Sunday, 28 September 2014



ಮಕ್ಕಳ ದಸರಾ -2014

ಮೈನಾ ರಂಗ ಬಳಗ ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿ.
ದಿನಾಂಕ 27-09-2014ರ ಶನಿವಾರ ಮಯ್ಸೂರಿನ ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ 2014ರ ಉದ್ಘಾಟನಾ ಸಮಾರಂಭ ನಡೆಯಿತು. ನಾಲ್ಕು ದಿನಗಳ ಕಾಲ ನಡೆಯುವ ಈ ಮಕ್ಕಳ ದಸರೆಯಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಮ್ಮ ಶಾಲೆಯ ಮೈನಾ ರಂಗ ಬಳಗದ ಸದಸ್ಯರಿಂದ ಈ ಬಾರಿಯ ಮಕ್ಕಳ ದಸರೆಯಲ್ಲಿ ಮೊದಲ ಸಾಂಸ್ಕೃತಿಕ ಕಾರ್ಯಕ್ರಮ ಎರಡು ಕಿರುನಾಟಕಗಳ ಪ್ರದರ್ಶನ ನಡೆಯಿತು. ಶಿಕ್ಷಣ ಇಲಾಖೆಯವರೆ ನಮ್ಮ ಶಾಲೆಯನ್ನು ಆಯ್ದುಕೊಂಡು ವರ್ತಮಾನದ ಎರಡು ಪ್ರಮುಖ ವಿಷಯಗಳನ್ನು ನೀಡಿ ನಾಟಕ ಮಾಡಲು ತಿಳಿಸಿದ್ದರು. ಅದರಂತೆ ನಾವು ಮೈನಾ ರಂಗ ಬಳಗದ ಗೆಳೆಯರು "ಶಿಕ್ಷಣ ಹಕ್ಕು ಕಾಯಿದೆ" ಹಾಗೂ "ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ" ವಿಷಯಗಳಿಗೆ ಎರಡು ಕಿರುನಾಟಕದ ತಯಾರಿ ನಡೆಸಿದೆವು.

ಒಂದೆಡೆ ಮಧ್ಯವಾರ್ಷಿಕ ಪರೀಕ್ಷೆ, ಇನ್ನೊಂದೆಡೆ ವಿಜ್ಞಾನ ನಾಟಕ ಸ್ಪರ್ಧೆ, ಮತ್ತೊಂದೆಡೆ ಪ್ರತಿಭಾಕಾರಂಜಿಯ ತಯಾರಿ. ಇದರ ನಡುವೆಯೆ ದಸರಾ ರಜೆಯ ಆರಂಭ! ಇವೆಲ್ಲದರ ನಡುವೆ ನಮ್ಮ ಉತ್ಸಾಹ ಮಾತ್ರ ಚೂರೂ ಕುಂದಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ನಮ್ಮ ಮೇಲಿರಿಸಿದ ಭರವಸೆ, ಮತ್ತು ಜಗನ್ಮೋಹನ ಅರಮನೆ, ಮತ್ತು ಮಕ್ಕಳ ದಸರಾದಲ್ಲಿ ನೆರೆಯುವ ಸಾವಿರಾರು ಮಕ್ಕಳೆದುರು ನಿಲ್ಲುವ ಕ್ಷಣಗಳನ್ನು ಕಲ್ಪಿಸಿಕೊಂಡು ಪುಳಕಗೊಳ್ಳುತ್ತಾ ದಸರಾ ರಜೆ, ಶನಿವಾರ ಭಾನುವಾರಗಳೆನ್ನದೆ ಬುತ್ತಿ ಕಟ್ಟಿಕೊಂಡು ಇಡೀ ದಿನವಿದ್ದು ತಾಲೀಮು ನಡೆಸಿದೆವು.

ಅಂತೂ ಆ ಅಪೂರ್ವ ಕ್ಷಣ ಬಂದೇ ಬಿಟ್ಟಿತು. 27-09-2014ರ ಮುಂಜಾನೆಯೆ ಶಾಲೆಗೆ ಬಂದು ನಾವು 35 ಜನ ರಂಗ ಬಳಗದ ಗೆಳೆಯರು  ಸಜ್ಜಾಗಿ ಹೆಗ್ಗಡಹಳ್ಳಿಯಿಂದ ಮಯ್ಸೂರ ಕಡೆ ಹೊರಟೆವು. ಅರಮನೆಯಲ್ಲಿ ಸಾವಿರಾರು ಮಕ್ಕಳು, ಹಿರಿಯರು, ಮಂತ್ರಿ ಮಹೋದಯರು ನೆರೆದಿದ್ದರು. 

