು, ಆರಕ್ಷಕರು ಕಂಡು ಹಿಡಿದು ಅವರಿಗೆ ಒಳ್ಳೆಯ ಬುದ್ಧಿಯನ್ನ ಕಲಿಸಬೇಕು.
-ಲೋಕೇಶ ಎಚ್. ಎಂ.
9ನೇ ತರಗತಿ, ಹೆಗ್ಗಡಹಳ್ಳಿ.
************************************************

ನಾನು ಕಂಡಂತೆ ಅತ್ಯಾಚಾರಕ್ಕೆ ಕಾರಣಗಳು
* ಆಕರ್ಷಣೆಯಿಂದ
* ದ್ವೇಷದಿಂದ
* ಮೋಸದಿಂದ
* ಮೋಹದಿಂದ
* ಪ್ರೀತಿಯಿಂದ
* ಅವರು ಮಾಡುವ ಕೆಲಸ ಅದೇ ಆಗಿರಬಹುದು
ಹೀಗೆ ತಡೆಗಟ್ಟಬಹುದು..
* ಮುಖ್ಯವಾಗಿ ನಮ್ಮನ್ನು ಕಾಪಾಡಿಕೊಳ್ಳಲು ಧೈರ್ಯ ಮತ್ತು ಶಕ್ತಿ ಇರಬೇಕು.
* ನ್ಯಾಯಕ್ಕಾಗಿ ಪ್ರತಿಭಟಿಸಬೇಕು.
* ಪೋಲಿಸರಿಗೆ ತಿಳಿಸಿ ದೂರು ಕೊಡಬೇಕು.
* ಎಚ್ಚರಿಕೆಯಿಂದ ತಿರುಗಾಡಬೇಕು, ಮನೆಯವರಿಗೆ ತಿಳಿಸಬೇಕು.
* ಕರಾಟೆ ಕಲಿತಿರಬೇಕು ಅಥವಾ ಕರಾಟೆ ಕಲಿತಿಲ್ಲದವರು ಜೊತೆಯಲ್ಲಿ ಖಾರದಪುಡಿಯನ್ನು ಇಟ್ಟುಕೊಳ್ಳಬೇಕು.
* ಯಾರಾದರು ಇಬ್ಬರಿಗೆ ಕಠಿಣವಾದ ಶಿಕ್ಷೆ ಕೊಟ್ಟರೆ ಮಿಕ್ಕವರು ಎಚ್ಚರಗೊಳ್ಳುತ್ತಾರೆ.
-ತೇಜ ಎಚ್. ಎಸ್.
10ನೇ ತರಗತಿ, ಹೆಗ್ಗಡಹಳ್ಳಿ.
****************************************
ಅತ್ಯಾಚಾರ ಮಾಡುವವರು
* ಅವರು ರೌಡಿಯಾಗಿರಬೇಕು
* ಅವರು ನೋಡುವ ದೃಷ್ಠಿ ಸರಿ ಇಲ್ಲದಿರಬೇಕು.
* ಅವರು ಶಾಲೆ ಬಿಟ್ಟವರಾಗಿರಬೇಕು.
* ಅವರು ಮೌಲ್ಯ ತಿಳಿಯದವರಾಗಿರಬೇಕು.
* ಅವರು ತಿಳುವಳಿಕೆ ಇಲ್ಲದವರಾಗಿರಬೇಕು.
* ಅವರು ಕೆಟ್ಟವರಾಗಿರುತ್ತಾರೆ.
-ಸುನಂದ ಎಂ. ಆರ್.
9ನೇ ತರಗತಿ, ಹೆಗ್ಗಡಹಳ್ಳಿ
***********************************************

ಅತ್ಯಾಚಾರವನ್ನು ಕುಟುಂಬಸ್ತರು ಮಾಡುವುದಿಲ್ಲ. ಸಮಾಜದಲ್ಲಿ ಕೆಟ್ಟವರು ಎನಿಸಿಕೊಂಡವರು ಅತ್ಯಾಚಾರ ಮಾಡುತ್ತಾರೆ.  ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಅತ್ಯಾಚಾರ ಮಾಡುತ್ತಾರೆ. ಅತ್ಯಾಚಾರ ಮಾಡಿದವರನ್ನು ಹಿಡಿದು ಊರಿನಲ್ಲಿಯೇ ಶಿಕ್ಷೆ ಕೊಡಬೇಕು.

-ಸುರೇಶ ಎಸ್.
9ನೇ ತರಗತಿ, ಹೆಗ್ಗಡಹಳ್ಳಿ.
**************************************************

ಸಣ್ಣ ನಾಯಿ


ಸಣ್ಣ ನಾಯಿ ದೊಡ್ಡ ಹಪ್ಪಳ
ಕಚ್ಚಿ ತಂತು
ಕುಟುಂ ಕುಟುಂ ಹರುಕು ಮುರುಕು
ತಿಂದು ಕುಣೀತು

ಸಣ್ಣ ನಾಯಿ ದೊಡ್ಡ ಲಡ್ಡು
ಉಂಡೆ ತಂತು
ಸಿಹಿಯ ನೆಕ್ಕಿ ಸವಿಯ ಮೆಚ್ಚಿ
ಬಾಲ ಕುಣಿಸಿತು

ಸಣ್ಣ ನಾಯಿ ದೊಡ್ಡ ಮೂಳೆ
ಎತ್ತಿ ತಂತು
ಆಚೆ ಮುರಿದು ಈಚೆ ಕಡಿದು
ಬಾಯಿ ಚಪ್ಪರಿಸ್ತು

ಸಣ್ಣ ನಾಯಿ ದೊಡ್ಡ ಗೊರಟು
ಹಿಡಿದು ತಂತು
ಉರುಳಿಸಿ ನೆಕ್ಕಿ ನಾಲಗೆ ತಿಕ್ಕಿ
ಪಿಳಿಪಿಳಿಗುಟ್ಟಿತು

ಸಣ್ಣ ನಾಯಿ ದೊಡ್ಡ ಚಪ್ಪಲಿ
ಕದ್ದು ತಂತು
ಕಚ್ಚಿ ಕಚ್ಚಿ ಜೂಲು ಮಾಡಿ
ಹರುಷದಿ ನೆಕ್ಕಿತು.

