Thursday 30 December 2021

ಅಗಣಿತ ಕುಶಿಯ ಗಣಿತ ಹಬ್ಬ


ಣಿತವನ್ನೂ ಹಬ್ಬವಾಗಿಸಬಹುದೆಂಬುವುದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ ನಂಜನಗೂಡಿನಲ್ಲಿ ನಡೆದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ. ನಂಜನಗೂಡು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ. ಎನ್. ರಾಜು ಅವರ ಕ್ರಿಯಾಶೀಲತೆಯಿಂದಾಗಿ ತಾಲೂಕಿನಲ್ಲಿ ಕಾರ್ಯನಿರ್ವಹಿಸಿತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರಿಗಾಗಿ ಅವರವರ ವಿಷಯಗಳ ಹಬ್ಬಗಳನ್ನು ಆಚರಿಸಿ ತಾಲೂಕಿನ ಶೈಕ್ಷಣಿಕ ಚಟುವಟಿಕೆಗಳಿಗೆ ಹೊಸ ಹುರುಪು ತಂದುಕೊಟ್ಟಿದೆ.

ಈಗಾಗಲೇ ತಾಲೂಕಿನ ಶಿಕ್ಷಕರಿಗಾಗಿ ವಿಜ್ಞಾನ ಹಬ್ಬ ಮತ್ತು ಕನ್ನಡಹಬ್ಬಗಳು ನಡೆದು ಅಭೂತಪೂರ್ವ ಯಶಸ್ಸು ಕಂಡಿವೆ.  ವಿಜ್ಞಾನ ಬೋಧನೆಯಲ್ಲಿ ಹೇಗೆಲ್ಲ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬಹುದೆಂಬುದನ್ನು ಶಿಕ್ಷಕರು ಮಾಡಿದ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ತೋರಿಸಿಕೊಟ್ಟಿದೆ. ಇನ್ನು ಕನ್ನಡ ಹಬ್ಬದಲ್ಲಿ ತಾಲೂಕಿನ ಕನ್ನಡ ಶಿಕ್ಷಕರ ಪ್ರತಿಭಾವಿಲಾಸಕ್ಕೊಂದು ವೇದಿಕೆ ರೂಪುಗೊಂಡಿತು. ಪ್ರತೀ ವಿಷಯಗಳ ಹಬ್ಬದಲ್ಲಿ ಆಯಾಯ ವಿಷಯದ ಉತ್ತಮ ಶಿಕ್ಷಕರನ್ನು ಗುರುತಿಸುವ ಗೌರವಿಸುವ ಸತ್ಸಂಪ್ರದಾಯ ಹಾಕಿಕೊಟ್ಟದ್ದು ಶ್ರೀ ರಾಜು ಸರ್ ಅವರು ಶಿಕ್ಷಕರ ಮೇಲಿಟ್ಟಿರುವ ನಂಬಿಕೆಯ ದ್ಯೋತಕಂತಿದೆ.

ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಗಣಿತ ಹಬ್ಬವನ್ನಾಗಿಸಿದ್ದು ಬಹುಶಃ ಶಿಕ್ಷಣಾಧಿಕಾರಿಯೊಬ್ಬರು ಹೇಗೆ ಧನಾತ್ಮಕವಾಗಿ ಶಿಕ್ಷಣದ ಬಗ್ಗೆ ಯೋಚಿಸಬಹುದೆಂಬುದಕ್ಕೆ ಸಾಕ್ಷಿ. ಗಣಿತ ಕ್ಷೇತ್ರದ ಮೇಧಾವಿ ಶ್ರೀನಿವಾಸನ್ ಅವರ ಜನುಮದಿನವನ್ನು, ಸಾಹಿತ್ಯ ಕ್ಷೇತ್ರದ ಮೇರು ವ್ಯಕ್ತಿತ್ವ ಮಹಾಕವಿ ಕುವೆಂಪು ಅವರ ಜನುಮದಿನದಂದು ಆಚರಿಸಿ ಎರಡು ಶ್ರೇಷ್ಠ ವ್ಯಕ್ತಿತ್ವಗಳಿಗೆ ಗೌರವ ಸಲ್ಲಿಸಿ, ತಾಲೂಕಿನ ಗಣಿತ ಶಿಕ್ಷಕರನ್ನು ಒಂದಿಡೀ ದಿವಸ ಹಬ್ಬದ ಸಂಭ್ರಮದಲ್ಲಿ ತೇಲಿಸಿತ್ತು. ಶಿಕ್ಷಕರಿಗಾಗಿ ಗಣಿತ ರಸಪ್ರಶ್ನೆ, ಗಣಿತ ವಸ್ತು ಪ್ರದರ್ಶನ, ಗಣಿತ ನಾಟಕ, ಗಣಿತದ ಬಗ್ಗೆ ವಿಚಾರ ಮಂಥನವು ಗಣಿತವೆಂದರೆ ಕಬ್ಬಿಣದ ಕಡಲೆ ಎಂಬ ಎಂಬ ಮಾತನ್ನು ಸುಳ್ಳಾಗಿಸುವಂತಿತ್ತು.

 