ಶಿಕ್ಷಣ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ ಅವರು ಮಾತನಾಡುತ್ತಾ "ಈ ಭೂಮಿಯ ಮೇಲೆ ದೇವರು ಅಂತೇನಾದರೂ ಇದ್ದರೆ ಅದು ಮಕ್ಕಳು" ಎಂದರು. ಹೌದು, ಅವರು ವೇದಿಕೆಯ ಮೇಲೆ ಹಾಗೆ ಅದ್ಭುತವಾಗಿ ಮಾತನಾಡುತ್ತಿದ್ದರೆ, ಪ್ರೇಕ್ಷಾಂಗಣದಲ್ಲಿ ಸಾವಿರಾರು ದೇವರುಗಳು ಅವರವರದೇ ಗದ್ದಲದಲ್ಲಿ ಮುಳುಗಿ ಹೋಗಿದ್ದರು. ಅದಕ್ಕೇ ಏನೋ ಸಚಿವರ ಅಪರೂಪದ ಮಾತುಗಳು ಮಯ್ಸೂರಿನ ಮಾಧ್ಯಮ ಮಿತ್ರರಿಗೆ ಕೇಳಿಸದೇ ಹೋದದ್ದು. ಯುವ ದಸರಾದಲ್ಲಿ ಹುಚ್ಚೆದ್ದು ಕುಣಿಯುವ ಕಿರುಚುವುದೇ ಪ್ರಮುಖವಾಗಿ ಹೋಯಿತು.

ಅಂತೂ ಸಭಾ ಕಾರ್ಯಕ್ರಮ ಮುಗಿದು, ಮಕ್ಕಳ ವಿವಿಧ ವೇಷಭೂಷಣ ಸ್ಪರ್ಧೆ ನಡೆದು ವೇದಿಕೆ ಮೈನಾ ರಂಗ ಬಳಗಕ್ಕೆ ತೆರೆದುಕೊಂಡಿತು. "ಶರಣು ಹೇಳೆವ್ರಿ ಸ್ವಾಮಿ ನಾವು ನಿಮಗ" ಎಂಬ ಕಂಬಾರರ ಹಾಡಿನೊಂದಿಗೆ ನಮ್ಮ ಕಾರ್ಯಕ್ರಮ ಆರಂಬಿಸಿದೆವು. 
ಶಿಕ್ಷಣ ಹಕ್ಕು ಕಾಯಿದೆ ಕುರಿತಾದ ಕಿರುನಾಟಕ. ಸರ್ಕಾರಿ ಶಾಲೆ, ಶಾಲೆಗೆ ಮಕ್ಕಳಿಗೆ ಸರ್ಕಾರ ನೀಡುವ ಸೌಲಭ್ಯದ ಕುರಿತು ನಂಜನಗೂಡಿನ ಸಾಮಾನ್ಯ ಹಳ್ಳಿಯ ಜನರು ನೋಡುವ ದೃಷ್ಠಿಕೋನದಲ್ಲಿ ಇಡೀ ನಾಟಕ ಕಟ್ಟಲ್ಪಟ್ಟಿತ್ತು. ಅಂತರಾಳದಲ್ಲಿ ಹೆಣ್ಣು ಮಗಳೊಬ್ಬಳ ಹೋರಾಟ, ಗೌಡನೆನ್ನಿಸಿಕೊಳ್ಳುವ ಗಂಡಸೊಬ್ಬನ ದೌರ್ಜನ್ಯದ ಮೇಲೆ ಬೆಳಕು ಚಲ್ಲುತ್ತಾ ಶಿಕ್ಷಣ ಹಕ್ಕು ಕಾಯಿದೆಯ ಕುರಿತು ನಮ್ಮ ನಾಟಕ ರೂಪುಗೊಂಡಿತ್ತು.
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಸ್ವರೂಪ, ಅವುಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಮಹಿಳೆ ಸಂಘಟಿತ ಗೊಳ್ಳುವ ಚಿತ್ರಣದ ನಾಟಕ. ಈ ದೇಶದಲ್ಲಿ ನಡೆಯುವ ಬಾಲ್ಯವಿವಾಹ, ದೌರ್ಜನ್ಯ, ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳನ್ನು ಪ್ರಧಾನವಾಗಿರಿಸಿಕೊಂಡು ಹೆಣೆಯಲ್ಪಟ್ಟ ಈ ರೂಪಕವನ್ನು ನಮ್ಮ ರಂಗಬಳಗದ ಹೆಣ್ಣು ಮಕ್ಕಳೇ ಅಭಿನಯಿಸಿದ್ದರು. ದೌರ್ಜನ್ಯದ ಪ್ರತೀಕವಾಗಿ ನಾಲ್ವರು ಘೋರ ರೂಪಿ ಗಂಡಸಿದ್ದರಷ್ಟೆ.