-ವಿಜಯಶ್ರಿ ಹಾಲಾಡಿ

(ನೀರ್ಕೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಅಧ್ಯಾಪಕಿಯಾಗಿರುವ ವಿಜಯಶ್ರಿ ಹಾಲಾಡಿ ಅವರು ಕನ್ನಡದಲ್ಲಿ ಮಕ್ಕಳಿಗಾಗಿ ಬರೆಯುತ್ತಿರುವ ಪ್ರಮುಖರು. )



ಚಿತ್ರ : ಪ್ರಿಯಾಂಕ ಕೆ. ಎಂ.
9ನೇ ತರಗತಿ ಹೆಗ್ಗಡಹಳ್ಳಿ.
****************************************

ನರಿಯ ಜಾಣತನ

ಬೇಟೆಯಾಡಿ ತನ್ನ ಊಟ ಸಂಪಾದಿಸಿಕೊಳ್ಳಲಾಗದಷ್ಟು ವಯಸ್ಸಾದ ಸಿಂಹ ಒಂದು ಉಪಾಯ ಹುಡುಕಿತು. ಅದು ಒಂದು ಗುಹೆಯೊಳಗೆ ನನಗೆ ಆರೋಗ್ಯ ಸರಿಯಿಲ್ಲ ಎಂದು ನಾಟಕ ಮಾಡಿತು. ಇದನ್ನು ತಿಳಿದ ಪ್ರಾಣಿಗಳು ಸಿಂಹದ ಆರೋಗ್ಯ ವಿಚಾರಿಸಲು ಅದರ ಗುಹೆಗೆ ಬಂದವರನ್ನು ಸಿಂಹ ತನ್ನ ಆಹಾರವನ್ನಾಗಿ ಹಿಡಿದು ತಿನ್ನತೊಡಗಿತು. ಇದನ್ನು ತಿಳಿದ  ನರಿ ಒಂದು ದಿನ ಸಿಂಹದ ಆರೋಗ್ಯ ವಿಚಾರಿಸಲು ಗುಹೆ ಬಳಿ ಬಂದು ‘ಏನು ಸಿಂಹಣ್ಣ ನಿನ್ನ ಆರೋಗ್ಯ ಚೆನ್ನಾಗಿದೆಯೇ?’ ಎಂದು ಕೇಳಿತು. ಅದಕ್ಕೆ ಸಿಂಹಣ್ಣ ‘ಸ್ವಲ್ಪ ಮಟ್ಟಿಗೆ ಸುದಾರಿಸಿದೆ ತಮ್ಮಯ್ಯಾ’ ಎಂದು ಹೇಳಿ, ‘ಯಾಕೆ ಹೊರಗಡೆಯೆ ನಿಂತಿದಿಯಾ ಒಳಗಾದರೂ ಬರಬಾರದೇ?’ ಎಂದು ಹೇಳಿತು. ಅದಕ್ಕೆ ನರಿ ‘ಒಳಗೆ ಬಂದವರು ಹೊರಗಡೆ ಬಂದಿರುವ ಹೆಜ್ಜೆಯ ಗುರುತುಗಳೇ ಕಾಣುತ್ತಿಲ್ಲ!’ ಎಂದು ನರಿ ಸಿಂಹದ ಉತ್ತರಕ್ಕೆ ಕಾಯದೆ ಅಲ್ಲಿಂದ ಓಡಿ ಹೋಯಿತು.

ಸಂಗ್ರಹ : ದೀಪಿಕಾ ಎಚ್. ಪಿ.
9ನೇ ತರಗತಿ ಹೆಗ್ಗಡಹಳ್ಳಿ.
****************************************

ವೇದ ಸುಳ್ಳಾದರು ಗಾದೆ ಸುಳ್ಳಾಗದು!
* ಅಗ್ಗದ ಶೆಟ್ಟಿ ; ಮುಗ್ಗಿದ ಜೋಳ
* ಅಜ್ಜಿ ನೂತಿದ್ದೆಲ್ಲಾ ಅಜ್ಜನ ಉಡಿದಾರಕ್ಕೆ
* ಅವ್ವ ಸತ್ತ ಮೇಲೆ ಅಪ್ಪ ಚಿಕ್ಕಪ್ಪ
* ಅಟ್ಟ ಹತ್ತದವನು; ಬೆಟ್ಟ ಹತ್ತಿಯಾನೆ!
* ಅಳದಿದ್ದರೆ ಅಮ್ಮನೂ ಹಾಲುಣಿಸಳು
* ಅಳಿಲು ಏರಿದರೆ ಅರಳಿಮರ ಅಲ್ಲಾಡಿತೆ!
ಸಂಗ್ರಹ : ಸುಮತಿ ಕೆ.
9ನೇ ತರಗತಿ. ಹೆಗ್ಗಡಹಳ್ಳಿ
********************************



ಚಿತ್ರ : ವಸಂತ ಕುಮಾರ್ ಡಿ. ಪಿ.
9ನೇ ತರಗತಿ, ಹೆಗ್ಗಡಹಳ್ಳಿ.
****************************************


ಚಿತ್ರ : ಶಿಲ್ಪ ಎಸ್.
9ನೇ ತರಗತಿ, ಹೆಗ್ಗಡಹಳ್ಳಿ.
****************************************

ನಾಳೆಗಳು ನಮ್ಮದು...

