ವಿಭಾಗಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ
ಗುಂಬಳ್ಳಿ ಪ್ರಥಮ ; ಹೆಗ್ಗಡಹಳ್ಳಿ ದ್ವಿತೀಯ
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ನಾಟಕ ಸ್ಪರ್ಧೆ ದಿನಾಂಕ 21-11-2013 ರ ಗುರುವಾರ ಮೈಸೂರಿನ ವಸಂತ ಮಹಲ್ ನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆವರಣದಲ್ಲಿ ನಡೆಯಿತು.
ವೇಷಧಾರಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮೈಸೂರು ಜಿಲ್ಲಾ ಪಂಚಾಯ್ತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀ ಸಿದ್ಧರಾಜು ಅವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಮತಿ ಜೋಲಾ ಜಬಿನ್ ಅವರು , ಶ್ರೀಮತಿ ಮಂಜುಳ ಅವರು ಹಾಗೂ ಡಯಟ್ ಪ್ರಾಂಶುಪಾಲರಾದ ಶ್ರೀ ಬಿ. ಕೆ. ಬಸವರಾಜು ಅವರುಗಳು ಒಂದೊಂದು ವಾದ್ಯಗಳನ್ನು ನುಡಿಸುವ ಮೂಲಕ ಮಕ್ಕಳ ಈ ನಾಟಕೋತ್ಸವಕ್ಕೆ ಚಾಲನೆ ನೀಡಿದರು. ಸ|| ಪ್ರೌ|| ಶಾಲೆ ಹೆಗ್ಗಡಹಳ್ಳಿಯ ನಾಟಕ ಮೇಸ್ಟ್ರಾದ ಸಂತೋಷ ಗುಡ್ಡಿಯಂಗಡಿ ರಂಗಗೀತೆ ಹಾಡಿದರೆ ಹೆಗ್ಗಡಹಳ್ಳಿಯ ವಿದ್ಯಾರ್ಥಿಗಳು ವೈಜ್ಷಾನಿಕ ಮನೋಭಾವ ಬೀರುವ ಹಾಡೊಂದನ್ನು ವಾದ್ಯಮೇಳದೊಂದಿಗೆ ಪ್ರಸ್ತುತಪಡಿಸಿ ಕಾರ್ಯಕ್ರಮದ ಆರಂಭಕ್ಕೆ ಮೆರುಗು ನೀಡಿದರು.
ಶ್ರೀ ಸಿದ್ಧರಾಜು ಅವರು ಮಾತನಾಡುತ್ತಾ ಒಂದೊಂದು ಮಗುವೂ ಅದ್ಭುತ. ಒಂದು ಮಗುವಿನ ಹಾಗೆ ಇನ್ನೊಂದು ಮಗುವಿರುವುದಿಲ್ಲ. ನಿಮ್ಮ ಹಾಗೆ ಇನ್ನೊಬ್ಬರು ಈ ಜಗತ್ತಿನಲ್ಲಿ ಸಿಗಲಾರರು. ಅಂದಮೇಲೆ ನೀವು ಜಗತ್ತಿನ ಅದ್ಭುತವಲ್ಲವೇ? ಮಕ್ಕಳಲ್ಲಿ ಚಿಕ್ಕಂದಿನಿಂದಲೇ ವೈಚಾರಿಕ ಮನೋಭಾವವನ್ನು ಬಿತ್ತಿದರೆ ಮೂಢನಂಬಿಕೆಯ ಕುರಿತಾಗಿ ಕಾನೂನು ತರುವ ಅಗತ್ಯವೇ ಬೀಳುವುದಿಲ್ಲ ಎಂದರು. ಹೆಗ್ಗಡಹಳ್ಳಿಯ ನಾಟಕ ಶಿಕ್ಷಕರ ಬಗ್ಗೆ ಪತ್ರಿಕೆಯಲ್ಲಿ ಬಂದಿರುವ ವರದಿಯನ್ನು ನೆನಪು ಮಾಡಿಕೊಳ್ಳುತ್ತಾ ಮಾತಿಗೆ ತೊಡಗಿದ ಸಿದ್ಧರಾಜು ಅವರು ಈ ಜಗತ್ತಿನ ಮೊದಲ ವೈಚಾರಿಕ ನಾಟಕದಿಂದ ಹಿಡಿದು ವಿಜ್ಞಾನ ನಮಗೆ ಹೇಗೆ ಅವಶ್ಯಕ, ನಾವ್ಯಾಕೆ ವೈಚಾರಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು.
