Thursday 31 October 2013

ಹಚ್ಚ ಹಸಿರಿನ ಶಾಲೆ ನಮ್ಮದು, ಹೆಸರು ಹೆಗ್ಗಡಹಳ್ಳಿ

ಸರ್ಕಾರಿ ಪ್ರೌಢ ಶಾಲೆ ಹೆಗ್ಗಡಹಳ್ಳಿ. ನಂಜನಗೂಡು ತಾ|| ಮಯ್ಸೂರು ಜಿ|| 571314











ಝಣ ಝಣ ಚುನಾವಣೆ

ಮಯ್ಸೂರು ಜಿಲ್ಲೆಗೆ ಪ್ರಥಮ ಸ್ಥಾನಿಯಾದ ನಮ್ಮ ಶಾಲೆಯ ಹೆಣ್ಣು ಮಕ್ಕಳ ನಾಟಕ

ಭಾರತ ಚುನಾವಣಾ ಆಯೋಗ ಏರ್ಪಡಿಸಿದ್ದ ಜಿಲ್ಲಾಮಟ್ಟದ ಹೆಣ್ಣುಮಕ್ಕಳ ನಾಟಕ ಸ್ಫರ್ಧೆಯಲ್ಲಿ ನಮ್ಮ ಶಾಲೆಗೆ ಪ್ರಥಮ ಸ್ಥಾನ. ನಾಟಕ ರಚನೆ,  ನಿರ್ದೇಶನ : ಸಂತೋಷ ಗುಡ್ಡಿಯಂಗಡಿ




 ಜಿಲ್ಲಾಧಿಕಾರಿಗಳಿಂದ ಪ್ರಥಮ ಬಹುಮಾನ ಸ್ವೀಕರಿಸುತ್ತಿರುವ ನಮ್ಮ ವಿದ್ಯಾರ್ಥಿನಿಯರು

 ಹಿರಿಯ ಸಾಹಿತಿಗಳಾದ ಶ್ರೀ ಕೋ. ಚನ್ನಬಸಪ್ಪ ಹಾಗೂ ಅರವಿಂದ ಮಾಲಗತ್ತಿ, ಧರಣೀದೇವಿ ಮಾಲಗತ್ತಿಯವರೊಂದಿಗೆ

 ನಾಟಕ ತಂಡ : ಸಂಜನಾ ಹೆಚ್. ಆರ್., ಅಮೃತಾ ಹೆಚ್. ಎಸ್., ನೇತ್ರಾವತಿ ಹೆಚ್. ಸಿ., ಕುಸುಮಾ ಹೆಚ್. ಜಿ., ಮಮತಾ ಹೆಚ್.ಎನ್., ಮಾಲತಿ ಹೆಚ್. ಎನ್., ಆಶಾ ಹೆಚ್. ಹೆಚ್., ಮಾಲತಿ ಹೆಚ್. ಎಂ.
ಮಯ್ಸೂರು ರಂಗಾಯಣದ ಮುಂದಿನ ಕಿಂದರಿಜೋಗಿ ಪ್ರತಿಮೆಯ ಮುಂದೆ ನಮ್ಮ ಮಕ್ಕಳು