ಪೈಥಾಗೊರಸ್ ನಾಟಕ



ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ರಂಗ ಶಿಕ್ಷಕ ಸಂತೋಷ ಗುಡ್ಡಿಯಂಗಡಿ ನಿರ್ದೇಶನದಲ್ಲಿ ಪೈಥಾಗೊರಸ್ ಪ್ರಮೇಯವನ್ನು ರಂಗಕ್ಕೆ ಅಳವಡಿಸಿ ಗಣಿತ ಹಬ್ಬದಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದರು. ಪ್ರಮೇಯವೊಂದರ ಎಳೆ ಎತ್ತಿಕೊಂಡು… ಮಗುವೊಂದು ಶಾಲೆ ಬಿಡುವುದಕ್ಕೆ ಕ್ಲಿಷ್ಠಕರವಾದ ಗಣಿತವೂ ಕಾರಣವಾಗಬಹುದು ಮತ್ತು ಅದೇ ಗಣಿತ ಸರಳವಾದಾಗ ಮಗು ಮತ್ತೆ ಶಾಲೆಯತ್ತ ಮುಖಮಾಡುತ್ತದೆ. ನಂಜನಗೂಡಿನ ಗ್ರಾಮ್ಯಭಾಶೆಯಲ್ಲಿ ಕಟ್ಟಿದ ಪೈಥಾಗೊರಸ್ ನಾಟಕ ಹಾಡು ಆಟ, ಕುಣಿತಗಳ ಮೂಲಕ ಪ್ರಮೇಯವನ್ನು ತಿಳಿಸಿಕೊಡುತ್ತಲೆ ಸರ್ಕಾರಿ ಶಾಲೆಯ ಮಹತ್ವವನ್ನೂ ಸಾರುತ್ತಿತ್ತು. ತಾಲೂಕಿನ ಎಲ್ಲಾ ಗಣಿತ ಶಿಕ್ಷಕರು ಈ ನಾಟಕ ಪ್ರದರ್ಶನವನ್ನು ಮೆಚ್ಚಿಕೊಂಡು ಮಕ್ಕಳನ್ನು ಅಭಿನಂದಿಸಿದರು. ರಂಗಕಲೆಯ ತಂತ್ರಗಳನ್ನು ಅಳವಡಿಸಿಕೊಂಡು ಗಣಿತವನ್ನು ಸರಳವಾಗಿ ಕಲಿಸಿಕೊಡಬಹುದು ಎಂಬುದು ಈ ರಂಗಪ್ರಯೋಗದಿಂದ ಸಾಬೀತಾಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಗಳು ಮಕ್ಕಳ ತಂಡವನ್ನು ಅಭಿನಂದಿಸಿದರು.

ಗಣಿತ ರಸಪ್ರಶ್ನೆ

ತಾಲೂಕಿನ ಕ್ರಿಯಾಶೀಲ ಗಣಿತ ಶಿಕ್ಷಕರಾದ ಹೆಡತಲೆ ಪ್ರೌಢ ಶಾಲೆಯ ಹರ್ಷ ಎಸ್. ಮತ್ತು ಹುಲ್ಲಹಳ್ಳಿ ಪ್ರೌಢ ಶಾಲೆಯ ಸತೀಶ್ ಅವರ ನೇತೃತ್ವದಲ್ಲಿ ಶಿಕ್ಷಕರಿಗಾಗಿ ಗಣಿತ ರಸಪ್ರಶ್ನೆ ನಡೆಯಿತು. ಆರು ಸುತ್ತಗಳಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಗೋಪಾಲ್, ಚೇತನ್ ಮತ್ತು ವಿದ್ಯಾ ಅವರ ತಂಡ ಪ್ರಥಮ ಸ್ಥಾನಗಳಿಸಿದರು. ಮಲ್ಲಿಕಾರ್ಜುನ, ರುಕ್ಮಿಣಿ, ಮೂರ್ತಿ ಅವರ ತಂಡ, ದ್ವಿತೀಯ ಸ್ಥಾನ ಗಳಿಸಿದರು.

 

ಗಣಿತ ವಸ್ತುಪ್ರದರ್ಶನ

ಗಣಿತ ವಸ್ತುಪ್ರದರ್ಶನದಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬದನವಾಳು ಕ್ಲಸ್ಟರ್ ಪ್ರಥಮ, ದೇಬೂರು ಕ್ಲಸ್ಟರ್ ದ್ವಿತೀಯ ಸ್ಥಾನಗಳಿಸಿದವು. ಪ್ರೌಢಶಾಲಾ ವಿಭಾಗದಲ್ಲಿ ದೇಬೂರಿನ ಆದರ್ಶ ಶಾಲೆಯ ಕಿರಣ್ ಕುಮಾರ್ ಪ್ರಥಮ ಮತ್ತು ಬಾಲಕರ ಪ.ಪೂರ್ವ ಕಾಲೇಜಿನ ಪದ್ಮಶ್ರೀ ದ್ವಿತೀಯ ಬಹುಮಾನ ಗಳಿಸಿದರು.

 

ನಂಜನಗೂಡು ತಾಲೂಕಿನಲ್ಲಿ ಹೀಗೆ ಸತತವಾಗಿ ಶಿಕ್ಷಕರಿಗಾಗಿ ಆಯೋಜನೆಗೊಳ್ಳುತ್ತಿರುವ ವಿಷಯವಾರು ಹಬ್ಬಗಳು ಶಿಕ್ಷಕರಲ್ಲಿ ಬೋಧನೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹೊಸ ಚೈತನ್ಯ ನೀಡಿದೆ. ಅಲ್ಲದೆ ಗಣಿತ ವಿಷಯದಲ್ಲಿ ವಸ್ತುಪ್ರದರ್ಶನ, ನಾಟಕ, ರಸಪ್ರಶ್ನೆ ಕಾರ್ಯಕ್ರಮ ನಡೆದಿರುವುದು ತಾಲೂಕಿ ಇತಿಹಾಸದಲ್ಲೇ ಮೊದಲು ಎನ್ನಲಾಗಿದೆ. ಇನ್ನುಳಿದ ಮೂರು ವಿಷಯಗಳ ಶಿಕ್ಷಕರು ತಮ್ಮ ವಿಷಯಗಳ ಹಬ್ಬಕ್ಕೆ ಕಾತರದಿಂದ ಕಾಯುವಂತಾಗಿದೆ.

ಇಂತಹ ಶೈಕ್ಷಣಿಕ ಹಬ್ಬಗಳು ರಾಜ್ಯದಾದ್ಯಂತ ನಡೆಯುವಂತಾಗಬೇಕು. ಪ್ರತೀ ತಾಲೂಕುಗಳಲ್ಲಿ ಶಿಕ್ಷಕರನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವಂತೆ ಮಾಡುವ, ಆಯಾಯ ವಿಷಯ ಶಿಕ್ಷಕರುಗಳು ಒಂದೆಡೆ ಸೇರಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ, ಸಂಭ್ರಮಿಸುವ ಹಬ್ಬಗಳು ನಡೆಯುತ್ತಿದ್ದರೆ ಶಿಕ್ಷಕರು ತಮ್ಮನ್ನು ಒರೆಗೆ ಹಚ್ಚಿಕೊಳ್ಳುವ, ಹೊಸ ವಿಚಾರಧಾರೆಗೆ ಅಪ್ಡೇಟ್ ಆಗುವುದು ಸಾಧ್ಯವಾಗುತ್ತದೆ. ಇಂಥದ್ದೊಂದು ಶೈಕ್ಷಣಿಕ ಕ್ರಾಂತಿಗೆ ನಂಜನಗೂಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸಿ. ಎನ್. ರಾಜು ಅವರು ಮುನ್ನುಡಿಯನ್ನು ಬರೆದಿದ್ದಾರೆ. ಶಿಕ್ಷಣ ಇಲಾಖೆ ಈ ಶೈಕ್ಷಣಿಕ ಹಬ್ಬವನ್ನು ಪ್ರತೀ ತಾಲೂಕುಗಳಲ್ಲಿ ಆಚರಿಸುವಂತಾಗಬೇಕು.