ಸುಮಾರು 50 ನಿಮಿಷಗಳ ನಮ್ಮ ಪ್ರದರ್ಶನ ಯಶಸ್ವಿಯಾಗಿತ್ತು ಎನ್ನುವುದಕ್ಕೆ ಪ್ರೇಕ್ಷಕ ಸಮೂಹ ನಿಮಿಷಗಳ ಕಾಲದ ಕರತಾಡನವೇ ಸಾಕ್ಷಿಯಾಗಿತ್ತು. ಗೌಡನ ಪಾತ್ರಧಾರಿ ಲೋಕೇಶ ಎಚ್. ಎಂ. ಪರಿಚಯ ಮಾಡುತ್ತಿದ್ದಂತೆ ಇಡೀ ಸಭಾಂಗಣ ಮುಗಿಲುಮುಟ್ಟುವಂತೆ ಕೂಗಿತು.ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿರೂಪಿಸಿದರು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಡಾ. ಡಿ. ವಿ. ಕಾಂತ ಅವರಿಗೆ ಪ್ರೇಕ್ಷಕರು ಮಾಡಿದ ಕರತಾಡನವೇ ಸಾಕಾಗುತ್ತಿರಿಲಿಲ್ಲ; ನಾಲ್ಕಾರು ಬಾರಿ ಈ ಮಕ್ಕಳನ್ನು ನಿಮ್ಮ ಜೋರಾದ ಚಪ್ಪಾಳೆಯೊಂದಿಗೆ ಅಭಿನಂದಿಸಿ ಎಂದು ಕೂಗಿ ಕೂಗಿ ಹೇಳುತ್ತಿದ್ದರು.
ಹಲವಾರು ಸರ್ಕಾರಿ ಶಾಲೆಯ ಶಿಕ್ಷಕರು ನೇಪಥ್ಯಕ್ಕೆ ಧಾವಿಸಿ ಅಭಿನಂದಿಸಿದರು. ಮಾತುಗಳೆ ಬಾರದ ಮಕ್ಕಳ ಕೈಕುಲುಕಿ ಅಭಿನಂದಿಸುವ ಪರಿಯೆ ಹೇಳುತ್ತಿತ್ತು ಅವರ ಸಂಭ್ರವನ್ನು.

ಸಾಕಲ್ಲವೆ ನಮ್ಮ ಮಕ್ಕಳ ಶ್ರಮ ಸಾರ್ಥಕಗೊಳ್ಳಲು ಇಂಥದ್ದೊಂದು ಅಭೂತಪೂರ್ವ ಕ್ಷಣ?
ಹೌದು, ನಾಟಕ ಮುಗಿದ ಗಳಿಗೆಯೆ ನಮ್ಮ ಆತಂಕಗಳೆಲ್ಲ ಮಾಯವಾಗಿ ಹೊನಲಾಗಿತ್ತು ಸಂಭ್ರಮ. ಇಂಥದ್ದೊಂದು ಸಂಭ್ರಮವನ್ನು ನಮಗೊದಗಿಸಿಕೊಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲೆಯ ಡಿಡಿಪಿಐ ಶ್ರೀ ಎಚ್. ಆರ್. ಬಸಪ್ಪ, ಶಿಕ್ಷಣಾಧಿಕಾರಿಗಳಾದ ಡಾ. ಡಿ. ವಿ. ಕಾಂತ, ಶ್ರೀಮತಿ ಮಂಜುಳಾ ಡಯಟ್ ಮೈಸೂರು, ಶ್ರೀ ಚಂದ್ರ ಪಾಟೀಲ್, ಶ್ರೀ ಎಸ್. ಪಿ. ನಾಗರಾಜು ಅವರು, ಮಕ್ಕಳ ದಸರಾ ಉಪಸಮಿತಿಯವರಿಗೆ ನಮ್ಮ ಮೈನಾ ರಂಗ ಬಳಗ ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿಯ ಪರವಾಗಿ ಧನ್ಯವಾದಗಳು.