Tuesday 29 October 2013

Friday 25 October 2013

ಅಳ್ಳೀಮರದ ಮೂರನೇ ಸಂಚಿಕೆ





ಬಾಲ್ಯದ ಬಣ್ಣದ ಮೇಳ 2013

ದಿನಾಂಕ 6,7,8ಮತ್ತು9 ಅಕ್ಟೋಬರ್ 2013

ಸ್ಥಳ: ನಮ್ಮ ಶಾಲೆಯ ಆವರಣ

ಮಕ್ಕಳಿಗಾಗಿ ಮೇಳಗಳು ನಡೆಯುತ್ತವೆ ಎಂದರೆ ಅದು ಬಹುತೇಕ ತರಗತಿಯ ಮುಂದುವರಿದ ಭಾಗವೇ ಆಗಿರುತ್ತದೆ. ಅಲ್ಲಿ ಯಾರೋ ಒಂದಷ್ಟು ಜನ ಕಲಿತವರಿರುತ್ತಾರೆ, ಕಲಿಯಲು ಬಂದ ಮಕ್ಕಳಿರುತ್ತಾರೆ. ಮೇಳಗಳು ಮಕ್ಕಳನ್ನು ರಜಾ ಸಮಯದಲ್ಲಿ ಎಂಗೇಜ್ ಮಾಡುವ ಮತ್ತೊಂದು ತರಗತಿಯೆ? ಮಕ್ಕಳು ಮಕ್ಕಳಂತೆ ಇರುವುದು ಅವರದೇ ಆದ ಸಮಯದಲ್ಲಿ ಮಾತ್ರ. ಆ ಸಮಯ ಶಾಲಾ ಆರಂಭಕ್ಕೆ ಮುನ್ನ ಅಥವಾ ಮೇಳಗಳ ಆರಂಭಕ್ಕೆ ಮೊದಲು ಮತ್ತು ನಂತರ. ಅವರ ಸಮಯದಲ್ಲಿ ಕ್ರಿಯಾಶೀಲವಾಗಿರುವ ಮಕ್ಕಳು ಮೇಳ ಅಥವಾ ಶಾಲೆಯ ಚೌಕ್ಕಟ್ಟು ಬಂದಾಕ್ಷಣ ವಿದ್ಯಾರ್ಥಿಗಳಾಗುತ್ತಾರೆ. ಎಲ್ಲಾ ರೀತಿಯ ಕಲಿಕೆಯಲ್ಲಿಯೂ ಮಕ್ಕಳು ತಮ್ಮ ಮಕ್ಕಳತನವನ್ನು ಕಳೆದುಕೊಳ್ಳಬಾರದು. ಆದರೆ ಮಕ್ಕಳನ್ನು ಹಾಗೆ ಎಂಗೇಜ್ ಮಾಡುವ ಹಲವಾರು ಪ್ರಯತ್ನಗಳು ನಡೆಯುತ್ತಲೆ ಇದೆ. ಪೂರ್ಣ ಯಶಸ್ಸು ಕಾಣದಿದ್ದರೂ ಪ್ರಯತ್ನಗಳಂತೂ ನಡೆಯುತ್ತಲೆ ಇವೆ. ಆದರೆ ಇಂದು ಮಕ್ಕಳ ಮೇಳಗಳು ದಂಧೆಯಾಗಿಬಿಟ್ಟಿರುವುದರಿಂದ ಮಕ್ಕಳು ರಜಾ ದಿನಗಳಲ್ಲಿ ಮತ್ತೊಂದು ಶಾಲೆಯನ್ನು ಕಲಿಯಬೇಕಾಗಿದೆ! ತಂದೆ-ತಾಯಿಯರಿಗೆ ಮಕ್ಕಳ ರಜೆಗಳು ಹೊರೆಗಳಾಗಿ ಪರಿಣಮಿಸಿರುವುದೂ ಮಕ್ಕಳ ಹೊಸ ಶಿಕ್ಷೆಗೆ ಕಾರಣವಾಗಿದೆ; ಬಹುತೇಕ ಇದು ನಗರ ಪ್ರದೇಶಗಳಲ್ಲಿಯೇ ಅಧಿಕ. ಹಳ್ಳಿಗಳಲ್ಲಿ ಹಾಗಿಲ್ಲ. ರಜೆಯೆಂದರೆ ಮಕ್ಕಳಿರುವುದು ಮಣ್ಣೋ, ನೀರೋ, ಕಾಡೋ ಹೀಗೆ ಪ್ರಕೃತಿಯ ಮಡಿಲಲ್ಲೆ. ಅವರ ರಜಾ ಮೇಳ ಬಹಳ ಸುಂದರವಾಗಿಯೇ ಇರುತ್ತದೆ.