ಶ್ರೀಮತಿ ಜೋಲಾ ಜಬಿನ್ ಅವರು ಮಾತನಾಡುತ್ತಾ ಭಾಗವಹಿಸುವುದು ಶ್ರೇಷ್ಠ, ಬಹುಮಾನ ಪಡೆಯುವುದೂ ಶ್ರೇಷ್ಠ. ಆದರೆ ಮಕ್ಕಳೇ ನೀವೆಲ್ಲರೂ ಗೆದ್ದಿರುವವರು ನಿಮಗೆಲ್ಲಾ ಶುಭವಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಯಟ್ ಪ್ರಾಂಶುಪಾಲರಾದ ಶ್ರೀ ಬಿ. ಕೆ. ಬಸವರಾಜು ಮಾತನಾಡಿ : ತರಗತಿಯಲ್ಲಿ ನಾಟಕಗಳಾಗಬೇಕು. ಶಿಕ್ಷಕರು ತರಬೇತಿಯ ಸಮಯದಲ್ಲಿ ರಂಗಕಲೆಯ ಮೂಲಕ ಪಾಠ ಮಾಡುವುದನ್ನು ಕಲಿಯುತ್ತಾರೆ ಆದರೆ ಶಿಕ್ಷಕರಾದ ಮೇಲೆ ಬರಿಯ ಪಾಠವನ್ನಷ್ಟೇ ಮಾಡುತ್ತಾರೆ. ಶಾಲೆಗಳು ಸಾಂಸ್ಕೃತಿಕ ಕೇಂದ್ರಗಳಾಗಬೇಕು. ಸಮಾಜಕ್ಕೆ ಪ್ರೇರಣೆಯನ್ನು ನೀಡಬಲ್ಲಂತ ತಿಳುವಳಿಕೆಯ ತಾಣಗಳಾಗಬೇಕು ಎಂದರು. ನಮ್ಮ ಶಾಲೆಯ "ಅಳ್ಳೀಮರ"ವನ್ನು ಸಭೆಗೆ ತೋರಿಸಿ ಪ್ರತಿಯೊಂದು ಶಾಲೆಯೂ ಮಕ್ಕಳ ಮನೋವಿಕಾಸವನ್ನು ಮಾಡಬಲ್ಲಂತ ಇಂತಹ ಪತ್ರಿಕೆಗಳನ್ನು ತರುವಂತಾಗಲಿ. ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ "ಅಳ್ಳೀಮರ" ಪತ್ರಿಕೆ ಬಹಳ ಒಳ್ಳೆಯ ಕೆಲಸ ಎಂದರು.
ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಮತ್ತು ರಾಮನಗರ ಜಿಲ್ಲೆಯಿಂದ ಆಯ್ಕೆಗೊಂಡಿರುವಂತಹ ಐದು ಪ್ರೌಢ ಶಾಲೆಗಳ ನಾಟಕ ತಂಡಗಳು ಸ್ಪರ್ದೆಯಲ್ಲಿ ಭಾಗವಹಸಿದ್ದವು.
ಪ್ರಥಮ ಬಹುಮಾನ : ಸ|| ಪ್ರೌ|| ಶಾಲೆ ಗುಂಬಳ್ಳಿ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಗುಂಬಳ್ಳಿ ಮಕ್ಕಳು ಶಾಲೆಯ ನಾಟಕ ಶಿಕ್ಷಕ ಮಧುಕರ ಮಳವಳ್ಳಿ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ನಾಟಕ "ನೀರಿಗಾಗಿ ಸಹಕಾರ" ನಾಟಕ ಪ್ರಥಮ ಪ್ರಶಸ್ತಿ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ನಾಟಕದ ನಿರ್ದೇಶನಕ್ಕಾಗಿ ಮಧುಕರ ಮಳವಳ್ಳಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದುಕೊಂಡರು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಹೆಗ್ಗಡಹಳ್ಳಿಯ ಮಕ್ಕಳು ಪ್ರಸ್ತುತಪಡಿಸಿದ ನಾಟಕ "ಪ್ಲಾಸ್ಟಿಕ್ ಭೂತ" ದ್ವಿತೀಯ ಬಹುಮಾನ ಪಡೆಯಿತು. ಶಾಲೆಯ ರೋಹಿತ್ ಕುಮಾರ್ ಅತ್ಯುತ್ತಮ ನಟ ಮತ್ತು ಶಾಲೆಯ ನಾಟಕ ಮೇಸ್ಟ್ರು ಸಂತೋಷ ಗುಡ್ಡಿಯಂಗಡಿ ಅತ್ಯುತ್ತಮ ನಾಟಕ ರಚನೆ ಬಹುಮಾನ ಪಡೆದುಕೊಂಡರು.