ಮತ್ತು ಈ ಎಲ್ಲಾ ಸಂಭ್ರಮವನ್ನು ಸಾಧ್ಯವಾಗಿಸಿದ ರಂಗಭೂಮಿಗೆ. ಮಕ್ಕಳು ತಾಲೀಮಿನಲ್ಲಿ ಬಹುತೇಕ ಚನ್ನಾಗಿ ಮಾಡುವುದೇ ಇಲ್ಲ; ಆದರೆ ಪ್ರದರ್ಶನ ನೀಡಲು ಪ್ರೇಕ್ಷಕನ ಮುಂದೆ ನಿಂತಾಗ ಅವರು ಆವೇಶಗೊಂಡಂತೆ ಅಥವಾ ಮೈದುಂಬಿಕೊಂಡು ಪ್ರೇಕ್ಷಕ ಮತ್ತು ನಿರ್ದೇಶಕನನ್ನು ಚಕಿತಗೊಳಿಸಿಬಿಡುತ್ತಾರೆ. ಅದು ಸಾಧ್ಯವಾಗುವುದು ರಂಗಭೂಮಿಯಲ್ಲಿ, ನಾಟಕದಲ್ಲಿ.


ಇದೇ ಸಂಭ್ರಮದಲ್ಲಿ ಅಂಬಾವಿಲಾಸ ಅರಮನೆಯನ್ನು ನೋಡಿಕೊಂಡು, ನಂತರ "ನಟನ" ತಂಡದ 'ಧಾಂ ಧೂಂ ಸುಂಟರಗಾಳಿ' (ನಿರ್ದೇಶನ : ಜೀವನ್ ರಾಂ ಸುಳ್ಯ) ಹಾಗೂ 'ಕಂಸಾಯಣ (ನಿರ್ದೇಶನ : ಸಂತೋಷ ಗುಡ್ಡಿಯಂಗಡಿ) ನಾಟಕವನ್ನು ನೋಡಿಕೊಂಡು ಹೆಗ್ಗಡಹಳ್ಳಿಯನ್ನು ತಲುಪಿದೆವು.


ಶರಣು ಹೇಳೆವ್ರಿ ಸ್ವಾಮಿ ನಾವು ನಿಮಗ ಎಂದು ಕಾರ್ಯಕ್ರಮ ಆರಂಭಿಸುತ್ತಾ.......






ಶಿಕ್ಷಣ ಹಕ್ಕು ಕಾಯಿದೆಯ ನಾಟಕ ಆರಂಭ ಗೊಂಡು.... ಕುಡುಕ ಬಸ್ಯ, ಗೌಡ, ಗೌಡನ ಛತ್ರಿ























ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ವಿರೋದಿಸುತ್ತಾ....



ಡಾ. ವಿನಯಾ ಅವರ ಅದ್ಭುತಹಾಡು "ಹಾದಿಯುದ್ದಕ್ಕೂ ಗಿಡ ನೆಡುತ್ತಾ...." ಹಾಡಿಕೊಂಡು ದೂರ್ತರನ್ನು ತುಳಿದು ಒಂದಾಗಿ ಹೆಜ್ಜೆ ಹಾಕುತ್ತಾ......


ನಾವಿಷ್ಟು ಜನ ಮೈನಾ ರಂಗ ಬಳಗದ ಗೆಳೆಯರು


ಸಭೆಗೆ ನಮ್ಮ ಪರಿಚಯ ಮಾಡಿಕೊಡುತ್ತಾ.....




ಡಿಡಿಪಿಐ ಶ್ರೀ ಎಚ್. ಆರ್. ಬಸಪ್ಪ, ಡಾ. ಡಿ.ವಿ. ಕಾಂತ, ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಚಂದ್ರಕಾಂತ್, ಶ್ರೀ ಬೆಟ್ಟನಾಯಕ ಅವರೊಂದಿಗೆ ನಮ್ಮ ಗೆಳೆಯರ ಬಳಗ.....








ಮಯ್ಸೂರಿನ ಹೆಮ್ಮೆ "ಅಂಬಾ ವಿಲಾಸ ಅರಮನೆ" ಮುಂದೆ ಕೆಲವು ಕ್ಷಣಗಳು....








