Wednesday 18 November 2020

TALP ತರಬೇತಿ ಸಂಪನ್ನವಾಯಿತು.

 

TALP ತರಬೇತಿ


ನಾನು ನಾಟಕದ ಮೇಷ್ಟ್ರು. ನಮ್ಮ ಶಾಲೆಯ ಇತರೆ ವಿಷಯ ಶಿಕ್ಷಕರುಗಳೆಲ್ಲ ಟಾಲ್ಪ್ ತರಬೇತಿಗೆ ಹೋಗುತ್ತಿದ್ದಾಗ ‘ಏನಿದು ಕಂಪ್ಯೂಟರ್ ತರಬೇತಿ?’ ಎಂಬ ಕುತೂಹಲವಿತ್ತು.

ಆದರೆ ನನ್ನ ತರಗತಿಗಳಲ್ಲಿ, ಮಕ್ಕಳ ಬಿಡುವಿನ ವೇಳೆಗಳಲ್ಲಿ, ಶಾಲಾ ಕಾರ್ಯಕ್ರಮಗಳಲ್ಲಿ, ವಿಶೇಷ ಲೈವ್ ಕಾರ್ಯಕ್ರಮಗಳಲ್ಲೆಲ್ಲ ನಾನು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುತ್ತಾ ಬಂದವನು. ಮುಖ್ಯವಾಗಿ ನಮ್ಮ ಶಾಲೆ ವಿಜ್ಞಾನ ನಾಟಕಗಳಿಗಂತೂ ತಂತ್ರಜ್ಞಾನವನ್ನು ರಂಗವೇದಿಕೆಗೂ ತಂದವನು. ಕಳೆದ ವರ್ಷದ ನಮ್ಮ ನಾಟಕ “ಕಾರ್ಬನ್ ಲೋಕ” ಲ್ಯಾಪ್ ಟಾಪ್, ಪ್ರೊಜೆಕ್ಟರ್, ಇಂಟರ್ನೆಟ್ ನಾಟಕದ ಪ್ರಮುಖ ಪಾತ್ರವೂ ಹೌದು. ಇದಲ್ಲದೆ ಶಿಕ್ಷಣ ಸಚಿವರಿಂದ ಮೊದಲುಗೊಂಡು ದೇಶ ವಿದೇಶಗಳಲ್ಲಿರುವ ವಿಜ್ಞಾನಿಗಳು, ಸಾಹಿತಿಗಳ ಜೊತೆ ನಮ್ಮ ಮಕ್ಕಳು ನೇರವಾಗಿ ಸಂವಾದಿಸಲಿಕ್ಕೆ ಸಾಧ್ಯವಾಗಿದ್ದು ತಂತ್ರಜ್ಞಾನದಿಂದ. ಇನ್ನು ನಮ್ಮ ಮಕ್ಕಳ “ನಿಮ್ಮ ಕಸ ನಿಮಗೆ” ಅಭಿಯಾನ ರಾಜ್ಯದ ಪ್ರಜ್ಞಾವಂತರ ಗಮನ ಸೆಳೆಯುವುದಕ್ಕೂ ಕಾರಣವಾಗಿದ್ದು ತಂತ್ರಜ್ಞಾನ. ನಮ್ಮ ಪತ್ರಿಕೆ ಮತ್ತು ಬ್ಲಾಗ್ “ಅಳ್ಳೀಮರ”, “ಮಕ್ಕಳಂಗಡಿ” ಯೂಟ್ಯೂಬ್ ಚಾನಲ್ https://www.youtube.com/channel/UCrf0EGCeyR-nVoIJKA6YBqQ  ಫೇಸ್ಬುಕ್  https://www.facebook.com/makkalangadi ಪುಟಗಳನ್ನು ಹೊಂದಿರುವ ನಮ್ಮ ಶಾಲೆಯನ್ನು ಸ್ವತಃ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ https://en.wikipedia.org/wiki/S._Suresh_Kumar  ಅವರು ಹುಡುಕಿಕೊಂಡು ಬರುವಂತಾಗಿದ್ದಕ್ಕೆ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡಿದ್ದು ಕಾರಣ.