ಮತ್ತೆ ತಾಯಿ ಕಬಿನಿ ಮೈದುಂಬಿದ್ದಾಳೆ. ಅಳ್ಳೀಮರದ ಊರು ನಳನಳಿಸುತ್ತಿದೆ. ರೈತರೆಲ್ಲ ಮೈಮುರಿದು ದುಡಿಯುತ್ತಿದ್ದಾರೆ ನಾಳೆಗೆ ನಾವೆಲ್ಲ ಉಣ್ಣಲು...
ಆದರೆ ನಾಳೆಗಳಲ್ಲಿ ನಲಿಯಬೇಕಾದ ನಮ್ಮ ಮಕ್ಕಳು ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳಿಂದಾಗಿ ನಲುಗಿ ಹೋಗಿದ್ದಾರೆ. ಯಾರು ಸಮೃದ್ಧ ನಾಳೆಗಳನ್ನು ಮಕ್ಕಳಿಗೆ ನಿರ್ಮಾಣ ಮಾಡಿಕೊಡಬೇಕಾಗಿದೆಯೋ ಅವರೇ ಮಕ್ಕಳ ಪಾಲಿನ ದುಃಸ್ವಪ್ನವಾಗುತ್ತಿದ್ದಾರೆ. ಏನು ಮಾಡಬಹುದು? ಗೊತ್ತಿಲ್ಲ. ಗೊಂದಲದಲ್ಲೇ ನಮ್ಮ ಮಕ್ಕಳು ಒಂದಷ್ಟು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ನಾಳೆಗಳು ನಮ್ಮದು. ಅದಕ್ಕೇ ಈ ಸಂಚಿಕೆ
-ಸಂ.

Thursday, 7 August 2014

ಕೆ. ಜಿ. ಜಗನ್ನಾಥ್ ರಾವ್ ಸರ್ಕಾರಿ ಪ್ರೌಢ ಶಾಲೆ, ಕೋಣಿ. 
ಕುಂದಾಪುರ (ತಾ) ಉಡುಪಿ (ಜಿ)

ಇಲ್ಲಿನ ಮಕ್ಕಳ ಪತ್ರಿಕೆ

"ಈ ಮಿಂಚು"

ಸಂಪಾದಕರು : ಸದಾನಂದ ಬೈಂದೂರು






ಸರ್ಕಾರಿ ಪ್ರೌಢ ಶಾಲೆ, ಕೋಣಂದೂರು, ತೀರ್ಥಹಳ್ಳಿ (ತಾ) ಶಿವಮೊಗ್ಗ (ಜಿ)

ಇಲ್ಲಿನ ಮಕ್ಕಳ ಪತ್ರಿಕೆ

"ಮಲೆನಾಡ ಇಳೆ"

ಸಂಪಾದಕರು : ಶ್ರೀಕಾಂತ ಕುಮಟಾ (ನಾಟಕ ಶಿಕ್ಷಕರು)







Monday, 21 July 2014


ಸಂಚಿಕೆ -9. ಜುಲೈ 2014



ಗಿಡ್ಡ ಕುದುರೆ ಮತ್ತು ನವಿಲು

ಒಂದು ಹಳ್ಳಿ ಇತ್ತು. ಅಲ್ಲಿ ಗಿಡ್ಡ ಕುದುರೆ ಮತ್ತು ನವಿಲು ಇದ್ದರು. ಅವರು ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದಿಲ್ಲ. ಒಂದು ಸಲ ನವಿಲಿಗೆ ಮೂರು ಮಕ್ಕಳಾದವು. ಆಗ ಗಿಡ್ಡಕುದುರೆ ಕೇಳಿತು ನಿನ್ನ ಮರಿಗಳಿಗೆ ಯಾವ ಹೆಸರು ಇಡುವೆ? ಅಲ್ಲಿ ಮೂರು ಮರಿಗಳಿದ್ದವು. ಒಂದು ಮರಿ ಬೋಳು ತರ ಕಾಣಿಸಿತು. ಅದಕ್ಕೆ ಬೊಗಳಪ್ಪ, ಎರಡನೇ ಮರಿಗೆ ತೆಗಳಪ್ಪ ಮೂರನೇ ಮರಿಗೆ ಕರಿಯಪ್ಪ ಎಂದು ಇಡೋಣವೇ ಎಂದು ಕೇಳಿತು. ಆಯಿತು ಎಂದಿತು ಗಿಡ್ಡಕುದುರೆ. ನವಿಲು ಮಕ್ಕಳಿಗಾಗಿ ಒಂದು ಹಾಡು ಹೇಳಿತು.
ಮಕ್ಕಳೇ ನೀವು ನಕ್ಕರೆ...
ಬದುಕು ಹಾಲು ಸಕ್ಕರೆ...

- ಶಿಲ್ಪ ಎಸ್.
9ನೇ ತರಗತಿ, ಹೆಗ್ಗಡಹಳ್ಳಿ


ನಾನೋದಿದ ಪುಸ್ತಕ

ಸಾಂಬಶಿವ ಪ್ರಹಸನ
ಲೇಖಕರು : ಚಂದ್ರಶೇಖರ ಕಂಬಾರ
ಸಾಂಬಶಿವ ಪ್ರಹಸನ ನಾಟಕವು ಒಂದು ನಗೆನಾಟಕ. ಈ ನಾಟಕದಲ್ಲಿ ಮನೋರಂಜನೆ, ಪ್ರೇಮ, ರಾಜಕೀಯ ಇದೆ. ಮಾತಿವೆ ಹಾಡಿವೆ ಕುಣಿತವಿದೆ ಸರ್ಕಸ್ಸಿದೆ. ಗಂಡಸರಿದ್ದಾರೆ ಹೆಂಗಸರಿದ್ದಾರೆ ಎರಡೂ ಅಲ್ಲದ ಮೂರನೆಯವರೂ ಇದ್ದಾರೆ. ಈ ನಾಟಕದ ತುಂಬ ನಗು.

- ಸಂಜಯ್ ಜೆ.
10ನೇ ತರಗತಿ, ಹೆಗ್ಗಡಹಳ್ಳಿ.


