Tuesday 25 February 2020

ಹೆಗ್ಗಡಹಳ್ಳಿಯಂತ ಶಾಲೆ ಮತ್ತೊಂದಿಲ್ಲ : ಶ್ರೀ ಎಸ್. ಸುರೇಶ್ ಕುಮಾರ್



ಹೆಗ್ಗಡಹಳ್ಳಿಯಂತ ಶಾಲೆ ಮತ್ತೊಂದಿಲ್ಲ : ಶ್ರೀ ಎಸ್. ಸುರೇಶ್ ಕುಮಾರ್



ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಇಡೀ ರಾಜ್ಯದ ಮಕ್ಕಳ ಮುಂದೆ ಒಂದು ಆದರ್ಶದ ದಾರಿಯನ್ನು ತೆರೆದಿಟ್ಟಿದ್ದಾರೆ. ಮಕ್ಕಳು ದನಿ ಎತ್ತಿದರೆ, ಹೆಗ್ಗಡಹಳ್ಳಿಯ ಮಕ್ಕಳ ರೀತಿ ಸಾತ್ವಿಕ ಪ್ರತಿಭಟನೆ ಮಾಡಿದರೆ ಪರಿಣಾಮಕಾರಿಯಾಗಿರುತ್ತದೆ. ಶಿಕ್ಷಣ ಇಲಾಖೆಯವರು ಈ ಶಾಲೆಯನ್ನು ಗುರುತಿಸಿದ್ದಕ್ಕಿಂತ ಹೆಚ್ಚು ದೊಡ್ಡ ದೊಡ್ಡ ಕಂಪೆನಿಗಳು ಗುರುತಿಸಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ತಿಳುವಳಿಕೆ ಬುದ್ಧಿ ಹೇಳಿರುವಂತ ಶಾಲೆ ಇದ್ದರೆ ಅದು ಹೆಗ್ಗಡಹಳ್ಳಿಯ ಶಾಲೆ. ಇಡೀ ರಾಜ್ಯದಲ್ಲಿ ಈ ರೀತಿಯ ಮತ್ತೊಂದು ಶಾಲೆ ಎಲ್ಲೂ ಇಲ್ಲ. ಅಂತಹ ಶಾಲೆಗೆ ನಾನಿಂದು ಬಂದಿದ್ದೇನೆ ಎಂದು ಹರ್ಷವ್ಯಕ್ತಪಡಿಸಿದರು. ಎರಡನೇ ಬಾರಿ ಈ ಶಾಲೆಗೆ ಬಂದಿದ್ದೇನೆ ಎಂದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೆಮ್ಮೆಯಿಂದ ಹೇಳಿದರು. 25-02-2020 ರಂದು ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವರು “ನಿಮ್ಮ ಕಸ ನಿಮಗೆ ಅಭಿಯಾನದ ಕುರಿತು ಅಭಿಮಾನದ ಮಾತುಗಳನ್ನಾಡಿ ಎಂಟನೇ ಕಂತಿನ ಕಸವನ್ನು ಹತ್ತು ಕಂಪೆನಿಗಳಿಗೆ ಕಳಿಸುವ ಮಕ್ಕಳ ಚಳುವಳಿಗೆ ಬೆಂಬಲವಾಗಿ ನಿಂತರು.

ಪ್ಲಾಸ್ಟಿಕ್ ನಿಂದಾಗುವ ಅಪಾಯ ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಬಿಡಲಿಕ್ಕೆ ಆಗುತ್ತಿಲ್ಲ. ಬಿಡದೆ ಇದ್ದರೆ ಅದು ಭಸ್ಮಾಸುರ ಆಗುತ್ತದೆ. ನಿಮ್ಮ ಭವಿಷ್ಯಕ್ಕಾಗಿ ನಿಮ್ಮ ಹೋರಾಟ ನಿರಂತರವಾಗಿರಲಿ. ಕೇವಲ ಪ್ಲಾಸ್ಟಿಕ್ ವಿರುದ್ಧವಷ್ಟೇ ಅಲ್ಲ ಸಮಾಜದಲ್ಲಿ ನಡೆಯುವ ಯಾವುದೇ ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆಯ ದನಿ ಇರಬೇಕು. ಮುಂದೆ ಪರೀಕ್ಷೆ ಹತ್ತಿರ ಬರುತ್ತಿದೆ ಚನ್ನಾಗಿ ಓದಿ. ಮೊಬೈಲ್ ನಿಂದ ದೂರವಿರಿ ಎಂದು ಹೇಳಿದರು. ಮಕ್ಕಳು ಇದೇ ಸಂದರ್ಭದಲ್ಲಿ ಜಗದ್ವಿಖ್ಯಾತ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಕುರಿತ ಪುಸ್ತಕವನ್ನು ನೀಡಿದರು. ನಿಮ್ಮಲ್ಲಿ ಯಾರು ಗ್ರೇಟಾ? ಎಂದು ಸಚಿವರು ಕೇಳಿದಾಗ “ನಾವೆಲ್ಲರೂ ಎಂದು ಉತ್ತರಿಸಿದರು.

ಶಾಸಕ ಶ್ರೀ ಹರ್ಷವರ್ಧನ್ ಮಾತನಾಡಿ ಎಸ್.ಎಸ್.ಎಲ್.ಸಿ. ಜೀವನದ ಅತ್ಯಂತ ಪ್ರಮುಖ ಪರೀಕ್ಷೆ ಚನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಿ. ಈ ಪ್ರಮಾಣಪತ್ರ ಬದುಕಿನುದ್ದಕ್ಕೂ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಪರೀಕ್ಷಾ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ನಿಮ್ಮ ಕಸ ನಿಮಗೆ ಅಭಿಯಾನದ ಎಂಟನೇ ಕಂತಿನ ಕಸವನ್ನು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಮತ್ತು ಶಾಸಕರು ಮತ್ತು ಮಕ್ಕಳು ಪೋಸ್ಟ್ ಮಾಸ್ಟರ್ ಸುರೇಶ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಪಾಂಡುರಂಗ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ. ಎನ್. ರಾಜು ಇಲಾಖೆಯ ಹಿರಿಯ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರಾದ ಎ. ಎಂ. ಲಿಂಗರಾಜು ಅವರು ಹಾಜರಿದ್ದರು.




No comments:

Post a Comment