Saturday, 20 September 2014


ಹೆಡಿಯಾಲದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 16-09-2014 ರಂದು ನಡೆದ ಹೋಬಳಿಮಟ್ಟದ ಪ್ರತಿಭಾಕಾರಂಜಿಯಲ್ಲಿ ನಮ್ಮ ಶಾಲೆಯ ಮಕ್ಕಳ ಚಿತ್ರಗಳು



 ಛದ್ಮವೇಷ


 ಇವನು ಮಹದೇವಸ್ವಾಮಿ. ಹೆಡಿಯಾಲದಲ್ಲಿ ಪ್ರಥಮ ಪಿ.ಯು.ಸಿ. ಓದುತ್ತಿರುವ ಇವನು ಕಳೆದ ವರ್ಷ ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಜಾನಪದಗೀತೆ ಸ್ಪರ್ಧೆಯಲ್ಲಿ ರಾಜ್ಯಕ್ಕೇ ದ್ವಿತೀಯ ಸ್ಥಾನಗಳಿಸಿ ನಂಜನಗೂಡು ತಾಲೂಕಿಗೆ ಕೀರ್ತಿ ತಂದಿರುತ್ತಾನೆ. ಇವನನ್ನು ತರಬೇತಿಗೊಳಿಸಿದವರು ಹೆಡಿಯಾಲ ಶಾಲೆಯ ಚಿತ್ರಕಲಾ ಶಿಕ್ಷಕ ಸೂರ್ಯಕಾಂತ ನಂದೂರ್.



 ಕಂಸಾಳೆ 


 ನಾಟಕಕ್ಕೆ ಪ್ರಥಮ ಬಹುಮಾನ

 ಕೋಲಾಟಕ್ಕೆ ಪ್ರಥಮ ಬಹುಮಾನ

 ಕಂಸಾಳೆಗೆ ಪ್ರಥಮ ಬಹುಮಾನ

ನಾವೆಲ್ಲ ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿದವರು.

Monday, 18 August 2014




ಹತ್ತನೇ ಸಂಚಿಕೆ

_____________________________________________________________

ಕುಸ್ತಿಯಲ್ಲಿ ಪ್ರಶಸ್ತಿ



ಇತ್ತೀಚೆಗೆ ಮೈಸೂರಿನ ಲಯನ್ಸ್ ಸೆಂಟ್ರಲ್ ಸಮುಚ್ಛಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ನಮ್ಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಉಮೇಶ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 10ನೇ ತರಗತಿ ಕೇಶವಮೂರ್ತಿ ಡಿ. ಎಸ್. ತೃತೀಯ ಸ್ಥಾನ ಪಡೆದಿರುತ್ತಾನೆ. ಈ ಇಬ್ಬರೂ ಕುಸ್ತಿ ಪೈಲ್ವಾನರಿಗೆ ‘ಅಳ್ಳೀಮರ’ ಶುಭಕೋರುತ್ತದೆ.
*******************************

ಅತ್ಯಾಚಾರ :- ಮಕ್ಕಳ ಸ್ಪಂದನೆ


ಇತ್ತೀಚೆಗೆ ಅತ್ಯಾಚಾರ ಹೆಚ್ಚಾಗಿದೆ. ಗಂಡು ಮಕ್ಕಳಿಗೆ ಸಮಾಜದ ಬಗ್ಗೆ ಭಯವಿಲ್ಲ, ಯಾರೇನಂದರೂ ಹೆದರಿಕೆ ಇಲ್ಲ. ಯಾರ ಮಾತನ್ನೂ ಕೇಳುವುದಿಲ್ಲ. ಯೋಚನೆ ಮಾಡುವುದಿಲ್ಲ. ದುರಾಸೆ ಸ್ವಾರ್ಥ ಇವೆಲ್ಲ ಮನುಷ್ಯನಲ್ಲಿ ಹೆಚ್ಚಾಗಿಬಿಟ್ಟಿದೆ.
ಹೆಣ್ಣು ಮಕ್ಕಳನ್ನು ಒಂಟಿಯಾಗಿ ಬಿಡಬಾರದು. ಹಾಗಂತ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಹಿಸಬೇಡಿ ಅಂತಲ್ಲ. ಅವರು ಚನ್ನಾಗಿ ಓದಲಿ. ಗಂಡು ಮಕ್ಕಳು ಅಂದರೆ ಎಲ್ಲಾ ಗಂಡು ಮಕ್ಕಳೂ ಅಲ್ಲ. ಓದದೆ ಶಾಲೆಗೆ ಬಾರದೆ ಇರ್ತಾರಲ್ಲ ಅಂತಹ ಮಕ್ಕಳನ್ನ ಊರಿನ ಮುಖಂಡರು, ಆರಕ್ಷಕರು ಕಂಡು ಹಿಡಿದು ಅವರಿಗೆ ಒಳ್ಳೆಯ ಬುದ್ಧಿಯನ್ನ ಕಲಿಸಬೇಕು.
-ಲೋಕೇಶ ಎಚ್. ಎಂ.
9ನೇ ತರಗತಿ, ಹೆಗ್ಗಡಹಳ್ಳಿ.
************************************************