ನಮ್ಮ ಶಾಲೆ ಬಣ್ಣ ಬಣ್ಣ
ನಮ್ಮ ಶಾಲೆಯ ಪಕ್ಷಿಗಳು ಬಣ್ಣ ಬಣ್ಣ

ನಮ್ಮ ಶಾಲೆಯ ಅಳ್ಳೀಮರ ದಪ್ಪ ದಪ್ಪ
ನಮ್ಮ ಶಾಲೆಯಲ್ಲಿ ಪಕ್ಷಿಗಳು
ಕಿರುಚಾಡಿದರೆ ಚೆನ್ನ
ಮೈನಾ ಪಕ್ಷಿ ಕೂಗಿದರೆ ಚೆನ್ನ
ಶಾಲೆಯಲ್ಲಿ ಹಾಲು ಚೆನ್ನ ಹಾಲನ್ನು
ಕುಡಿಯದೆ ಇದ್ದರೆ ಬಲು ಸಣ್ಣ
ಅಕ್ಷರ ಅನ್ನ ಆರೋಗ್ಯ ಚಿನ್ನ
ಓದುವುದು ಚೆನ್ನ ಓದದೆ ಇದ್ರೆ
ಮೇಸ್ಟ್ರು ಮತ್ತು ಮೇಡಂಗೆ
ಬಲು ಕೋಪ ಆದಾಗ ನಮ್ಮ
ಕೈ ಕೆಂಪು
ನಮ್ಮ ಶಾಲೆ ಎಂದರೆ ಹೆಗ್ಗಡಹಳ್ಳಿ ಶಾಲೆ
ಹೆಗ್ಗಡಹಳ್ಳಿ ಶಾಲೆ ಬಲು ದೊಡ್ಡದು
ಅದರಲ್ಲಿ ಮಕ್ಕಳು ಆಟ ಆಡುತ್ತಾರೆ
ಆದ್ದರಿಂದ ಚೆನ್ನ ಚೆನ್ನ
ಹೆಗ್ಗಡಹಳ್ಳಿ ಶಾಲೆ ಚೆನ್ನ ಚೆನ್ನ

ಮಹೇಶ್ ಕುಮಾರ್, ರಾಜು ಡಿ. ಆರ್.,
ನಾಗರಾಜು ಡಿ. ಸಿ., ಮಣಿಕಂಠ ಪಿ.
10ನೇ ತರಗತಿ, ಹೆಗ್ಗಡಹಳ್ಳಿ


ಅಳ್ಳೀಮರ


ಬಾ ಬಾ ಅರಳೀಮರವೇ
ನೀ ಬಾರದೇ ಎರಡು ತಿಂಗಳ
ಕಾಲ ನನಗೇನು ತೋರದೆ

ನೀ ಬಾರದೇ ನನ್ನ ಮನಸ್ಸಿಗೆ
ಸಂತಸ ತಾರದೆ

ನಿನ್ನ ನುಡಿ ಮುತ್ತು ಕೇಳದೆ
ನನಗೆ ದಾರಿಯೇ ತೋರದೆ

ನಿನ್ನ ನೋಡುತ್ತಾ ಚಿಂತೆ ಮರೆತೆ
ನಿನ್ನ ನೋಡುವ ದಾರಿಯ ಕಾದೆ

ನಿನ್ನಂತೆ ಯಾರು ಇಲ್ಲ
ನೀನಾಡದ ಮಾತುಗಳೇ ಇಲ್ಲ

ಬಾ ಬಾ ಅಳ್ಳೀಮರವೇ
ಎರಡು ತಿಂಗಳ ಬಳಿಕ ಸಂತಸ ತಾ.

- ರಾಜಶೇಖರ್ ಎಸ್.
10ನೇ ತರಗತಿ, ಹೆಗ್ಗಡಹಳ್ಳಿ



 ಮಕ್ಕಳು ಹೇಳಿದ ಶುಭಾಶಯಗಳು

ರಾಜನ ಸುಪ್ರಭಾತ


ಮುಂಗೋಳಿ ಕೂಗುವುದು ಮುಂಬೆಳಕು ಮೂಡುವುದು
ಚಾಪೆಯಿಂದೆದ್ದೇಳು ರಾಜಾ ನಮ್ಮ ರಾಜಾ

ಸುಖ ನಿದ್ದೆ ಸಾಕಿನ್ನು ಸ್ವಪ್ನಕ್ಕೆ ಬೈ ಎನ್ನು
ಕಣ್ಣುಗಳ ತೆರೆದುಕೋ ರಾಜಾ ನಮ್ಮ ರಾಜಾ

ಕೈಕಾಲು ಮುಖ ತೊಳೆದು ಪಾಠ ಪುಸ್ತಕ ತೆಗೆದು
ಅಭ್ಯಾಸ ಮಾಡಯ್ಯ ರಾಜಾ ನಮ್ಮ ರಾಜಾ

ಚೆನ್ನಾಗಿ ಮಿಂದು ಬಾ ಸಮವಸ್ತ್ರ ತೊಟ್ಟುಬಾ
ತಿಂಡಿ ತಿನ್ನಲು ಕೂಡು ರಾಜಾ ನಮ್ಮ ರಾಜಾ

ಶೂಗಳನು ಕಟ್ಟಿಕೋ ಚೀಲವನು ಎತ್ತಿಕೋ
ಶಾಲೆಕಡೆ ಹೆಜ್ಜೆಯಿಡು ರಾಜಾ ನಮ್ಮ ರಾಜಾ

ನಿಜವೆಂದ್ರೆ ನನ್ನವ್ವ ಈವತ್ತು ರವಿವಾರ
ಶಾಲೆಗೆ ರಜಾ ಎನುವ ರಾಜಾ ನಮ್ಮ ರಾಜಾ

ಅಕಟಕಟ! ವಾರಕ್ಕೆ ಒಂದೆ ರವಿವಾರಕಣ
ಅದು ನಿನ್ನೆಗಾಯಿತ್ತು ರಾಜಾ ನಮ್ಮ ರಾಜಾ!

--ಕೆ. ವಿ. ತಿರುಮಲೇಶ್
(ಕನ್ನಡದ ಹಿರಿಯ ಕವಿ ನಮ್ಮ ಮಕ್ಕಳಿಗಾಗಿ ಬರೆದುಕೊಟ್ಟಿರುವ ಪದ್ಯ. )



ಅಮೃತ ಎಚ್. ಎಸ್.