ಮೇಳದ ಆರಂಭಕ್ಕೆ ಮೊದಲು

ನಮ್ಮ ಶಾಲೆಯಲ್ಲಿ ನಾಲ್ಕು ದಿನಗಳ ಬಾಲ್ಯದ ಬಣ್ಣದ ಮೇಳ ನಡೆಸಿದೆವು. ರಜೆಯಲ್ಲೂ ಶಾಲೆಗೆ ಮಕ್ಕಳು ಬರಲಾರರು ಎಂಬ ಭಯದಲ್ಲೇ ಆರಂಭಿಸಿದೆ. ಅಳ್ಳೀಮರದ ಕೆಳ್ಗ ಮಾಸ್ಟ್ರು ಅದೇನ್ ಮಾಡ್ದಾರೂ ನೋಡ್ಕಂಬಾರವು ಬನ್ರೂಡಾ ಎಂದುಕೊಂಡು ಬಂದೇಬಿಟ್ಟರು. ಅವರಿಗೆಲ್ಲ ಇದು ಮೊದಲ ಮೇಳ. ಕುತೂಹಲ ಇದ್ದೇ ಇತ್ತು. ಬಣ್ಣದ ಜೊತೆ ಆರಂಭಗೊಂಡ ಮೇಳದಲ್ಲಿ ಗೆಳೆಯ ಸೂರ್ಯಕಾಂತ ನಂದೂರ್ ನಮ್ಮ ಸುತ್ತಲಿರುವ ಬಣ್ಣಗಳು ಮತ್ತು ರೇಖೆಗಳ ತೋರಿಸಿಕೊಟ್ಟು ನಂತರ ಮಕ್ಕಳ ಮುಂದೆ ಬಣ್ಣ ಮತ್ತು ಹಾಳೆಗಳನ್ನು ಇಟ್ಟೆವು. ಕೆಲವರು ತಮಗನ್ನಿಸಿದ್ದನ್ನು ಬರೆದರು. ಅಲ್ಲಿ ಅದೇ ಮರ ಗುಡ್ಡ ನೀರು ಇದ್ದವು. ಹೊಸದಾಗಿ ಕಲಿತದ್ದೇನೂ ಇಲ್ಲ; ತಮ್ಮೊಳಗಿರುವುದಕ್ಕೆ ಬಣ್ಣ ತುಂಬಿದರು ಅಷ್ಟೆ. ನಾನು ಮಕ್ಕಳಿಗೆ ಅದನ್ನೆ ಹೇಳಿದ್ದೆ ನಿಮಗೆ ನಾವ್ಯಾರೂ ಏನನ್ನೂ ಕಲಿಸುವುದಿಲ್ಲ. ಒಂದಷ್ಟು ಹಾದಿಗಳ ಪರಿಚಯ ಮಾಡುತ್ತೇವೆ ಎಂದು.


ಈ ಹೂವಲ್ಲಿ ರೇಖೆಯೂ ಇದೆ ಬಣ್ಣವೂ ಇದೆ ಅಲ್ವಾ ಸಾ?