 

ಗಣಿತ ಹಬ್ಬಕ್ಕೆ ಆಗಮಿಸಿದ ತಹಶೀಲ್ದಾರ್ ಎಂ. ಶಿವಮೂರ್ತಿ ಅವರು ಹಬ್ಬವನ್ನು ಮೆಚ್ಚಿಕೊಂಡಿರಲ್ಲದೆ ತಾಲೂಕಿನಲ್ಲಿ ಗುರುಭವನ ನಿರ್ಮಿಸಲು ಒಂದು ಎಕರೆ ಜಾಗ ನೀಡುವುದಕ್ಕೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು. ಗಣಿತ ಹಬ್ಬದಲ್ಲಿ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಧರ್ಮರತ್ನಾಕರ, ಜಿಲ್ಲಾ ಕಾರ್ಯದರ್ಶಿ ಮಹೇಶ್, ತಾಲೂಕು ಕಾರ್ಯದರ್ಶಿ ಸೋಮೇಶ್, ಉಪಾಧ್ಯಕ್ಷ ರಾಜುಸ್ವಾಮಿ, ಖಜಾಂಚಿ ಎಂ.ವಿ. ಗಿರೀಶ್, ಸಂಘಟನಾ ಕಾರ್ಯದರ್ಶಿ ಎಚ್. ಸುನಂದಾ ರವಿ ಇದ್ದರು.

ನಂಜನಗೂಡು ತಾಲೂಕಿನಲ್ಲಿ ಇದೇ ಮೊದಲಬಾರಿಗೆ ನಡೆದ ಗಣಿತ ಹಬ್ಬದ ಆಯೋಜನೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಕೈಜೋಡಿಸಿದವರು ಬಿಆರ್ಸಿ ಕೆ.ಜಿ. ಮಹೇಶ್, ಶಿಕ್ಷಣ ಸಂಯೋಜಕರಾದ ಎನ್. ಎಸ್. ರಮೇಶ, ಬಿಆರ್ಪಿ ಸಿ.ವಿ. ಶ್ರೀನಾಥ್ ಗಣಿತ ಶಿಕ್ಷಕರಾದ ಎಸ್. ಹರ್ಷ, ಸತೀಶ್, ಕಿರಣ್ ಮತ್ತು ನಂದೀಶ್ ಅವರು.

: ಸಂತೋಷ ಗುಡ್ಡಿಯಂಗಡಿ









 

Thursday 2 December 2021

ನಕ್ಷತ್ರಲೋಕಕ್ಕೊಂದು ಟ್ರಿಪ್ಪು

ನಕ್ಷತ್ರಲೋಕಕ್ಕೊಂದು ಟ್ರಿಪ್ಪು 

 (ದಿನಾಂಕ 14-11-2021ರ ಭಾನುವಾರ ಪ್ರಜಾವಾಣಿ ಪತ್ರಿಕೆಯ ಮಕ್ಕಳ ದಿನದ ವಿಶೇಷ ಪುರವಣೆಯಲ್ಲಿ ಪ್ರಕಟವಾದ ನಮ್ಮ ಶಾಲೆಯ ಮಕ್ಕಳು ಕಟ್ಟಿದ ಕಥೆ. ಈ ಕಥೆ ಮಕ್ಕಳು ಒಂದೊಂದು ಸಾಲು ಹೇಳುತ್ತಾ ರೂಪುಗೊಂಡ ಕಥೆ.) 

     ಒಂಜಿನ ಸ್ವಾಮಾರ ಹೆಗ್ಡಳ್ಳಿ ಇಸ್ಕೂಲ್ನ ಒಂಬತ್ನೇ ಬಿ ತರಗತಿಯ ಕ್ಲಾಸ್ ರೂಮು, ಡೆಸ್ಕು, ಬೆಂಚು, ಕಿಟ್ಕಿ, ಬಾಕ್ಲು, ಚಾಕ್ಪೀಸು, ಡಸ್ಟ್ ಬಿನ್, ಪೊರ್ಕೆ, ಡಸ್ಟರು ಎಲ್ಲಾವಿ ಟೂರ್ಗ ಹೋಗೋದು ಅಂದ್ಕ ಪ್ಲ್ಯಾನು ಮಾಡ್ತಾರ. ಆದ್ರ ಎಲ್ಲಿಗ ಹೋಗೋದು! ಅಂದ್ಕ ಎಲ್ರೂವಿ ಯೋಚಿಸ್ತಿರೋವಾಗ ಡೆಸ್ಟರು ‘ನಾವೆಲ್ಲ ನಕ್ಷತ್ರಲೋಕಕ್ಕ ಹೋಗೋಣ’ ಅಂತು. 

     ‘ನಾವ್ ಹೆಂಗ್ ಹೋಗೋದು’ ಅಂತ ಡೆಸ್ಕು ಕೇಳ್ತದ. ಆಗ ಡಸ್ಟ್ ಬಿನ್ನು’ನಾವೆಲ್ಲಾವಿ ಸೇರ್ಕಂಡು ಕಾಗಸ್ವಾಮಿ ನೆನಸ್ಗಂಡು ತಪಸ್ಸು’ ಮಾಡೋಣ ಅಂತು. ಅದ್ಕ ಎಲ್ಲಾರೂ ಒಪ್ಗಂಡು ತಪಸ್ಸು ಮಾಡ್ತಾರ. ಕಾಗಸ್ವಾಮಿ ತಪಸ್ಗ ಮೆಚ್ಕಂಡು ಬಂದು ‘ತನ್ನಿಂದ ಯಾನ್ ಆಗ್ಬೇಕು?’ ಅಂತ ಕೇಳ್ತಾನ. ಆಗ ಇವ್ರೆಲ್ಲಾವಿ ಸೇರ್ಕಂಡು “ ನಾವು ಟೂರ್ಗ ಹೋಗ್ತೀವಿ. ಹಾರ್ಕಂಡೋಗಾಕ ನಮ್ಗ ದೊಡ್ಡ ರೆಕ್ಕೆ ಕೊಟ್ಬುಬುಡಿ ಕಾಗಸ್ವಾಮಿ” ಅಂತ ಕೇಳ್ತಾರ. ‘ಹಂಗೆ ಆಗ್ಲಿ’ ಅಂತ ಕಾಗಸ್ವಾಮಿಯು ಆ ರೂಮ್ಗ ಎಲ್ಡು ದೊಡ್ಡ ರೆಕ್ಕೆ ಕೊಟ್ಟು ವೊಯ್ತನ. 