ಈ ಬಾರಿ ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ. ಅವಳ ಭವಿಷ್ಯ ಸುಂದರವಾಗಿರಲೆಂದು ‘ಅಳ್ಳೀಮರ’ದ ಹಾರೈಕೆಗಳು

ನ್ಯಾಯ ಎಲ್ಲಿದೆ?

ಒಂದು ಕಾಡಿನಲ್ಲಿ ಕೋತಿ ಮತ್ತು ಗೌಜಲಕ್ಕಿ ಶತ್ರುಗಳಾಗಿರುತ್ತಾರೆ. ಒಂದು ದಿವಸ ಮಳೆ ಬಂದ ಕಾರಣ ಹಕ್ಕಿಗಳು ಬೇಲಿಯಲ್ಲಿ ಗೂಡು ಮಾಡಿರುತ್ತವೆ. ಆಗ ಕೋತಿಗಳು ಗೂಡನ್ನು ಹಾಳು ಮಾಡುತ್ತವೆ. ಆಗ ಹಕ್ಕಿಗಳು ಪಂಚಾಯಿತಿ ಅಧ್ಯಕ್ಷ ನರಿಯತ್ತ ನ್ಯಾಯ ಕೇಳಲು ಹೋಗುತ್ತವೆ. ಆಗ ನರಿಯು ಕೋತಿಗಳನ್ನು ಪಂಚಾಯಿತಿಗೆ ಬರ ಹೇಳುತ್ತದೆ. ಮೊದಲನೆ ದಿನ ಯಾವುದೇ ಸಾಕ್ಷಿ ಸಿಗದೆ ಇರುವುದರಿಂದ ನಾಳೆ ಬನ್ನಿ ಎಂದು ಹೇಳುತ್ತದೆ. ಆಗ ಕೋತಿಗಳು ಒಂದು ಉಪಾಯವನ್ನು ಯೋಚಿಸಿ ನರಿಯು ಕುಳಿತುಕೊಂಡು ನ್ಯಾಯ ಹೇಳುವ ಜಾಗದ ಹಿಂದೆ ಒಂದು ಹಲಸಿನ ಹಣ್ಣನ್ನು ಬಗೆದು ಇಟ್ಟಿರುತ್ತವೆ. ಆಗ ನರಿಯು ನ್ಯಾಯ ಹೇಳಲು ಬರುತ್ತದೆ. ಆಗ ಕೋತಿಗಳು ಅಧ್ಯಕ್ಷರೇ ನ್ಯಾಯ ಹೇಳುವಾಗ ಹಿಂದೆ ಮುಂದೆ ನೋಡಿ ಹೇಳಿ ಎಂದು ಹೇಳುತ್ತವೆ. ಆಗ ನರಿಯು ಹಿಂದೆ ತಿರುಗಿ ನೋಡುತ್ತದೆ. ಆಗ ಹಲಸಿನ ಹಣ್ಣನ್ನು ನೋಡಿ ಕೋತಿಗಳ ಕಡೆಗೆ ನ್ಯಾಯ ಹೇಳುತ್ತದೆ. ಗೌಜಲಹಕ್ಕಿಗಳು ಹಿಂತಿರುಗಿ ಗೂಡಿಗೆ ಹೋಗುತ್ತವೆ.