ನಾನು ಕಂಡಂತೆ ಅತ್ಯಾಚಾರಕ್ಕೆ ಕಾರಣಗಳು
* ಆಕರ್ಷಣೆಯಿಂದ
* ದ್ವೇಷದಿಂದ
* ಮೋಸದಿಂದ
* ಮೋಹದಿಂದ
* ಪ್ರೀತಿಯಿಂದ
* ಅವರು ಮಾಡುವ ಕೆಲಸ ಅದೇ ಆಗಿರಬಹುದು
ಹೀಗೆ ತಡೆಗಟ್ಟಬಹುದು..
* ಮುಖ್ಯವಾಗಿ ನಮ್ಮನ್ನು ಕಾಪಾಡಿಕೊಳ್ಳಲು ಧೈರ್ಯ ಮತ್ತು ಶಕ್ತಿ ಇರಬೇಕು.
* ನ್ಯಾಯಕ್ಕಾಗಿ ಪ್ರತಿಭಟಿಸಬೇಕು.
* ಪೋಲಿಸರಿಗೆ ತಿಳಿಸಿ ದೂರು ಕೊಡಬೇಕು.
* ಎಚ್ಚರಿಕೆಯಿಂದ ತಿರುಗಾಡಬೇಕು, ಮನೆಯವರಿಗೆ ತಿಳಿಸಬೇಕು.
* ಕರಾಟೆ ಕಲಿತಿರಬೇಕು ಅಥವಾ ಕರಾಟೆ ಕಲಿತಿಲ್ಲದವರು ಜೊತೆಯಲ್ಲಿ ಖಾರದಪುಡಿಯನ್ನು ಇಟ್ಟುಕೊಳ್ಳಬೇಕು.
* ಯಾರಾದರು ಇಬ್ಬರಿಗೆ ಕಠಿಣವಾದ ಶಿಕ್ಷೆ ಕೊಟ್ಟರೆ ಮಿಕ್ಕವರು ಎಚ್ಚರಗೊಳ್ಳುತ್ತಾರೆ.
-ತೇಜ ಎಚ್. ಎಸ್.
10ನೇ ತರಗತಿ, ಹೆಗ್ಗಡಹಳ್ಳಿ.
****************************************
ಅತ್ಯಾಚಾರ ಮಾಡುವವರು
* ಅವರು ರೌಡಿಯಾಗಿರಬೇಕು
* ಅವರು ನೋಡುವ ದೃಷ್ಠಿ ಸರಿ ಇಲ್ಲದಿರಬೇಕು.
* ಅವರು ಶಾಲೆ ಬಿಟ್ಟವರಾಗಿರಬೇಕು.
* ಅವರು ಮೌಲ್ಯ ತಿಳಿಯದವರಾಗಿರಬೇಕು.
* ಅವರು ತಿಳುವಳಿಕೆ ಇಲ್ಲದವರಾಗಿರಬೇಕು.
* ಅವರು ಕೆಟ್ಟವರಾಗಿರುತ್ತಾರೆ.
-ಸುನಂದ ಎಂ. ಆರ್.
9ನೇ ತರಗತಿ, ಹೆಗ್ಗಡಹಳ್ಳಿ
***********************************************

ಅತ್ಯಾಚಾರವನ್ನು ಕುಟುಂಬಸ್ತರು ಮಾಡುವುದಿಲ್ಲ. ಸಮಾಜದಲ್ಲಿ ಕೆಟ್ಟವರು ಎನಿಸಿಕೊಂಡವರು ಅತ್ಯಾಚಾರ ಮಾಡುತ್ತಾರೆ.  ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಅತ್ಯಾಚಾರ ಮಾಡುತ್ತಾರೆ. ಅತ್ಯಾಚಾರ ಮಾಡಿದವರನ್ನು ಹಿಡಿದು ಊರಿನಲ್ಲಿಯೇ ಶಿಕ್ಷೆ ಕೊಡಬೇಕು.