    ರೂಮು ದೊಡ್ಡ ರೆಕ್ಕಯ ಬೀಸ್ಗಂಡು ಮೇಲಕ್ಕ ಹಾರ್ಕಂಡು ಹೋಗ್ತಿರಬೇಕಾರ ಜೋರಾಗಿ ಮಳ ಬತ್ತದ. ಆ ಮಳ ಹೂದು ರೂಮು ಸೋರ್ತದ. ಆಗ ಬೆಂಚು ಡೆಸ್ಕು ತಾವು ತ್ಯಾವ ಆಯ್ತಿವಿ ಅಂದ್ಕಂಡು ಹೆದ್ರಕತವ. ಎಲ್ರಿಗೂ ಭಂಯ ಆಗಿ ಕಾಗಸ್ವಮಿನ ಕೂಗ್ತರ. ಕಾಗ ಸ್ವಾಮಿ ಬಂದು ಯಾನಾಯ್ತು ಅಂದ್ರ, ಇವ್ರೆಲ್ಲಾವಿ “ ಮಳ ಹೂದು ರೂಮು ಸೋರ್ತದ. ನಮ್ಗ ಇನ್ನೂ ಬಲಿಷ್ಠವಾದ ರೆಕ್ಕೆ ಕೊಡು, ಬೇಗ ಬೇಗ ಹಾರಿ ಮಳೆಯಿಂದ ತಪ್ಪಿಸ್ಕತೀವಿ” ಅಂದು ಬೇಡ್ತಾರ. 

     “ಈಗ ಕೊಟ್ಟಿರೋ ರೆಕ್ಕೆ ಅಲ್ದೆಯಾ ಬ್ಯಾರೆದು ಕೊಡ್ಬೇಕಾ ನಿಮ್ಗ” ಅಂತ ಕೋಪ ಮಾಡ್ಕಂಡು ಇರೋ ರೆಕ್ಕೆನೂ ಕಿತ್ಗಂಡೋಯ್ತನ. ಆವಾಗ ಎಲ್ರೂವಿ ಕಿಟ್ಕಿಯ ಕಳ್ದು ಮೊಳ ಹೊಡ್ದು ರೆಕ್ಕೆ ಮಾಡ್ತಾರ. ಕಿಟ್ಗಿಗ ‘ಜೋರಾಗಿ ರೆಕೆಯ ಬೀಸು, ಇಲ್ಲಾಂದ್ರ ನಾವೆಲ್ಲಾವಿ ಬಿದ್ದೋಯ್ತಿವಿ’ ಅಂದಿದ್ದೆ ಕಿಟ್ಕಿ ರೆಕ್ಕೆಯಾಗಿ ಬೀಸ್ತದ. ಮತ್ತೂ ಮೇಲಕ್ಕ ಹಾರ್ತರ. 

     ಮುಂದಕ್ಕ ವೋಯ್ತಾ ವೋಯ್ತ ಕಿಟ್ಕಿಗ ಸುಸ್ತಾಗತ್ತ. ಆಗ ಗಾಳಿ ಇವ್ರು ಹಾರೋದ್ನ ನೋಡಿ “ ವಿಮಾನ, ಹಕ್ಕಿ, ಹೆಲಿಕಾಪ್ಟ್ರು ಹಾರೋದ್ನ ನೋಡಿನಿ. ಇದ್ಯಾನ ರೂಮು ಹಾರ್ತದ! ಎಲ್ಲಿಗೋಯ್ತಿರಿ?” ಅಂತ ಕೇಳ್ತು. ಎಲ್ರೂವಿ “ನಾವು ನಕ್ಷತ್ರಲೋಕಕ್ಕ ಟೂರ್ಗ ಒಯ್ತಿವಿ. ನಮ್ಗ ಹಾರಕ ಕಷ್ಟ ಆಯ್ತದ ವಸಿ ಹೆಲ್ಪ್ ಮಾಡು” ಅಂತ ಕೇಳ್ಕತರ. ಗಾಳಿ ಅವ್ರಿಗ ಹೆಲ್ಪ್ ಮಾಡಾಕ ಬತ್ತು. ಆಗ ಕಾಗಸ್ವಾಮಿ ಬಂದ್ಬುಟ್ಟು ‘ನೀನು ಅವ್ರಗ ಹೆಲ್ಪು ಮಾಡ್ ಬ್ಯಾಡ’ ಅಂದ್ರೂ ಗಾಳಿ ಕಾಗಸ್ವಾಮಿ ಮಾತ್ನ ಕೇಳ್ದೆ ಹೆಲ್ಪ್ ಮಾಡ್ತದ. 

     ಮೇಲೆ ಮೇಲೆ ಹಾರ್ತ ನಕ್ಷತ್ರಲೋಕಕ್ಕ ಹತ್ರ ಆಗ್ತರ. ಆವಾಗ ಚಾಕ್ಪೀಸು ಇಣ್ಕಿ ನೋಡ್ವಾಗ ಕೆಳ್ಕ ಬೀಳತ್ತ. ಕಾಗಸ್ವಾಮಿ ಆ ಚಾಕ್ಪೀಸ್ನ ದೆಯ್ಯ ಮಾಡಿ ‘ಅವ್ರ್ ಟೂರ್ನ ಕೆಡ್ಸು’ ಅಂತನ. ಆ ದೆಯ್ಯ ಹೋಗಿ ರೆಕ್ಕಗ ಅಗತ್ಕಂಡು ಎತ್ತೆತ್ತಗೋ ಹಾರಿಸ್ತದ. ಅವ್ರು ನಕ್ಷತ್ರಲೋಕಕ್ಕ ಮತ್ತ ದೂರ ಆಗ್ಬುಡ್ತರ. ಎಲ್ರಿಗೂ ಬಂಯ ಆಗುತ್ತ. ಆಗ ಪೊರಕೆ ಹೋಗಿ ರೆಕ್ಕೆಗ ಚೆನ್ನಾಗ್ ಬಾರಿಸ್ತದ. ಆ ಏಟ್ಗ ಚಾಕ್ಪೀಸಿನ ದೆಯ್ಯ ಬುಟ್ಟೋಗಿ ಸರಿ ಆಗಿ ತಿರ್ಗ ನಕ್ಷತ್ರಲೋಕಕ್ಕ ಫಾಸ್ಟಾಗಿ ಹಾರ್ತರ. 