ಎರಡನೇ ದಿನ ಮನು ಮಯ್ಸೂರು ಬಂದಿದ್ದರು. ಪರಿಸರದ ಕುರಿತು ಮಕ್ಕಳಿಗೆ ಏನು ಬೇಕು ಕೇಳಿದರು. ಸಿನಿಮಾ ಅಂದರು ಮಕ್ಕಳು. ಸಿನಿಮಾ ತೋರಿಸಿದರು. ಹಾವುಗಳು, ಹಕ್ಕಿಗಳು, ಪ್ರಾಣಿಗಳು, ಮನುಷ್ಯ ಹೀಗೆ ಅವರ ಮನೆಯ ಟೀವಿಯಲ್ಲಿ ಬಾರದೆ ಇರುವ ಬಂದರೂ ಇವರು ಕಾಣದೇ ಇರುವ ಸಿನಿಮಾಗಳನ್ನು ನೋಡಿದರು. ಅದರಲ್ಲೊಂದು ವಿಶಿಷ್ಟ ಸಿನಿಮಾ "ಸ್ಪಿರಿಟ್".  ಕುದುರೆಯೊಂದರ ಜೀವನ ವೃತ್ತಾಂತದಂತಿದ್ದ ಆ ಸಿನಿಮಾ ಅದಮ್ಯ ಜೀವನೋತ್ಸಾಹದ ಪ್ರತೀಕದಂತೆಯೂ ಇತ್ತು. ಯಾರ ಕಟ್ಟುಪಾಡಿಗೂ ಒಳಗಾಗದೆ ಸ್ವಾಭಿಮಾನದಿಂದ ಬದುಕವವರಿಗೆ ತೊಂದರೆಗಳು ನೂರಾರು ಎದುರಾದರೂ ಬದುಕು ಮಾತ್ರ ಸುಂದರವಾಗಿರುತ್ತದೆ ಎಂಬುದನ್ನು ಆ ಸಿನಿಮಾ ಧ್ವನಿಸುತ್ತಿತ್ತು. ನಮ್ಮ ಮಕ್ಕಳು ಅತ್ಯಂತ ಕುಷಿಯಿಂದ ಆ ಸಿನಿಮಾವನ್ನು ಸ್ವೀಕರಿಸಿದ್ದು ನನಗೂ ಮನು ಅವರಿಗೂ ಸೋಜಿಗವೆನಿಸಿತ್ತು. ಮನು ಅವರೂ ಕೂಡ ನಮ್ಮ ಶಾಲೆಯ ಆವರಣವನ್ನು ಕಂಡು ಬೆರಗಾಗಿ ಸುಂದರವಾದ ಲೇಖನವನ್ನೂ ಕೂಡ ಬರೆದಿದ್ದರು.


ಸಿನಿಮಾ ನೋಡುವ ಆತುರ

ಮೂರನೇ ದಿವಸ ಕಾಗದ ಕಲೆಯ ಮಾಂತ್ರಿಕ ಎಸ್. ಎಫ್. ಹುಸೇನಿ ಅವರು ಬಂದಿದ್ದರು. ಮಕ್ಕಳಿಗೆ ತಮ್ಮ ಎದುರಿಗಿರುವವರು ಶಿಕ್ಷಕರಾಗುವುದು ಯಾವತ್ತೂ ಇಷ್ಟವಾಗುವುದಿಲ್ಲ. ಅದನ್ನು ಅರಿತವರೋ ಎಂಬಂತೆ ಹುಸೇನಿ ಅವರು ಬಾಲ್ಯದ ಒಡನಾಡಿಯಂತೆ ಮಕ್ಕಳೊಂದಿಗೆ ಬೆರೆತರು. ತಮ್ಮ ಕೈಚಳಕವ ತೋರಿಸಿ ಇದೊಂದು ಮಹಾ ವಿದ್ಯೆಯೇನಲ್ಲ ಮನಸ್ಸು ಮಾಡಿದರೆ ನಿಮ್ಮ ಕೈ ಕೂಡ ಇದರಲ್ಲಿ ಪಳಗುತ್ತೆ. ಎಂದಿದ್ದೆ ಮಕ್ಕಳು ಹುಸೇನಿ ಅವರೇ ಬೆರಗಾಗುವಂತೆ ಕಾಗದವನ್ನು ಕತ್ತರಿಸಿದರು. ಯಾವುದನ್ನೂ ತಪ್ಪು ಎಂದು ಹೇಳದ ಹುಸೇನಿ ಮೇಸ್ಟ್ರ ಗುಣ ಮಕ್ಕಳಿಗೆ ಅದೆಷ್ಟು ಇಷ್ಟವಾಯಿತ್ತೆಂದರೆ ಅವರಂತೆ ಕಾಗದಕ್ಕೆ ರೂಪ ಕೊಡಲು ಹವಣಿಸಿದರು. ಒಂದು ಹಂತದಲ್ಲಿ ನಮ್ಮಲ್ಲಿನ ಕಾಗದದ ದಾಸ್ತಾನೇ ಮುಗಿದು ಹೋಗಿ ಮತ್ತೆ ನಂಜನಗೂಡಿನಿಂದ ತರುವಂತಾಯಿತು. ನಮ್ಮ ಮಕ್ಕಳಿಗೆ ಮೇಸ್ಟ್ರೆಂದರೆ ಹುಸೇನಿ ಅವರ ತರವಿರಬೇಕು ಅನ್ನಿಸಿದರೆ ತಪ್ಪಿಲ್ಲ. ಮಕ್ಕಳಿಗೆ ಯಾರಾದರೂ ನೀನು ಮಾಡಿದ್ದು ತಪ್ಪು ಎಂದರೆ ಅವರೊಳಗಿನ ಕೀಳರಿಮೆ ಜಾಗೃತಗೊಂಡು ಮತ್ತೆ ಅವರು ಯಾವ ಕೆಲಸದಲ್ಲಿಯೂ ತೊಡಗಿಕೊಳ್ಳುವುದಿಲ್ಲ ಅಲ್ಲವೆ?