-ಸುರೇಶ ಎಸ್.
9ನೇ ತರಗತಿ, ಹೆಗ್ಗಡಹಳ್ಳಿ.
**************************************************

ಸಣ್ಣ ನಾಯಿ


ಸಣ್ಣ ನಾಯಿ ದೊಡ್ಡ ಹಪ್ಪಳ
ಕಚ್ಚಿ ತಂತು
ಕುಟುಂ ಕುಟುಂ ಹರುಕು ಮುರುಕು
ತಿಂದು ಕುಣೀತು

ಸಣ್ಣ ನಾಯಿ ದೊಡ್ಡ ಲಡ್ಡು
ಉಂಡೆ ತಂತು
ಸಿಹಿಯ ನೆಕ್ಕಿ ಸವಿಯ ಮೆಚ್ಚಿ
ಬಾಲ ಕುಣಿಸಿತು

ಸಣ್ಣ ನಾಯಿ ದೊಡ್ಡ ಮೂಳೆ
ಎತ್ತಿ ತಂತು
ಆಚೆ ಮುರಿದು ಈಚೆ ಕಡಿದು
ಬಾಯಿ ಚಪ್ಪರಿಸ್ತು

ಸಣ್ಣ ನಾಯಿ ದೊಡ್ಡ ಗೊರಟು
ಹಿಡಿದು ತಂತು
ಉರುಳಿಸಿ ನೆಕ್ಕಿ ನಾಲಗೆ ತಿಕ್ಕಿ
ಪಿಳಿಪಿಳಿಗುಟ್ಟಿತು

ಸಣ್ಣ ನಾಯಿ ದೊಡ್ಡ ಚಪ್ಪಲಿ
ಕದ್ದು ತಂತು
ಕಚ್ಚಿ ಕಚ್ಚಿ ಜೂಲು ಮಾಡಿ
ಹರುಷದಿ ನೆಕ್ಕಿತು.

-ವಿಜಯಶ್ರಿ ಹಾಲಾಡಿ

(ನೀರ್ಕೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಅಧ್ಯಾಪಕಿಯಾಗಿರುವ ವಿಜಯಶ್ರಿ ಹಾಲಾಡಿ ಅವರು ಕನ್ನಡದಲ್ಲಿ ಮಕ್ಕಳಿಗಾಗಿ ಬರೆಯುತ್ತಿರುವ ಪ್ರಮುಖರು. )



ಚಿತ್ರ : ಪ್ರಿಯಾಂಕ ಕೆ. ಎಂ.
9ನೇ ತರಗತಿ ಹೆಗ್ಗಡಹಳ್ಳಿ.
****************************************

ನರಿಯ ಜಾಣತನ

ಬೇಟೆಯಾಡಿ ತನ್ನ ಊಟ ಸಂಪಾದಿಸಿಕೊಳ್ಳಲಾಗದಷ್ಟು ವಯಸ್ಸಾದ ಸಿಂಹ ಒಂದು ಉಪಾಯ ಹುಡುಕಿತು. ಅದು ಒಂದು ಗುಹೆಯೊಳಗೆ ನನಗೆ ಆರೋಗ್ಯ ಸರಿಯಿಲ್ಲ ಎಂದು ನಾಟಕ ಮಾಡಿತು. ಇದನ್ನು ತಿಳಿದ ಪ್ರಾಣಿಗಳು ಸಿಂಹದ ಆರೋಗ್ಯ ವಿಚಾರಿಸಲು ಅದರ ಗುಹೆಗೆ ಬಂದವರನ್ನು ಸಿಂಹ ತನ್ನ ಆಹಾರವನ್ನಾಗಿ ಹಿಡಿದು ತಿನ್ನತೊಡಗಿತು. ಇದನ್ನು ತಿಳಿದ  ನರಿ ಒಂದು ದಿನ ಸಿಂಹದ ಆರೋಗ್ಯ ವಿಚಾರಿಸಲು ಗುಹೆ ಬಳಿ ಬಂದು ‘ಏನು ಸಿಂಹಣ್ಣ ನಿನ್ನ ಆರೋಗ್ಯ ಚೆನ್ನಾಗಿದೆಯೇ?’ ಎಂದು ಕೇಳಿತು. ಅದಕ್ಕೆ ಸಿಂಹಣ್ಣ ‘ಸ್ವಲ್ಪ ಮಟ್ಟಿಗೆ ಸುದಾರಿಸಿದೆ ತಮ್ಮಯ್ಯಾ’ ಎಂದು ಹೇಳಿ, ‘ಯಾಕೆ ಹೊರಗಡೆಯೆ ನಿಂತಿದಿಯಾ ಒಳಗಾದರೂ ಬರಬಾರದೇ?’ ಎಂದು ಹೇಳಿತು. ಅದಕ್ಕೆ ನರಿ ‘ಒಳಗೆ ಬಂದವರು ಹೊರಗಡೆ ಬಂದಿರುವ ಹೆಜ್ಜೆಯ ಗುರುತುಗಳೇ ಕಾಣುತ್ತಿಲ್ಲ!’ ಎಂದು ನರಿ ಸಿಂಹದ ಉತ್ತರಕ್ಕೆ ಕಾಯದೆ ಅಲ್ಲಿಂದ ಓಡಿ ಹೋಯಿತು.