     ಎಲ್ರೂವಿ ಬಂದು ನಕ್ಷತ್ರಲೋಕದ ಮೇಲ ಲ್ಯಾಂಡ್ ಅಯ್ತರ. ಒಂದ್ಕಡ ಚಿನ್ನದ ಗಿಡ ಮರ್ಗಳು ಓಡಾಡ್ತವ. ಇನ್ನೊಂದ್ಕಡ ವಜ್ರದ ಬೆಟ್ಟ. ಅಲ್ಲೇ ಹಾಲಿನ ಹೊಳೆ ಹರಿತದ. ಅದ್ರ ಪಕ್ಕಕ್ಕ ಜೇನಿನ ಕೊಳ ಅದ. ಅಲ್ಲೊಂದ್ ಕೇಳಿದ್ನ ಕೊಡೋವಂತ ಬಾವಿ ಇತ್ತು. ಇದ್ನೆಲ್ಲಾ ನೋಡ್ತ ಚಾಕ್ಪೀಸು ಹಾಲು ಕುಡಿತಿನಿ ಅಂದ್ಕ ಹೊಳೆಗ ಇಳಿತು. ಜಾರಿ ಬಿದ್ಕಂತು. ಮುಳುಗ್ತಾ ಇರುವಾಗ ‘ಕಾಪಾಡಿ ಕಾಪಾಡಿ’ ಅಂದ್ಕ ಕೂಗ್ತಿತ್ತು. ಫ್ರೆಂಡ್ಸೆಲ್ಲ ಕೂಗಿದ್ರು. 

     ಬೆಂಚ್ಗಳು ಬಾವಿ ಹತ್ರಕ್ಕ ಹೋಗ್ಬುಟ್ಟು ‘ನಂ ಪ್ರೆಂಡು ಮುಳಿಕತನ, ಹೆಂಗಾರೂ ಮಾಡಿ ಕಾಪಾಡು’ ಅಂತ ಬೇಡ್ಕಂಡ್ರು. ಆಗ ಬಾವಿ ಒಳಗಿಂದ ಸೌಂಡು ಬತ್ತು. ನೀರೆಲ್ಲ ಸೇರಿ ದೊಡ್ಡದೊಂಡು ಕೈ ಆಗಿ ಹೊಳೇಲಿ ಮುಳುಗ್ತಿದ್ದ ಚಾಕ್ಪೀಸನ್ನು ಹಿಡ್ದು ಎತ್ತಿದ್ರ ಅಲ್ಲಿ ಮರಿ ನಕ್ಷತ್ರ ಇತ್ತು. ಫ್ರೆಂಡ್ಸೆಲ್ಲ ಕೂಗಿದ್ರು “ ಇದು ನಂ ಪ್ರೆಂಡಲ್ಲ”. ಆಗ ಮರಿ ನಕ್ಷತ್ರ ಹೇಳ್ತು ‘ನಾನೇಕಪ್ಪ ನಿಂ ಪ್ರೆಂಡು’. ಆದ್ರ ಇವ್ರು ಅಲ್ಲ ಅಂದ್ರು. ಆಗ ಬಾವಿ ಮಾತಾಡ್ತು. “ಇಲ್ಲಿ ಯಾರೇ ಹಾಲಿನ ಹೊಳೆಗ ಬಿದ್ರೂ ಮರಿ ನಕ್ಷತ್ರ ಅಯ್ತರ. ಇವ್ರೆಲ್ಲ ಮತ್ತೀಗ ಯಾನ್ ಮಾಡೋದು ಅಂತ ಕೇಳುದ್ರ ಅದ್ಕ ಬಾವಿ ‘ ಇಲ್ಲಿರೋ ಜೇನಿನ ಕೊಳದಾಗ ಮುಳುಗಿಸಿದ್ರ ಮೊದ್ಲಿನಂಗ ಅಯ್ತರ’ ಅಂದು ಮರಿ ನಕ್ಷತ್ರನ್ನ ಜೇನಿನ ಕೊಳದಾಗ ಮುಳುಗಿಸಿ ಮ್ಯಾಕ್ಕೆ ತಗುದ್ರ ಅಲ್ಲಿ ಚಾಕ್ಪೀಸು ಇರುತ್ತ. ಅದು ಓಡ್ಬಂದು ಫ್ರೆಂಡ್ಸನ್ನ ತಬ್ಕಳತ್ತ. ಬಾವಿಯಿಂದ ಬಂದ ಕೈ ತಿರ್ಗ ವೊಂಟೋಯ್ತದ. 