ಕಾಗದ ಕತ್ತರಿಸ್ತೀನಿ ಇರಿ

ನಾಲ್ಕನೆಯ ಹಾಗೂ ಕೊನೆಯ ದಿನ ಇಬ್ಬರು ಅತಿಥಿಗಳು ಬಂದಿದ್ದು. ನಾಡಿನ ಪ್ರಸಿದ್ಧ ಮಕ್ಕಳ ಸಾಹಿತಿ ಹಾಗೂ ಮಯ್ಸೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕರಾದ ಆನಂದ ವಿ. ಪಾಟೀಲರು ಮತ್ತು ನಾಡಿನ ಪ್ರಸಿದ್ಧ ನಟ ರಂಗಕರ್ಮಿ ಮಂಡ್ಯ ರಮೇಶ್. ಮಕ್ಕಳು ಎಂದರೆ ಕುಷಿಪಡುವ ಮಗು ಮನಸ್ಸಿನ ಪಾಟೀಲ ಸರ್ ನಮ್ಮ ಜೊತೆ ಇಡೀ ದಿನ ಕಳೆದದ್ದೇ ನಮ್ಮ ಹೆಮ್ಮೆ. ನಮ್ಮ ಮಕ್ಕಳಿಗೆ ಹೊಸ ಹೊಸ ಕತೆ ಹೇಳಿದರು. ಕವಿತೆ ಹೇಗೆ ಓದುವುದು ಎಂಬುದನ್ನು ತಿಳಿಸಿದರು. ಮಕ್ಕಲಿಂದಲೇ ಕತೆ ಹೇಳಿಸಿ ಕೇಳಿ ಕುಷಿ ಪಟ್ಟರು. ಮಕ್ಕಳ ಜೊತೆಗೆ ಊಟಮಾಡಿ ಸಂಭ್ರಮಿಸಿದರು.


ನಮ್ಮ ಓದಿನ ಮನೆಯೊಳಗೆ ಪಾಟೀಲ ಸರ್

ಮಂಡ್ಯ ರಮೇಶ್ ಅವರು ನಮ್ಮ ಶಾಲೆಯ ಅಳ್ಳೀಮರದ ಸ್ನೇಹಿತರು. ಮಕ್ಕಳೇ ನಿಮ್ಮ ಈ ಪತ್ರಿಕೆ ರಾಜ್ಯದಲ್ಲೇ ಒಂದು ಅದ್ಭುತ ಕೆಲಸ. ಮುದೊಂದು ದಿನ ಇದು ಒಳ್ಳೆಯ ಫಲವನ್ನು ನೀಡುತ್ತದೆ ಎಂದರು. ಅವರ ಬುದ್ಧಿಮಾತು ಹರಟೆ, ನಗು, ಹಾವ ಭಾವ ಮಕ್ಕಳನ್ನು ಸಂಭ್ರಮದಲ್ಲಿ ತೇಲಿಸಿತು. ಮಕ್ಕಳ ಜೊತೆ ಹಾಲು ಕುಡಿದು ಮಾತಾಡಿ ನಗಾಡಿ ಮುಂದೆ ತಮ್ಮ ಮಕ್ಕಳ ನಾಟಕ ತಂಡದೊಂದಿಗೆ ನಿಮ್ಮ ಶಾಲೆಗೆ ಬರುವುದಾಗಿ ತಿಳಿಸಿದರು.