ದ್ವಿತೀಯ ಬಹುಮಾನ : ಸ|| ಪ್ರೌ|| ಶಾಲೆ ಹೆಗ್ಗಡಹಳ್ಳಿ
ರೋಹಿತ್ ಕುಮಾರ್ ಎಚ್. ಎಂ. : ಅತ್ಯುತ್ತಮ ನಟ
ಮಂಡ್ಯ ಜಿಲ್ಲೆ ಮಾಂಡವ್ಯ ಇಂಗ್ಲಿಶ್ ಮಾಧ್ಯಮ ಶಾಲೆ ನೆಹರೂ ನಗರ ಮಂಡ್ಯ ಇಲ್ಲಿನ ಮಕ್ಕಳು "ಪವಾಡ" ನಾಟಕ ಪ್ರಸ್ತುತಪಡಿಸಿ ಮೂರನೇ ಬಹುಮಾನ ಪಡೆದುಕೊಂಡರು. ಶಾಲೆಯ ಶಿಕ್ಷಕಿ ಸ್ಮಿತಾ ನಾಟಕವನ್ನು ರಚಿಸಿದ್ದರು.
ಕೊಡಗು ಜಿಲ್ಲೆಯ ಕುಶಾಲನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಚರಿತ ತನ್ನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಳು
ಕುಮಾರಿ ಚರಿತ ಕುಶಾಲನಗರ : ಅತ್ಯುತ್ತಮ ನಟಿ
ನಮ್ಮ ಶಾಲೆಗೊಂದು ಗೌರವ....
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮೈಸೂರು ಇವರು ಆಯೋಜಿಸಿದ್ದ ವಿಭಾಗಮಟ್ಟದ ನಾಟಕ ಸ್ಪರ್ಧೆಯಲ್ಲಿ ನೀಡಿದ ಪ್ರಶಸ್ತಿ ಪತ್ರಕ್ಕೆ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳ ನಾಟಕ ಪ್ಲಾಸ್ಟಿಕ್ ಭೂತ ನಾಟಕದ ಫೋಟೋಗಳನ್ನು ಮುದ್ರಿಸಿ ನಮ್ಮ ಶಾಲೆಗೊಂದು ವಿಶೇಷವಾದ ಗೌರವವನ್ನು ನೀಡಿದೆ. ಎಲ್ಲಾ ಜಿಲ್ಲೆಯ ಮಕ್ಕಳು ತಮ್ಮೊಡನೆ ಮನೆಗೊಯ್ದ ಪ್ರಶಸ್ತಿಯೊಂದಿಗೆ ನಮ್ಮ ಮಕ್ಕಳ ನೆನಪುಗಳನ್ನು ತೆಗೆದುಕೊಂಡು ಹೋಗುವಂತೆ ಮಾಡಿದ ಡಯಟ್ ಮೈಸೂರು ಇದರ ಪ್ರಾಂಶುಪಾಲರಾದ ಶ್ರೀ ಬಿ.ಕೆ.ಬಸವರಾಜು ಸರ್, ಮಂಜುಳ ಮೇಡಂ ಹಾಗೂ ಇಡೀ ಕಾರ್ಯಕ್ರಮ ಆಯೋಜನೆಯಲ್ಲಿ ತೊಡಗಿಸಿಕೊಂಡು ಉತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟ ಪುಷ್ಪಲತಾ ಮೇಡಂ ಹಾಗೂ ಮಮತ ಮೇಡಂ ಅವರಿಗೆ ನಾನು ಮತ್ತು ನಮ್ಮ ಶಾಲೆಯ ಕಲಾವಿದ ವಿದ್ಯಾರ್ಥಿಗಳು ಋಣಿಯಾಗಿದ್ದೇವೆ.
-ಸಂತೋಷ ಗುಡ್ಡಿಯಂಗಡಿ
ರೋಹಿತ್ ಕುಮಾರ್ ಎಚ್. ಎಂ., ಅಮೃತ ಎಚ್. ಎಸ್., ಆಶಾ ಎಚ್. ಎಚ್., ಸಂಜನಾ ಎಚ್. ಆರ್., ಮಮತ ಎಚ್. ಎನ್., ಸಂದೇಶ ಎಚ್. ಎಂ., ರಾಕೇಶ ವಿ., ಮಹದೇವ ಸ್ವಾಮಿ ಎಚ್. ಎನ್., ಮನುಕುಮಾರ್
No comments:
Post a Comment