-ಜಗದೀಶ
10ನೇ ತರಗತಿ, ಹೆಗ್ಗಡಹಳ್ಳಿ

ಒಡನಾಟ

ಒಂದಾನೊಂದು ಕಾಡಿನಲ್ಲಿ ಒಂದು ಪುಟ್ಟ ಮರದಲ್ಲಿ ಎರಡು ಗುಬ್ಬಚ್ಚಿಗಳಿದ್ದವು. ತಾಯಿ ಗುಬ್ಬಚ್ಚಿ ಮತ್ತು ಮರಿಗುಬ್ಬಿ. ಈ ಎರಡು ಗುಬ್ಬಚ್ಚಿಗಳು ಸುತ್ತಮುತ್ತಲಿನ ಎಲ್ಲಾ ಪ್ರಾಣಿಗಳೊಂದಿಗೆ ಒಡನಾಟ ಹೊಂದಿದ್ದವು. ಒಂದು ದಿನ ಅಮ್ಮ ಗುಬ್ಬಚ್ಚಿ ಆಹಾರ ಹುಡುಕಿಕೊಂಡು ಮರದ ಪೊಟರೆಯಿಂದ ಹೊರ ಹೋಯಿತು. ಇದನ್ನು ಕಂಡ ನರಿಗೆ ಆ ಮರಿ ಗುಬ್ಬಿಯನ್ನು ಹೇಗಾದರೂ ತಾಯಿಂದ ದೂರಮಾಡಿ ಅದನ್ನು ನಾನು ತಿನ್ನಲೇಬೇಕೆಂದು ದುರಾಸೆ ಹುಟ್ಟುತ್ತದೆ. ಹೀಗೆ ಕೆಲವು ದಿನಗಳ ನಂತರ ಗುಬ್ಬಚ್ಚಿ ಆಹಾರ ಹುಡುಕಲು ಹೊರ ಹೋದಾಗ ನರಿಯು ಮರಿಗುಬ್ಬಿಯನ್ನು ಕರೆದು “ಓ ಗುಬ್ಬಿಮರಿ ಹೊರಗೆ ಬಾ ನಿನ್ನ ಜೊತೆ ಆಟವಾಡಲು ನಾನು ನರಿಯಣ್ಣ ಬಂದಿದ್ದೇನೆ ಬಾ” ಎಂದು ಕರೆಯುತ್ತದೆ. ಆಗ ಮರಿಗುಬ್ಬಿ ಹೊರ ಬಂದು “ನೀನ್ಯಾರು?” ಎಂದು ಕೇಳಿದಾಗ ನರಿ “ನಾನು ನರಿಯಣ್ಣ ನಿನ್ನ ಗೆಳೆಯ” ಎಂದು ಹೇಳುತ್ತದೆ. ಇದನ್ನು ನಂಬಿದ ಗುಬ್ಬಿಮರಿ ಪೊಟರೆಯಿಂದ ಹೊರ ಬರುತ್ತದೆ. ಇದೇ ಸರಿಯಾದ ಸಮಯವೆಂದು ನರಿಯು “ಬಾ ಗುಬ್ಬಿಮರಿ ಹೊರಗೆ ಹೋಗಿ ಸುತ್ತಾಡಿ ಬರೋಣ” ಎಂದು ಹೇಳಿದಾಗ ಗುಬ್ಬಿಮರಿ “ಇಲ್ಲ ಅಮ್ಮ ಬರುವ ಹೊತ್ತಾಗಿದೆ ನಿನ್ನೊಡನೆ ಬಂದರೆ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತಾಳೆ” ಎಂದು ಹೇಳುತ್ತದೆ. ಆಗ ನರಿಯು “ಇಲ್ಲ ಗುಬ್ಬಿಮರಿ ನಿನ್ನಮ್ಮ ನನ್ನ ಗುಹೆಯಲ್ಲಿಯೇ ಇದ್ದಾಳೆ ನಿನ್ನನ್ನು ಅಲ್ಲಿಗೆ ಕರೆದುಕೊಂಡು ಬಾ ಎಂದು ಹೇಳಿದ್ದಾಳೆ” ಎಂದು ಹೇಳುತ್ತದೆ. ಆಗ ಇದು ನಿಜವೆಂದು ನಂಬಿ ಗುಬ್ಬಿಮರಿ ನರಿಯ ಜೊತೆ ಹೊರಟು ಹೋಗುತ್ತದೆ.
ಆಗ ಬಂದ ತಾಯಿ ಗುಬ್ಬಿ ತನ್ನ ಮರಿಯನ್ನು ಕೂಗುತ್ತದೆ. ಗುಬ್ಬಿಮರಿ ಪೊಟರೆಯಲ್ಲಿ ಇಲ್ಲದೇ ಇದ್ದುದ್ದನ್ನು ಕಂಡು ತಾಯಿ ಗುಬ್ಬಚ್ಚಿಗೆ ಆತಂಕವಾಗುತ್ತದೆ. ಆಗ ಸುತ್ತಮುತ್ತ ಎಷ್ಟೇ ಹುಡುಕಿದರೂ ಸಿಕ್ಕಲೇ ಇಲ್ಲ. ಗುಬ್ಬಿಮರಿಯನ್ನು ನರಿ ಕರೆದುಕೊಂಡು ತನ್ನ ಗುಹೆಯಲ್ಲಿ ಇಟ್ಟಿರುವುದನ್ನು ಕಂಡ ಗಿಳಿಯು ತಾಯಿ ಗುಬ್ಬಚ್ಚಿಗೆ ವಿಷಯವನ್ನು ಹೇಳುತ್ತದೆ. ತಾಯಿ ಗುಬ್ಬಚ್ಚಿ ತಕ್ಷಣ ಹಾರಿ ನರಿಯ ಗುಹೆಯ ಬಳಿ ಬಂದು “ಓ.. ಮೋಸಗಾರ ನರಿಯೇ ಹೊರಗೆ ಬಾ ನೀನು ನನ್ನ ಮರಿಗುಬ್ಬಿಗೆ ಏನಾದರೂ ತೊಂದರೆ ಮಾಡಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಕೂಗಿ ಹೇಳುತ್ತದೆ. ನರಿಯು ಹೊರ ಬಂದು “ಏ ಗುಬ್ಬಚ್ಚಿಯೇ ನಿನ್ನ ಮರಿಗುಬ್ಬಿಯನ್ನು ನಾನು ಬಿಡುವುದಿಲ್ಲ. ನೀನು ಬುದ್ಧಿವಂತಾಳದರೆ ನಿನ್ನ ಮರಿಯನ್ನು ಬಿಡಿಸಿಕೊಂಡು ಹೋಗು” ಎಂದು ಹೇಳುತ್ತದೆ. ತಾಯಿ ಗುಬ್ಬಿಗೆ ಏನು ಮಾಡಬೇಕಂಬುದು ತೋಚದೆ ಗಿಳಿಯ ಬಳಿ ಎಲ್ಲವನ್ನೂ ಹೇಳಿದಾಗ ಗಿಳಿಯು ಉಪಾಯದಿಂದ ನರಿಯ ಗುಹೆಯ ಬಳಿ ಹೋಗಿ ನರಿಯು ಹೊರಬರುವುದನ್ನೇ ಕಾಯುತ್ತ ಮರದ ಮೇಲೆ ಕುಳಿತಿತು. ಆಗ ನರಿಯು ಹೊರ ಬಂದು  ಸುತ್ತಮುತ್ತ ನೋಡಿ ಹೊರಗೆ ಹೋಗಿ ಬರುವೆನು ಎಂದು ತಾನೆ ಮಾತನಾಡಿಕೊಂಡು ಹೋಗುತ್ತದೆ. ಇದೇ ಸಂದರ್ಭದಲ್ಲಿ ಗಿಳಿಯು ಹಾರಿ ಬಂದು ಗುಹೆಯ ಒಳಗೆ ಇದ್ದಂತ ಗುಬ್ಬಿಮರಿಯನ್ನು ಮೆಲ್ಲಗೆ ಕರೆದುಕೊಂಡು ತಾಯಿ ಗುಬ್ಬಿಯ ಬಳಿ ಬಿಡುತ್ತದೆ. ತಾಯಿಗುಬ್ಬಿಗೆ ಇದರಿಂದ ಸಂತೋಷವಾಗುತ್ತದೆ.

-ಅನಿತಾ ಎಚ್. ಕೆ.
10ನೇ ತರಗತಿ, ಹೆಗ್ಗಡಹಳ್ಳಿ


 

ಹೇಗಿದೆ ಗಿಳಿ ಮರಿ?