  ಕಥೆಗಾರರು: -9ನೇ ತರಗತಿ ವಿಭಾಗದ ಮಕ್ಕಳು ಸರ್ಕಾರಿ ಪ್ರೌಢ ಶಾಲೆ, ಹೆಗ್ಗಡಹಳ್ಳಿ

ಕೃಪೆ : ಪ್ರಜಾವಾಣಿ

Monday 29 November 2021

ಸಂವಿಧಾನ ಮತ್ತು ಮಕ್ಕಳ ದಿನಾಚರಣೆ

ಸಂವಿಧಾನ ಮತ್ತು ಮಕ್ಕಳ ದಿನಾಚರಣೆ
ಶಾಲೆ ಒಂದು ಸೌಹಾರ್ದ ತಾಣ; ಸಹಬಾಳ್ವೆ, ಭ್ರಾತೃತ್ವದ ಗೂಡು. ನಾಳಿನ ಸಮತೆಯ ಸಮಾಜ ನಿರ್ಮಾಣವಾಗುವುದು ಶಾಲೆಯಲ್ಲಿ. ಇಂತಹ ತಾಣದಲ್ಲಿಂದು ನಾವು ಸಂವಿಧಾನ ದಿನ ಮತ್ತು ಮಕ್ಕಳ ದಿನವನ್ನು ಜೊತೆ ಜೊತೆಯಾಗಿ ಆಚರಿಸಿದೆವು. ಭಾರತದ ಪ್ರಜೆಗಳಾದ ನಾವು 1949ರ ನವೆಂಬರ್ 26ರಂದು ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ದಿನದ ನೆನಪಿಗಾಗಿ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಸಂಭ್ರಮದ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆವು. ಕಾರ್ಯಕ್ರಮದ ಆಶಯವಾಗಿ ಮಕ್ಕಳು ಕುವೆಂಪು ಅವರ “ಓ ನನ್ನ ಚೇತನ” ಗೀತೆಯನ್ನು ಹಾಡಿದರು. ಗುರುಗಳು ಸಂವಿಧಾನದ ಕುರಿತು ಹೇಳಿದರು. ಮಕ್ಕಳ ದಿನದ ಸಂಭ್ರಮದ ಚಿತ್ರಗಳು

Saturday 20 November 2021

ಶಿಕ್ಷಕರ ಕನ್ನಡ ಹಬ್ಬ

 

ಶಿಕ್ಷಕರ ಕನ್ನಡ ಹಬ್ಬ:

ನಂಜನಗೂಡಿನಲ್ಲೊಂದು ನುಡಿ ಹಬ್ಬ

‘ಕನ್ನಡ ಉಳಿಸಿ ಕನ್ನಡ ಬೆಳೆಸಿ’ ಎಂಬ ಕೂಗು ನವೆಂಬರ್ ತಿಂಗಳಲ್ಲಿ ಕಿವಿ ಮೇಲೆ ಬಿದ್ದು ಹೋಗುತ್ತದೆ. ಅದು ಮತ್ತೆ ಕೇಳಬೇಕೆಂದರೆ ನವೆಂಬರ್ ಬರುವ ತನಕ ಕಾಯಬೇಕು. ಉಳಿಸಿ ಬೆಳೆಸಿ ಕೂಗಿನ ಆಚೆಗೆ ಕನ್ನಡದ ಹಬ್ಬ ಪ್ರತಿದಿನ ನಡೆಯುವುದು ಕನ್ನಡ ನಾಡಿನ ಮೂಲೆ ಮೂಲೆಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ. ಲಕ್ಷ ಲಕ್ಷ ಮಕ್ಕಳು, ಸಾವಿರ ಸಾವಿರ ಶಿಕ್ಷಕರು ಯಾವ ಘೋಷಣೆಯ ಕೂಗದೆ ಕನ್ನಡ ನುಡಿಯ ಜೀವಂತಿಕೆಯಂತೆ ಬದುಕುತ್ತಿದ್ದಾರೆ.

ಕನ್ನಡ ನುಡಿಯ ಕುರಿತು ಹಲವು ಸಮ್ಮೇಳನಗಳು ನಡೆಯುತ್ತವೆ. ಆದರೆ ಮಕ್ಕಳಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಅರಿವು ಬಿತ್ತುವ ಸರ್ಕಾರಿ ಶಾಲೆಯ ಶಿಕ್ಷಕರಿಗಾಗಿ  ಕನ್ನಡ ಹಬ್ಬಗಳು ನಡೆಯುವುದು ಅಪರೂಪದಲ್ಲಿ ಅಪರೂಪವೇ ಸರಿ. ನಂಜನಗೂಡಿನಲ್ಲಿ ಅಂಥದ್ದೊಂದು ಅದ್ಭುತ ಪ್ರಯತ್ನ ಇದೇ ನವೆಂಬರ್ 19ರಂದು ನಡೆಯಿತು.

ಉತ್ಸಾಹಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ.ಎನ್.ರಾಜು ಅವರ ಕನಸು ‘ಶಿಕ್ಷಕರ ಕನ್ನಡ ಹಬ್ಬ’ ಯಶಸ್ವಿಯಾಗಿ ನಡೆಯಿತು. “ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು” ಎಂಬ ವರಕವಿ ಬೇಂದ್ರೆಯವರ ಮಾತಿನಂತೆ ತಾಲೂಕಿನಲ್ಲಿ ಕನ್ನಡ ಕಲಿಸುವ ಕನ್ನಡ ಶಾಲೆಯ ನಾನೂರಕ್ಕೂ ಅಧಿಕ ಶಿಕ್ಷಕರು ಕನ್ನಡದ ಹಬ್ಬದಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ.



ದೀಪ ಬೆಳಗಿಸಿ ಹಬ್ಬಕ್ಕೆ ಚಾಲನೆ ನೀಡಿದ ಪ್ರಾದ್ಯಾಪಕಿ ಶ್ರೀಮತಿ ಜ್ಯೋತಿ ಶಂಕರ್ ಮಾತನಾಡಿ ‘ಕನ್ನಡ ಎಂದೂ ತಲೆ ತಗ್ಗಿಸುವ ಭಾಶೆಯಲ್ಲ ಆದರೂ ಕನ್ನಡ ಮಾತನಾಡುವುದಕ್ಕೆ ನಮಗೆ ಕೀಳರಿಮೆ. ಕನ್ನಡತನ ಬಹಳ ದೊಡ್ಡದು. ಭಾಶೆ ಒಂದು ಸಂಸ್ಕೃತಿಯನ್ನು ಕಟ್ಟಿಕೊಡುತ್ತದೆ. ಶಿಕ್ಷಕರ ಕೆಲಸ ಬಹಳ ಪರಿಶ್ರಮದ್ದು. ಬಳಪ ಹೇಗೆ ಹಿಡಿಯಬೇಕೆಂಬುದು ತಿಳಿಯದ, ಸುರಿಯುವ ಗೊಣ್ಣೆಯ ಒರೆಸಿಕೊಳ್ಳಲುಬಾರದ ಪುಟ್ಟ ಪುಟ್ಟ ಮಕ್ಕಳ ಕೈ ಹಿಡಿದು ತಿದ್ದಿ ತೀಡಿ ಕಲಿಸುವ ಕೆಲಸ ಶ್ರೇಷ್ಠವಾದುದು.  ಯಾರು ಮಾತೃಭಾಶೆಯಲ್ಲಿ ಸಮರ್ಥರಲ್ಲವೋ ಅವರು ಎಂದೂ ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯವಿಲ್ಲ ಎಂದರು.


ಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಿನ ಹಿರಿಯ ವಿದ್ವಾಂಸರಾದ ಶ್ರಿ ಸಿ.ಪಿ.ಕೆ ಅವರು ಮಾತನಾಡುತ್ತಾ… ‘ಕನ್ನಡದ ಬೆಳಕು ಒಳಗೂ ಹೊರಗೂ ಸದಾ ಬೆಳಗುತಿರಬೇಕು. ಉತ್ಸವ ಎನ್ನುವ ಸಂಸ್ಕೃತ ಪದದ ಬದಲು ಇಲ್ಲಿ ಹಬ್ಬ ಎಂಬ ಕನ್ನಡದ ಪದ ಬಳಸಿದ್ದು ಆಪ್ತವಾಗಿದೆ. ಕನ್ನಡದ ಬಗ್ಗೆ ಶಿಕ್ಷಕರಿಗೆ ದೊಡ್ಡ ಜವಾಬ್ದಾರಿ, ಹೊಣೆಗಾರಿಕೆಯಿದೆ. ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಬೇಕು, ಚಾರಿತ್ರ್ಯವನ್ನು ಬೆಳೆಸಬೇಕು. ಕನ್ನಡ ಅನ್ನೋದು ಒಂದು ಭಾಶೆಯ ಹೆಸರಲ್ಲ; ಅದೊಂದು ಸಂಸ್ಕೃತಿ ಎಂದರು.

“ಹಿಂದಿ ರಾಷ್ಟ್ರ ಭಾಶೆ ಎಂಬ ತಪ್ಪು ಕಲ್ಪನೆ ಇದೆ. ಭಾರತದ ಎಲ್ಲಾ ಭಾಶೆಗಳೂ ರಾಷ್ಟ್ರ ಭಾಶೆಗಳೆ. ಆದರೆ ಹಿಂದಿಯನ್ನು ಹಿಂದಿನಿಂದ ಹೇರಿಕೆ ಮಾಡಲಾಗುತ್ತಿದೆ. ಅದು ಸರಿಯಲ್ಲ. ಪ್ರಾಥಮಿಕ ಹಂತದಲ್ಲಿ ಕನ್ನಡವೇ ಶಿಕ್ಷಣದ ಮಾಧ್ಯಮವಾಗಬೇಕು” –ಸಿ.ಪಿ.ಕೆ.


ಶಿಕ್ಷಕರ ಕನ್ನಡ ಹಬ್ಬದ ಬೆಳಗಿನ ಅವಧಿಯಲ್ಲಿ ಇಬ್ಬರು ಮಹನೀಯರ ಮಾತುಗಳ ನಂತರ ತಾಲೂಕಿನಲ್ಲಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಶಿಕ್ಷಕರಾದ ವೈ. ಎಸ್. ಹರಗಿ (ಹುಲ್ಲಹಳ್ಳಿ ಪ್ರೌಢ ಶಾಲೆ) ಸಂತೋಷ ಗುಡ್ಡಿಯಂಗಡಿ ( ಹೆಗ್ಗಡಹಳ್ಳಿ ಪ್ರೌಢಶಾಲೆ), ವಿಜಯಕುಮಾರ್ (ಹುಲ್ಲಹಳ್ಳಿ ಪ್ರೌಢ ಶಾಲೆ) ಸತೀಶ್ ದಳವಾಯಿ(ಹಳ್ಳದಕೇರಿ ಶಾಲೆ) ಮಹದೇವ ನಾಯಕ (ಕಳಲೆ ಶಾಲೆ) ಇವರನ್ನು ಸನ್ಮಾನಿಸಲಾಯಿತು.



ಜಾನಪದ ವಿದ್ವಾಂಸರಾದ ಶ್ರೀ ಪಿ.ಕೆ.ರಾಜಶೇಖರ್

ಮದ್ಯಾಹ್ನದ ಅವಧಿಯಲ್ಲಿ ಹಿರಿಯ ಜಾನಪದ ವಿದ್ವಾಂಸರಾದ ಶ್ರೀ ಪಿ.ಕೆ.ರಾಜಶೇಖರ್ ಅವರು ಕನ್ನಡ ಜಾನಪದ ಸಿರಿಯ ಕುರಿತು ಮಾತನಾಡಿದರು. ‘ಜಾನಪದ ಎಂದರೆ ಜನರ ಪದ. ಪದ ಎಂದರೆ ಪಾದ. ಪದ ಬಿಟ್ಟು ಪದ ಬಿಟ್ಟು ಮಾಡಿಕೊಂಡ ಹಾದಿಯೇ ಜನಪದ. ಸಮಗ್ರ ಜಾನಪದ ಎಂದರೆ ಒಂದು ಜನ ಸಮುದಾಯದ ಪರಿಪೂರ್ಣ ಬದುಕು. ಜನಪದ ಇನ್ನು ಯಾಕೆ ಜೀವಂತವಾಗಿದೆಯೆಂದರೆ ಅದರಲ್ಲಿರುವ ಸತ್ವದಿಂದ, ಅದರಲ್ಲಿ ಚಿತ್ರಿತವಾಗಿರುವ ಜೀವನ ಚಿತ್ರಣದಿಂದ’ ಎಂದು ಜನಪದದ ಹಿರಿಮೆಯನ್ನು ಸಾರುತ್ತಲೆ ಕತೆ, ಹಾಡು, ಒಗಟು, ಹಾಸ್ಯಗಳ ರಸಧಾರೆಯನ್ನು ಶಿಕ್ಷಕರಿಗೆ ಉಣಬಡಿಸಿದರು.

 ಹಬ್ಬ ಎಂದರೆ ಹಾಡು, ಕುಣಿತ ಸಂಭ್ರಮ ಇರಲೇಕಲ್ಲವೆ.