ಸಂಗ್ರಹ : ದೀಪಿಕಾ ಎಚ್. ಪಿ.
9ನೇ ತರಗತಿ ಹೆಗ್ಗಡಹಳ್ಳಿ.
****************************************

ವೇದ ಸುಳ್ಳಾದರು ಗಾದೆ ಸುಳ್ಳಾಗದು!
* ಅಗ್ಗದ ಶೆಟ್ಟಿ ; ಮುಗ್ಗಿದ ಜೋಳ
* ಅಜ್ಜಿ ನೂತಿದ್ದೆಲ್ಲಾ ಅಜ್ಜನ ಉಡಿದಾರಕ್ಕೆ
* ಅವ್ವ ಸತ್ತ ಮೇಲೆ ಅಪ್ಪ ಚಿಕ್ಕಪ್ಪ
* ಅಟ್ಟ ಹತ್ತದವನು; ಬೆಟ್ಟ ಹತ್ತಿಯಾನೆ!
* ಅಳದಿದ್ದರೆ ಅಮ್ಮನೂ ಹಾಲುಣಿಸಳು
* ಅಳಿಲು ಏರಿದರೆ ಅರಳಿಮರ ಅಲ್ಲಾಡಿತೆ!
ಸಂಗ್ರಹ : ಸುಮತಿ ಕೆ.
9ನೇ ತರಗತಿ. ಹೆಗ್ಗಡಹಳ್ಳಿ
********************************



ಚಿತ್ರ : ವಸಂತ ಕುಮಾರ್ ಡಿ. ಪಿ.
9ನೇ ತರಗತಿ, ಹೆಗ್ಗಡಹಳ್ಳಿ.
****************************************


ಚಿತ್ರ : ಶಿಲ್ಪ ಎಸ್.
9ನೇ ತರಗತಿ, ಹೆಗ್ಗಡಹಳ್ಳಿ.
****************************************

ನಾಳೆಗಳು ನಮ್ಮದು...

ಮತ್ತೆ ತಾಯಿ ಕಬಿನಿ ಮೈದುಂಬಿದ್ದಾಳೆ. ಅಳ್ಳೀಮರದ ಊರು ನಳನಳಿಸುತ್ತಿದೆ. ರೈತರೆಲ್ಲ ಮೈಮುರಿದು ದುಡಿಯುತ್ತಿದ್ದಾರೆ ನಾಳೆಗೆ ನಾವೆಲ್ಲ ಉಣ್ಣಲು...
ಆದರೆ ನಾಳೆಗಳಲ್ಲಿ ನಲಿಯಬೇಕಾದ ನಮ್ಮ ಮಕ್ಕಳು ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳಿಂದಾಗಿ ನಲುಗಿ ಹೋಗಿದ್ದಾರೆ. ಯಾರು ಸಮೃದ್ಧ ನಾಳೆಗಳನ್ನು ಮಕ್ಕಳಿಗೆ ನಿರ್ಮಾಣ ಮಾಡಿಕೊಡಬೇಕಾಗಿದೆಯೋ ಅವರೇ ಮಕ್ಕಳ ಪಾಲಿನ ದುಃಸ್ವಪ್ನವಾಗುತ್ತಿದ್ದಾರೆ. ಏನು ಮಾಡಬಹುದು? ಗೊತ್ತಿಲ್ಲ. ಗೊಂದಲದಲ್ಲೇ ನಮ್ಮ ಮಕ್ಕಳು ಒಂದಷ್ಟು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ನಾಳೆಗಳು ನಮ್ಮದು. ಅದಕ್ಕೇ ಈ ಸಂಚಿಕೆ
-ಸಂ.