ಇವನು ಸುರೇಶ. ನಮ್ಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ. ಶಾಲೆಯ ಸುತ್ತ ಮುತ್ತ ಸಿಗುವ ಎಕ್ಕದ ಕಾಯಿ, ಎಲೆ. ಗಸಗಸೆ ಕಾಯಿ, ಹೂವು ಬಳಸಿ ಮಾಡಿದ ಗಿಳಿಮರಿ. ನಿಜದ ಗಿಳಿಯನ್ನೇ ನಾಚಿಸುವ ಸುರೇಶನ ನಾಟಿ ಗಿಳಿಯನ್ನೊಮ್ಮೆ ನೋಡಿ.

ನಾಳೆಗಳು ನಮ್ಮದು

‘ಅಳ್ಳೀಮರ’ದ ನೆರಳಲ್ಲಾಡಿದ ಒಂದಷ್ಟು ಮಕ್ಕಳು ಬದುಕಿನ ಹೊಸ ಹಾದಿ ಹುಡುಕಿ ಹೊರಟರೆ, ಮತ್ತಷ್ಟು ಹೊಸ ಮಕ್ಕಳು ನೆರಳಿಗೆ ಬಂದಿದ್ದಾರೆ. ಬಂದವರಿಗೆಲ್ಲ ನೆರಳನೀವ ‘ಅಳ್ಳೀಮರ’ ವರುಷ ತುಂಬಿ ಮತ್ತೆ ಚಿಗುರಿದೆ.
ಹಿರಿಯರಾದ ಶ್ರೀ ಕೆ.ವಿ. ತಿರುಮಲೇಶ್ ಅವರು ನಮ್ಮ ಮಕ್ಕಳಿಗಾಗಿ ಸುಂದರವಾದ ಪದ್ಯವನ್ನು ಕಳಿಸಿದ್ದಾರೆ. ಎಂದಿನಂತೆ ನಮ್ಮ ಮಕ್ಕಳು ಲವಲವಿಕೆಯಿಂದ ಬರೆದ ಬರಹಗಳಿವೆ. ಬೇರೆ ಶಾಲೆಯ ಮಕ್ಕಳ ಬರಹಕ್ಕೂ ಸ್ವಾಗತ. ಕ್ರಿಯಾಶೀಲ ಶಿಕ್ಷಕ ಬಂಧುಗಳೆ ನಿಮ್ಮ ವಿದ್ಯಾರ್ಥಿಗಳ ಚಟುವಟಿಕೆ ನಮಗೂ ಕಳುಹಿಸಿ ಎನ್ನುತ್ತಾ ಹೊಸ ಸಂಚಿಕೆಯೊಂದಿಗೆ ನಿಮ್ಮ ಮುಂದೆ. ಹೇಗನಿಸಿತು ತಿಳಿಸಿ...,

-ಸಂಪಾದಕ


Saturday, 19 July 2014



ಅಳ್ಳೀಮರಕ್ಕೆ ವರುಷ ಸಮಾರಂಭ 18-07-2014

ಅಂದು ಶುಕ್ರವಾರ. ಹೆಗ್ಗಡಹಳ್ಳಿಯಲ್ಲಿ ಮುಂಜಾನೆಯಿಂದಲೇ ಜಿಟಿಜಿಟಿ ಮಳೆ. ಆದರೆ ಮಕ್ಕಳು ಮತ್ತು ನಮ್ಮೊಳಗೆ ಏನೋ ಆತಂಕ ಮತ್ತು ಸಂಬ್ರಮ. ಮಳೆ ಮದ್ಯಾಹ್ನ ನಿಲ್ಲದಿದ್ದರೆ ನಮ್ಮ ಕಾರ್ಯಕ್ರಮ ಸಾಂಗವಾಗಿ ನಡೆಯುವುದು ಸಾಧ್ಯವಿಲ್ಲ. ಆದರೂ ಕಾರ್ಯಕ್ರಮದ ತಯಾರಿ ನಡದೇ ಇತ್ತು. ಮುಖ್ಯ ಅತಿಥಿಗಳಾದ ಹಿರಿಯ ಸಾಹಿತಿ ಕೆ. ವೆಂಕಟರಾಜು ಸರ್ ಬೇಗನೆ ಬಂದಿದ್ದರು. ನಮ್ಮ ಶಾಲಾ ಆವರಣದೊಳಗೆ ಅಡಿಯಿಡುತ್ತಲೆ ಅವರ ಮೊದಲ ಉದ್ಘಾರ " ಎಷ್ಟು ಚನ್ನಾಗಿದೆ ವಾತಾವರಣ" 
ಅಡುಗೆ ಮನೆಯಲ್ಲಿ ಬಿಸಿಬಿಸಿ ಅನ್ನ ಸಾಂಬಾರಿನ ಜೊತೆ ಪಾಯಸದ ಪರಿಮಳ. ಈ ಮಳೆಯೋ ನಿಲ್ಲುವ ಹಾಗೆ ಕಾಣಿಸುವುದಿಲ್ಲ ಮಕ್ಕಳಲ್ಲಿ ಮತ್ತೆ ಆತಂಕ. ಮಳೆ ಚೂರು ಬಿಡುವು ಕೊಟ್ಟಿದ್ದೆ ಪಾಯಸ ತಟ್ಟೆಗೆ ಬಿತ್ತು. ಆಹಾ! ಸಂಭ್ರಮವೋ ಸಂಭ್ರಮ. ರುಚಿ ರುಚಿಯಾದ ಪಾಯಸವ ಉಂಡ ಕೂಡಲೆ ಮತ್ತೆ ಮಳೆ. ಮತ್ತೆ ಆತಂಕ ಕಾರ್ಯಕ್ರಮ ಮಾಡುವುದಕ್ಕೆ ಅಡ್ಡಿಯಾಗುತ್ತೋ ಅಂತ.