‘ಹಚ್ಚೇವು ಕನ್ನಡದ ದೀಪ’ ಎಂದು ಹೆಗ್ಗಡಹಳ್ಳಿಯ ಶಿಕ್ಷಕಿ ಸುನಂದ ಅವರ ಮುಂದಾಳತ್ವದಲ್ಲಿ ತಾಲೂಕಿನ ವಿವಿಧ ಶಾಲೆಯ ಶಿಕ್ಷಕಿಯರು  ನೃತ್ಯ ಮಾಡಿದರು. ‘ಚೆಲುವಯ್ಯ ಚೆಲುವೋ’ ಎಂದು ಕೋಲಾಟ ಮಾಡಿದ್ದು ಶಿಕ್ಷಕಿ ರಾಧಿಕಾ ಮತ್ತವರ ಹಿರಿಯ ಶಿಕ್ಷಕಿಯರನ್ನೊಳಗೊಂಡ ತಂಡ. ದೇಬೂರು ಶಾಲೆಯ ರವಿಕುಮಾರ್ ಮತ್ತು ತಂಡದವರು ಕಂಸಾಳೆ ಹಿಡಿದು ಕುಣಿದರು. ಸಿ.ಆರ್.ಪಿ. ಮಂಜುನಾಥ್ ಮತ್ತು ತಂಡದವರು ಸಿದ್ದಪ್ಪಾಜಿಯ ನೆನೆದು ತಂಬೂರಿ ಪದವ ಹಾಡಿದರು. ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಅವರು ಹಬ್ಬದ ಸಮಿತಿಯ ಸದಸ್ಯರೊಂದಿಗೆ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’ ಹಾಡನ್ನು ಹಾಡಿದರೆ ವಿವಿಧ ಶಿಕ್ಷಕರು ಕನ್ನಡಗೀತೆಗಳನ್ನು ಹಾಡಿದರು.


ಶಿಕ್ಷಕರ ಕವಿಗೋಷ್ಠಿ.

ಕನ್ನಡ ಹಬ್ಬದಲ್ಲಿ ತಾಲೂಕಿನ 24 ಶಿಕ್ಷಕ ಕವಿಗಳ ಕವಿಗೋಷ್ಠಿ ನಡೆಯಿತು. ಅಧ್ಯಕ್ಷತೆಯನ್ನು ಹುಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ವೈ.ಎಸ್.ಹರಗಿ ವಹಿಸಿದ್ದರು. ಹಳ್ಳದಕೇರಿ ಶಾಲೆಯ ಸತೀಶ್ ದಳವಾಯಿ ಕವಿಗೋಷ್ಠಿ ನಡೆಸಿಕೊಟ್ಟರು. ಕನ್ನಡ ನಾಡು ನುಡಿ ಕುರಿತಾಗಿಯೇ ಬಹುತೇಕ ಕವಿತೆಗಳಿದ್ದವು. ಮಡುವಿನಹಳ್ಳಿ ಪ್ರೌಢ ಶಾಲೆಯ ಪ್ರಕಾಶ್ ಅವರ ಗಡಿನಾಡ ಕನ್ನಡಿಗರ ನೋವಿಗೆ ಮಿಡಿದ ‘ನಾವು ನಿಮ್ಮವರಲ್ಲವೆ’ ಎಂಬ ಕವಿತೆ ವಿಶಿಷ್ಠವಾಗಿತ್ತು.

 ಶಿಕ್ಷಕರ ಪ್ರತಿಭೆಗಳನ್ನು ಗುರುತಿಸುವ, ಅವರ ಕನ್ನಡಾಭಿಮಾನವನ್ನು ಜಾಗೃತಗೊಳಿಸುವ “ಶಿಕ್ಷಕರ ಕನ್ನಡ ಹಬ್ಬವನ್ನು ಆಯೋಜಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ನಂಜನಗೂಡು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ.ಎನ್.ರಾಜು ಮತ್ತು ಬಿ. ಆರ್. ಸಿ. ಶ್ರೀ ಕೆ. ಜಿ. ಮಹೇಶ್ ಹಾಗೂ ಸಮಿತಿಯ ಎಲ್ಲಾ ಸದಸ್ಯರಿಗೂ ಶಿಕ್ಷಕರು  ಕೃತಜ್ಞತೆಯ ಹೂಮಳೆ ಸುರಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ಹಬ್ಬದ ವಿವಿಧ ಕಾರ್ಯಕ್ರಮಗಳನ್ನು ಹಂಚಿಕೊಂಡು ಸಂಭ್ರಮಿಸಿದರು.

ಕನ್ನಡ ಹಬ್ಬದ ಬೆಳಗಿನ ಅವಧಿಯ ಕಾರ್ಯಕ್ರಮದ ನಿರೂಪಣೆ ಮಾಡಿದವರು ದೇಬೂರಿನ ಆದರ್ಶ ಶಾಲೆಯ ಶ್ರೀ ಮಹೇಶ್ ಮತ್ತು ತಾಯೂರು ಸ|| ಹಿ|| ಪ್ರಾ|| ಶಾಲೆಯ ಶ್ರೀಮತಿ ರೇಖಾ ಅವರು. ಮದ್ಯಾಹ್ನದ ಅವಧಿಯ ಕಾರ್ಯಕ್ರಮ ನಿರೂಪಿಸಿದವರು ನವಿಲೂರಿನ ಸ|| ಪ್ರೌ|| ಶಾಲೆಯ ಶ್ರೀಕಂಠಮೂರ್ತಿ ಎಂ. ಮತ್ತು ಸ||ಹಿ||ಪ್ರಾ|| ಶಾಲೆ ಬೊಕ್ಕಹಳ್ಳಿಯ ಶ್ರೀಮತಿ ರೇಖಾ ಅವರು. 














ಕನ್ನಡ ಹಬ್ಬದ ರೂವಾರಿ ಶ್ರೀ ಸಿ. ಎನ್. ರಾಜು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಂಜನಗೂಡು



Friday 8 October 2021

ರಾಷ್ಟ್ರೀಯ ಪೋಷಣ್ ಅಭಿಯಾನ










ರಾಷ್ಟ್ರೀಯ ಪೋಷಣ್ ಅಭಿಯಾನ


ದಿನಾಂಕ 27-09-2021ರ ಸೋಮವಾರದಂದು ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೇಳೆ ಕಾಳುಗಳು, ಹಣ್ಣು ತರಕಾರಿಗಳ ಮಹತ್ವ ಅವುಗಳಿಂದ ದೊರಕುವ ಜೀವಸತ್ವಗಳನ್ನು ಮಕ್ಕಳಿಗೆ ತಿಳಿಸಲಾಯಿತು.

 ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಧಾನ್ಯಗಳು, ತರಕಾರಿಗಳಿಂದ ಕಲಾಕೃತಿಗಳನ್ನು ತಯಾರಿಸಿದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು.