Friday 20 September 2019

ನಿಮ್ಮ ಕಸ ನಿಮಗೆ

ನಿಮ್ಮ ಕಸ ನಿಮಗೆ

 



2019ರ ಏಪ್ರಿಲ್ ತಿಂಗಳಲ್ಲಿ ನಮ್ಮ ಶಾಲೆಯ ‘ಬಣ್ಣದ ಮೇಳ’ದಲ್ಲಿ ನಿಮ್ಮ ಕಸ ನಿಮಗೆ ಎಂಬ ಅಭಿಯಾನವನ್ನು ಆರಂಭಿಸಲಾಯಿತು.




ಅಭಿಯಾನದ ಉದ್ದೇಶ:

ಮಕ್ಕಳ ತಿಂಡಿಯಿಂದ ಆರಂಭಿಸಿ ನಾವು ಬಳಸುವ ಪ್ರತಿಯೊಂದು ವಸ್ತುಗಳೂ ಪ್ಲಾಸ್ಟಿಕ್ ಕವರಿನಿಂದ ಸುತ್ತಿರುತ್ತವೆ. ಬಳಸಿದ ಪ್ರತಿಯೊಬ್ಬರು ಆ ಕವರನ್ನು ಎಸೆದುಬಿಡುತ್ತಾರೆ. ನಮಗೆಲ್ಲ ಆ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವುದು ಮತ್ತು ಸೂಕ್ತ ವಿಲೇವಾರಿ ತಿಳಿದಿಲ್ಲ. ಹೀಗಾಗಿ ಆ ಪ್ಲಾಸ್ಟಿಕ್ ತ್ಯಾಜ್ಯವು ನಮ್ಮ ಪರಿಸರಕ್ಕೆ ಮಾರಕವಾಗಿ ಉಳಿಸುಬಿಡುತ್ತದೆ ಎಂಬುದು ನಮಗೆಲ್ಲ ತಿಳಿದ ವಿಚಾರ.


ನಮ್ಮ ಊರೂರು, ನದಿ, ಕಾಡು, ಸಮುದ್ರವನ್ನೆಲ್ಲ ಆವರಿಸಿಕೊಳ್ಳುತ್ತಿರುವ ೀ ರಾಕ್ಷಸ ಕಸವನ್ನು ತಡೆಯಲು ನಾವೇನು ಮಾಡಬಹುದು? ಎಂದು ಯೋಚಿಸುತ್ತಿರುವಾಗಲೇ ಮೂಡಿಸಿದ್ದು “ನಿಮ್ಮ ಕಸ ನಿಮಗೆ” ಎಂಬ ತಯಾರಿಸಿದವರಿಗೇ ಅವರ ಕಸವನ್ನು ವಾಪಾಸ್ಸು ಕಳಿಸುವ ಸಾತ್ವಿಕ ಪ್ರತಿಭಟನಾ ದಾರಿ.

ನಾವು ನಮಗೆ ದೊರೆತ ಪ್ರತೀ ಕಂಪೆನಿಯ ಕಸವನ್ನು ವಿಂಗಡಿಸಿ ಪ್ಯಾಕೇಟು ಮಾಡಿ ಆ ಕಂಪೆನಿಗೊಂದು ಪತ್ರ ಬರೆದು, ನಮ್ಮ ಶಾಲೆಯ ಮಕ್ಕಳೆಲ್ಲ ಸಹಿ ಮಾಡಿ ಕಸದ ಜೊತೆ ರಿಜಿಸ್ಟರ್ ಅಂಚೆಯ ಮೂಲಕ ಪ್ರತೀ ತಿಂಗಳು ಕಳಿಸುವುದು ನಮ್ಮ ಅಭಿಯಾನದ ಯೋಜನೆ. ಅದರಂತೆ  2019 ಏಪ್ರಿಲ್ 9ರಂದು ಪ್ರಥಮ ಕಂತಿನ ಕಸದ ಪ್ಯಾಕೇಟುಗಳು ದೇಶದ ಮತ್ತು ಪ್ರಪಂಚದ ಪ್ರಖ್ಯಾತ ಹತ್ತು ಕಂಪೆನಿಗಳಿಗೆ ಕಳಿಸಿದೆವು.



ಇಂಥದ್ದೊಂದು ಅಭಿಯಾನ ದೇಶದಲ್ಲೇ ವಿನೂತನವಾದುದು ಎಂಬುದು ಪ್ರಸಿದ್ಧ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರ ಅಭಿಪ್ರಾಯ. ನಿಮ್ಮ ಕಸ ನಿಮಗೆ ಅಭಿಯಾನದ ಎರಡನೇ ಕಂತಿನ ಕಸ ತಲುಪುತ್ತಲೇ ಬಹುರಾಷ್ಟ್ರೀಯ ಕಂಪೆನಿ “ಕೋಲ್ಗೇಟ್” ತಮ್ಮ ಪ್ರತಿಕ್ರಿಯೆಯನ್ನು ನಮಗೆ ಬರೆದಿದೆ. ‘2025ರ ಹೊತ್ತಿಗೆ ನಾವು ನಮ್ಮೆಲ್ಲ ಪ್ಲಾಸ್ಟಿಕ್ ಉತ್ಪಾದನೆಯನ್ನು ಶೇಕಡಾ ನೂರರಷ್ಟು ಮರುಬಳಕೆ ಮಾಡುತ್ತೇವೆ’ ಎಂಬ ವಾಗ್ದಾನವನ್ನು ಹೆಗ್ಗಡಹಳ್ಳಿಯ ಮಕ್ಕಳಿಗೆ ನೀಡಿದೆ. ಈ ಪ್ರತಿಕ್ರಿಯೆ ನಮ್ಮ ಕಸ ಕಳಿಸುವ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿದೆ. ಇದೀಗ ನಾಲ್ಕು ಕಂತನ್ನು ಪೂರೈಸಿದ್ದೇವೆ. ಇದುವರೆಗೆ 35ಕ್ಕೂ ಹೆಚ್ಚು ಕಂಪೆನಿಗಳಿಗೆ ಕಸ ಕಳಿಸಿದ್ದೇವೆ. ಮಕ್ಕಳ ತಿಂಡಿ ತಯಾರಿಸುವ ನೆಸ್ಲೆ, ಪೆಪ್ಸಿಕೊ, ಪಾರ್ಲೆ ಮುಂತಾದ ಕಂಪೆನಿಗಳಿಗೆ ಪ್ರತೀ ತಿಂಗಳೂ ಕಸವನ್ನು ಕಳಿಸುತ್ತೆದ್ದೇವೆ.

ನಮ್ಮ ಅಭಿಯಾನ ಮತ್ತು  ನಮ್ಮ ಸುಂದರ ನಾಳೆಗಳನ್ನು ಉಳಿಸಿಕೊಡಿ ಎಂದು ಪ್ರದಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೂ ಪತ್ರ ಬರೆದಿದ್ದೇವೆ.