ಏನಾದರೂ ಆಗಲಿ ಕಾರ್ಯಕ್ರಮ ನಡೆಯಲಿ ಎಂದು ಆರಂಬಿಸಿಯೇ ಬಿಟ್ಟವು. ಮಳೆ ಮಕ್ಕಳು ನಡೆಸಿದ ಕಾರ್ಯಕ್ರಮವ ಕಂಡು ಸುರಿಯುವುದನ್ನೇ ನಿಲ್ಲಿಸಿ ದಂಗಾಗಿಬಿಟ್ಟಿತು. ವೇದಿಕೆಯ ಮೇಲೆ ದೊಡ್ಡವರಿದ್ದರೂ ಪೂರ್ಣ ಕಾರ್ಯಕ್ರಮ ಮಕ್ಕಳೆ ನಡೆಸಿದರು. ನಿರೂಪಣೆ- ದೀಪಿಕಾ, ಸ್ವಾಗತ-ಲೋಕೇಶ, ಪ್ರಸ್ಥಾವನೆ-ಶೀಲಾ, ವಂದನಾರ್ಪಣೆ- ಪ್ರಿಯಾಂಕ. ಮಕ್ಕಳು ಅರಳು ಹುರಿದಂತೆ ಮಾತನಾಡುವುದ ಕಂಡು ವಿಸ್ಮಯಪಟ್ಟಿದ್ದು ಹಿರಿಯರಾದ ವೆಂಕಟರಾಜು ಸರ್.

ಎಂಟನೇ ತರಗತಿಯ ಮಕ್ಕಳು ಹಾಡಿದ ಸಮಾನತೆಯ ಹಾಡಿನೊಂದಿಗೆ ಆರಂಭಗೊಂಡ ಕಾರ್ಯಕ್ರಮ ತುದಿಯವರೆಗೂ ಅಚ್ಚುಕಟಟಾಗಿ ನಡೆಯುವುದಕ್ಕೆ ಕಾರಣವಾದರು ಮಕ್ಕಳು. ವೇದಿಕೆ ನಿರ್ಮಾಣ ಮಾಡುವುದರಿಂದ ಹಿಡಿದು ಕಡೆಯಲ್ಲಿ ಎಲ್ಲವನ್ನು ಅವುಗಳ ಸ್ಥಾನಕ್ಕೆ ತಲುಪಿಸುವವರೆಗೆ ಅವರದೇ ಕೈಚಳಕ. "ನಮ್ಮ ಅಳ್ಳೀಮರ" ಎಂಬ ಅಭಿಮಾನ ಇಡೀ ಸಮಾರಂಭವನ್ನು ಸುಂದರವಾಗಿಸಿತು.


 ವೇದಿಕೆ ಸಜ್ಜಾಗಿದೆ

 ಎಂಟನೇ ತರಗತಿ ಮಕ್ಕಳಿಂದ ಸಮಾನತೆಗಾಗಿ ಆರಂಭ ಗೀತೆ

 ಎರಡನೇ ವರ್ಷದ ಮೊದಲ ಸಂಚಿಕೆ ಬಿಡುಗಡೆ.
(ಎಡದಿಂದ ಕೇಶವಮೂರ್ತಿ. ಫಾಮಿದಾ ಬೇಗಂ, ಅಂಬುಜಾ, ಆರ್. ಪರಶಿವಮೂರ್ತಿ, ಶ್ರೀಧರ ಭಟ್ಟ್, ಕೆ. ವೆಂಕಟರಾಜು, ಎ. ಎಂ. ಲಿಂಗರಾಜು, ಟಿ. ಆರ್. ಮಂಜುನಾಥ್.)


 ಕೆ. ವೆಂಕಟರಾಜು ಅವರು ಪತ್ರಿಕೆ ಬಿಡುಗಡೆಗೊಳಿಸಿ ಮಾತಾಡುತ್ತಿರುವುದು.


ನಂಜನಗೂಡಿನ ಹಿರಿಯ ಪತ್ರಕರ್ತರಾದ ಶ್ರೀಧರ ಭಟ್ಟರು ಮಾತನಾಡುತ್ತಿರುವುದು (ಆಂದೋಲನ ಪತ್ರಿಕೆ) 


 ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕರಾದ ಎ.ಎಂ. ಲಿಂಗರಾಜು ಅವರು ಮಾತಾಡುತ್ತಿರುವುದು

 ದೈಹಿಕ ಶಿಕ್ಷಕರಾದ ಆರ್. ಪರಶಿವಮೂರ್ತಿಯವರು ಮಾತನಾಡುತ್ತಿರುವುದು.


 ಕಾರ್ಯಕ್ರಮದ ರೂವಾರಿಗಳಾದ ನಮ್ಮ ಶಾಲೆಯ ವಿದ್ಯಾರ್ಥಿಗಳು

 ಕಾರ್ಯಕ್ರಮದ ನಿರೂಪಕಿ ಕುಮಾರಿ ದೀಪಿಕಾ

ಎಲ್ಲರನ್ನೂ ಸ್ವಾಗತಿಸಿದ ಲೋಕೇಶ 

ಪ್ರಸ್ತಾವಿಕ ಮಾತನ್ನಾಡಿದ ಕುಮಾರಿ ಶೀಲಾ 

ಎಲ್ಲರನ್ನೂ ವಂದಿಸಿದ ಕುಮಾರಿ ಪ್ರಿಯಾಂಕ 

ನಮ್ಮ ಅಳ್ಳೀಮರವ ನೋಡಿ 



ಕಾರ್ಯಕ್ರಮದ ಕುರಿತು ಪತ್ರಿಕಾ ವರದಿ
 ನಂಜನಗೂಡಿನ ಸತ್ಯಪ್ರಭ ಪತ್ರಿಕೆಯಲ್ಲಿನ ವರದಿ


ವಿಜಯವಾಣಿ ಪತ್ರಿಕೆಯಲ್ಲಿನ ವರದಿ
ದಿನಾಂಕ 18-07-2014ರ ಶುಕ್ರವಾರದಂದು ವಿಜಯವಾಣಿ ಪತ್ರಿಕೆಯಲ್ಲಿ ನಮ್ಮ "ಅಳ್ಳೀಮರ"ದ ಕುರಿತೊಂದು ವಿಶೇಷ ವರದಿ