ಚನ್ನಾಗಿದೆ ಮಕ್ಕಳೆ ಕ್ಷೀರಭಾಗ್ಯ

ಹೀಗೆ ನಮ್ಮ ಮೇಳ ನಾಲ್ಕು ದಿನಗಳ ಕಾಲ ಸಂತೋಷದಿಂದ ಕಳೆಯಿತು. ಇಲ್ಲಿ ಯಾರಿಗೂ ಗದ್ದಲ ಮಾಡಬಾರದು ಸುಮ್ಮ ಸುಮ್ಮನೆ ಓಡಾಡಬಾರದು, ಮಧ್ಯಕ್ಕೆ ಹೊರಟುಬಿಡಬಾರದು ಎಂಬ ಯಾವ ಕಟ್ಟುಪಾಡು ಇರಲಿಲ್ಲ. ಕೆಲವರು ಬೆಳಿಗ್ಗೆ ಬಂದು ಹಾಲು ಕುಡಿದು ಹೋದರೆ ಕೆಲವರು ಮದ್ಯಾಹ್ನ ಊಟ ಮಾಡಿಕೊಂಡು ಹೋದರು. ಮೊದಲ ದಿನ ಬಂದವರು ತಮ್ಮೊಂದಿಗೆ ಹೊಸಬರನ್ನು ಕರೆತಂದರು. ಹಾಗೆ ನೋಡಿಕೊಂಡು ಹೋಗುವ ಎಂದು ಬಂದವರಿಗೆ ಸಂಜೆ ವಾಪಾಸ್ಸು ಹೋದರು. ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಬರಲು ಹೇಳಿದ್ದರೂ ಕಡೆಯಲ್ಲಿ ಸುತ್ತಮುತ್ತಲಿನ ಶಾಲೆ ಊರಿನ ಮಕ್ಕಳೂ ಬಂದಿದ್ದರು. ಒಂದನೇ ತರಗತಿಯಿಂದ ಪಿ.ಯು.ಸಿ.ವರೆಗಿನ ಮಕ್ಕಳೂ ಬಂದಿದ್ದರು. ನಾಲ್ಕೇ ದಿನಕ್ಕೆ ಮುಗಿಯಿತಲ್ಲ ಬೇಜಾರಿಗೆ ನಾಳೆ ಸುಮ್ಮನೆ ಬಂದು ಅಡ್ಡಾಡಿ ಹೋಗುವ ಸಾರ್ ಬನ್ನಿ ಎಂದು ಕರೆದರು. ನಮ್ಮ ಬಣ್ಣದ ಮೇಳ ಏನನ್ನೂ ಕಲಿಸದೆ ಒಂದಷ್ಟು ಹಾದಿಗಳಿದ್ದಾವೆ ಎಂದು ತೋರಿಸಿ ಮುಗಿಯಿತು. ಮುಗಿಯಿತು ಎಂದರೆ ಇದು ಮುಕ್ತಾಯವಲ್ಲ ವಿರಾಮ. ಮುಂದೆ ಇದ್ದೇ ಇದೆ.


 ಹುಸೇನಿ ಅವರ ಕಯ್ಯಲ್ಲಿ ಕಾಗದ ಗಂಡಭೇರುಂಡವಾದದ್ದು

ಮುಗೀತಾ ಸಾ ಮೇಳ?

ಮಕ್ಕಳು ಬಂದರಷ್ಟೇ ಮೇಳ

ಸಂತೋಷ ಗುಡ್ಡಿಯಂಗಡಿ

Thursday 24 October 2013

 ಬಣ್ಣದ ಮೇಳಕ್ಕೆ ತಯಾರಿ
 ಅಂಬುಜ ಮೇಡಂ ಅವರಿಂದ ಮೇಳಕ್ಕೆ ಚಾಲನೆ
 ಸೂರ್ಯಕಾಂತ ನಂದೂರ್ ಚಲ್ಲಿದ ಬಣ್ಣಕ್ಕೆ ರೂಪ ನೀಡುತ್ತಿರುವುದು
 ಹಿರಿಯ ಪತ್ರಕರ್ತರಾದ ಶ್ರೀಧರ ಭಟ್ಟರಿಂದ ಸಹಿ
 ರೇಖೆಗಳತ್ತ ಕುತೂಹಲದ ನೋಟ
 ಅವುಸಿಟ್ಟುಕೊಂಡು ಚಿತ್ರ ಬರೆವ ಪರಿ
 ಗುಡ್ಡಗಳಿಗೊಂದಿಷ್ಟು ಬಣ್ಣ
 ನಮಗೆ ಬಣ್ಣ ಕೊಡುತ್ತಿಲ್ಲ ಸಾರ್ ಅವನು
 ಸಹಿ ಮಾಡುವ ಗೆಳತಿಗೆ ಬೆಂಬಲ
ಮನು ಮಯ್ಸೂರು
ಮನು ಮಯ್ಸೂರು
 ಮನು ಮಯ್ಸೂರು
 ಪರಿಸರದಾಟಕ್ಕೊಂದು ವೃತ್ತ
 ನಮಗೂ ಗೊತ್ತು ಪರಿಸರದ ಬಗ್ಗೆ
 ಚೇತೋಹಾರಿ ಸಿನಿಮಾ SPIRIT
 ಹಕ್ಕಿಗಳ ಲೋಕ
 ಬಣ್ಣ ಮೆತ್ತಯಾದ ಮೇಲೆ ಬಣ್ಣದ ತಟ್ಟೆ
 ಕಾಗದ ಕಲೆಯ ಮಾಂತ್ರಿಕ ಎಸ್. ಎಫ್. ಹುಸೇನಿ
 ಹೇಗಿದೆ ಸಾರ್?
 ನೋಡಿ ನಮ್ಮ ಕೈಚಳಕ
 ಸುಪ್ರಸಿದ್ಧ ನಟ ಮಂಡ್ಯ ರಮೇಶ್
 ಅಪರೂಪದ ಭಂಗಿ
 ನಟನೆ ನಿಮ್ಮೊಳಗೂ ಇದೆ
 ನೋಡಿ ಅಲ್ಯಾರೋ ನಟನೆ ಮಾಡುವುದು
 ಸಾರ್ ನಮ್ಮ ಶಾಲೆಗೆ ಬಂದಿದ್ದು ಕುಷಿಯಾಗಿದೆ
 ಆನಂದ ಪಾಟೀಲರು ನಮ್ಮ ಅಳ್ಳೀಮರದ ಕೆಳಗೆ
 ಕತೆ ಹೇಳುವುದಕ್ಕೊಂದು ತಯಾರಿ
 ನಿಮಗೂ ಕತೆ ಬರುತ್ತಾ?
 ಆನಂದ ಪಾಟೀಲರೊಂದಿಗೆ ನಮ್ಮ ಮಕ್ಕಳು
 ಮಕ್ಕಳ ನಡುವೆ ಮಗುವಿನಂತ ಪಾಟೀಲರು
 ಥ್ಯಾಂಕ್ಯೂ
 ಥ್ಯಾಂಕ್ಯಾ ಥ್ಯಾಂಕ್ಯೂ
 ನಮ್ಮ ಶಾಲೆಯ ಕತೆಗಾರರು ಆನಂದ ಪಾಟೀಲರ ಜೊತೆಯಲಿ

 ಸತ್ಯಪ್ರಭದಲ್ಲಿ ನಮ್ಮ ಮೇಳದ ವರದಿ
ಮೇಳದ ಬಗ್ಗೆ ವಿಜಯಕರ್ನಾಟಕದಲ್ಲಿ ವರದಿ