ಮೇಲಿನ ಪೀಠಿಕೆಯನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಈ ಟಾಲ್ಪ್ ತರಬೇತಿ ಎಂಬುದು ಶಿಕ್ಷಕರು  ಶೈಕ್ಷಣಿಕವಾಗಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕೆಂಬುದರ ಬಗ್ಗೆ ಸವಿವರವಾಗಿ ತಿಳಿಸಿಕೊಡುತ್ತದೆ; ಈ ತರಬೇತಿಯಲ್ಲಿ ಕಲಿಸಲಾಗುವ ಕೆಲವಾರು ವಿಚಾರಗಳನ್ನು ನಾನು ಈಗಾಗಲೇ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ಬಂದವನು. ನನಗೆ ತಿಳಿದಿರುವ ಮಾಹಿತಿಗಳಿಗೆ ಇನ್ನಷ್ಟು ಲಭ್ಯ, ಆವಶ್ಯಕ ಆಕರಗಳನ್ನು ಈ ತರಬೇತಿ ನನಗೆ ಒದಗಿಸುತ್ತಾ ಬಂತು. ಹೀಗಾಗಿ ತರಬೇತಿ ನನಗೆ ಸುಲಭ ಮತ್ತು ಪ್ರಯೋಜನಕಾರಿಯಾಯಿತು.

ಹತ್ತು ದಿನಗಳ ನಮ್ಮ ತರಬೇತಿ ನಂಜನಗೂಡಿನ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ನಮ್ಮ ಜೊತೆ ತರಬೇತಿಗೆ ಬಂದವರಲ್ಲಿ ಕೆಲವರು ಕಂಪ್ಯೂಟರ್ ಪರಿಣತರಿದ್ದರೆ, ಇನ್ನು ಕೆಲವರು ಹೊಸ ಲೋಕವೊಂದಕ್ಕೆ ಪ್ರವೇಶ ಪಡೆಯುತ್ತಿದ್ದವರಾಗಿದ್ದರು. ಎಲ್ಲರೂ ಸಮನ್ವಯದಿಂದ ತರಬೇತಿ ಸಂಪನ್ನವಾಯಿತು.

ನಮ್ಮ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶ್ರೀನಿವಾಸ ಶೆಟ್ಟಿಗಾರ್ ಮತ್ತು ಶ್ರೀ ಜಿ.ಎಸ್.ವಿಶ್ವನಾಥ ಅವರು ತಮ್ಮ ಅನುಭವವನ್ನು ಧಾರೆ ಎರೆಯುವುದರ ಜೊತೆಗೆ ನಮ್ಮಲ್ಲಿರುವ ಅನುಭವಿಗಳ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿಸಿಕೊಟ್ಟು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದ್ದರು. ನಮ್ಮಲ್ಲಿ ಬೇಗ ಬೇಗ ಕಲಿತುಕೊಂಡವರು, ಉಳಿದವರಿಗೆ ಸಹಾಯ ಮಾಡುತ್ತಾ ಇನ್ನಷ್ಟು ಕಲಿಯುತ್ತಾ ಹತ್ತು ದಿನಗಳ ಈ ಮೌಲ್ಯಯುತ ತರಬೇತಿಯನ್ನು ಮುಗಿಸಿದೆವು ನಿಜ ಅರ್ಥದಲ್ಲಿ ನಾವು ಹೊಸದಾಗಿ ಕಲಿಕೆಯನ್ನು ಆರಂಭಿಸಿದೆವು. ಇನ್ನು ತರಬೇತಿಯಲ್ಲಿ ಪಡೆದ ಮಾಹಿತಿಗಳನ್ನು ಹೆಚ್ಚು ಹೆಚ್ಚು ನಮ್ಮ ಭೋದನಾ ಕ್ರಮಗಳಿಗೆ ಅಳವಡಿಸಿಕೊಳ್ಳುತ್ತಾ ವೈಜ್ಞಾನಿಕ ಜಗತ್ತು ನಮಗೆ ನೀಡಿದ ತಂತ್ರಜ್ಞಾನವನ್ನು ನಮ್ಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಒದಗಿಸುತ್ತಾ ನಮ್ಮ ಶೈಕ್ಷಣಿಕ ಕ್ರಮವನ್ನು ಉತ್ತುಂಗಕ್ಕೇರಿಸುವ ಹೊಸ ಆಶಯಗಳೊಂದಿಗೆ ಶಾಲೆಗೆ ತೆರಳುತ್ತಿದ್ದೇವೆ.

 

ನಾವು ನಾಟಕ ಶಿಕ್ಷಕರಾಗಿ ಆಯ್ಕೆಯಾದಾಗ ನೀನಾಸಮ್  http://www.ninasam.org ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಕೆ.ವಿ.ಅಕ್ಷರ https://en.wikipedia.org/wiki/K._V._Akshara  ಅವರು ನಮಗೆಲ್ಲ “ನೀವು ಕೆಲಸ ಮಾಡುವ ಶಾಲೆಗಳು ಸಾಂಸ್ಕೃತಿಕ ಕೇಂದ್ರಗಳಾಗಿ ಗುರುತಿಸಿಕೊಳ್ಳಬೇಕೆಂದು” ಕಿವಿ ಮಾತು ಹೇಳಿದ್ದರು. ಆ ಸಂದರ್ಭದಲ್ಲಿ ಆಗಿನ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ https://en.wikipedia.org/wiki/Vishweshwar_Hegde_Kageri ಅವರು ಉಪಸ್ಥಿತರಿದ್ದಿದ್ದರು.

ಟಾಲ್ಪ್ ತರಬೇತಿಯ ಬಳಿಕ ಅಕ್ಷರ ಅವರ ಹೇಳಿಕೆಯನ್ನು “ನಮ್ಮ ಶಾಲೆಗಳು ತಂತ್ರಜ್ಞಾನಾಧಾರಿತ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದುಕೊಳ್ಳುತ್ತೇನೆ. ಇಂಥದ್ದೊಂದು ತರಬೇತಿಯನ್ನು ನಮಗೆ ನೀಡಿದ ಘನ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ.

-ಸಂತೋಷ ಗುಡ್ಡಿಯಂಗಡಿ

 

ತರಬೇತಿಯ ಸಮಾರೋಪ

ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಾ.ಪ.ಪೂ.ಕಾಲೇಜಿನ ನೂತನ ಉಪಪ್ರಾಂಶುಪಾಲರಾದ ಶ್ರೀಮತಿ ಬಾಲಸರಸ್ವತಿಯವರು ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀ ಸಿದ್ಧರಾಜು, ದೈ.ಶಿ.ಪರಿವೀಕ್ಷಕರಾದ ಶ್ರೀ ಸ್ವಾಮಿ ಪ್ರಕಾಶ್ ಹಾಜರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಜಿ.ಎಸ್.ವಿಶ್ವನಾಥ ಮತ್ತು ಶ್ರೀನಿವಾಸ ಶೆಟ್ಟಿಗಾರ್ ಅವರು ತಂತ್ರಜ್ಞಾನಾಧಾರಿತ ಕಲಿಕೆಯ ಮಹತ್ವಗಳನ್ನು ಹಂಚಿಕೊಂಡರು. ಶ್ರೀಮತಿ ಶೋಭಾ (ಸಂಸ್ಕೃತ ಶಿಕ್ಷಕಿ, ಬಾ.ಸ.ಪ.ಪೂ.ಕಾ. ನಂಜನಗೂಡು), ಸಂತೋಷ ಗುಡ್ಡಿಯಂಗಡಿ (ನಾಟಕದ ಮೇಷ್ಟ್ರು ಸ.ಪ್ರೌ.ಶಾ. ಹೆಗ್ಗಡಹಳ್ಳಿ) ತರಬೇತಿಯ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಸ್ವಾಗತ ಕೋರಿದವರು ಶ್ರೀಮತಿ ಟಿ. ಎಸ್. ಪದ್ಮಿನಿ (ಸ.ಶಿಕ್ಷಕಿ ಬಾ.ಸ.ಪ.ಪೂ.ಕಾ. ನಂಜನಗೂಡು). ಪ್ರಾರ್ಥನೆ ಮಾಡಿದವರು ಶ್ರೀ ಅಂದಾನಪ್ಪ (ಸಂಗೀತ ಶಿಕ್ಷಕರು ಬಾ.ಸ.ಪ.ಪೂ.ಕಾ. ನಂಜನಗೂಡು). ನಿರೂಪಣೆ ಶ್ರೀ ದೀಪು (ದೈ.ಶಿ.ಶಿ. ಸ.ಪ್ರೌ.ಶಾಲೆ ಕುಪ್ಪರವಳ್ಳಿ) ವಂದನಾರ್ಪಣೆ ಮಾಡಿದವರು ಶ್ರೀಮತಿ ಪೂರ್ಣಿಮ ಪ್ರಸಾದ್ (ಸ.ಶಿಕ್ಷಕಿ ಬಾ.ಸ.ಪ.ಪೂ.ಕಾ. ನಂಜನಗೂಡು). ಕಾರ್ಯಕ್ರಮದಲ್ಲಿ ಶ್ರೀ ಬಾಲಚಂದ್ರ ಭಟ್ (ಸ.ಶಿ., ಸ.ಪ್ರೌ.ಶಾಲೆ ಹೆಡತಲೆ) ಹಾಜರಿದ್ದರು.


ತರಬೇತಿಯ ಚಿತ್ರ ಸಂಪುಟ










Friday 28 February 2020

ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2020 ವಿಜ್ಞಾನಿಯೊಡನೆ ನೇರ ಸಂವಾದ LIVE INTERACTION...




ವಿಜ್ಞಾನಿಯೊಬ್ಬರ ಮನದಾಳದ ಮಾತು
ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ (28-02-2020) ವಿಜ್ಞಾನಿ ಡಾ. ದಿನೇಶ್ ಶೆಟ್ಟಿಯವರೊಡನೆ ನೇರ ವಿಡಿಯೋ ಸಂವಾದ ನಡೆಯಿತು. ಅಬುಧಾಬಿಯಿಂದ ಅವರು ಮಕ್ಕಳೊಡನೆ ಮಾತನಾಡಿದರು. ಮೂಲತಃ ಉಡುಪಿ ಜಿಲ್ಲೆ ಕುಂದಾಪುರದವರಾದ ದಿನೇಶ್ ಕ್ಯಾನ್ಸರ್ ಕಾಯಿಲೆ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಜ್ಞಾನ ಮತ್ತು ನೆನಪು, ತಾನ್ಯಾಕೆ ಕ್ಯಾನ್ಸರ್ ಅನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡೆ, ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು ಎಂಬ ಕುರಿತು ವಿವರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.



ಕ್ಯಾನ್ಸರ್ ಕುರಿತೇ ಸಂಶೊಧನೆ ಮಾಡಬೇಕು ಅಂತ ಯಾಕನಿಸಿತು? ಎಂದು 9ನೇ ತರಗತಿಯ ಸಹನಾ ಕೇಳಿದಾಗ ದಿನೇಶ್ ಅವರು ತನ್ನ ಬಾಲ್ಯದ ಘಟನೆಯೊಂದನ್ನು ವಿವರಿಸಿದರು. ಈ ಘಟನೆ ಮಕ್ಕಳಿಗೆ ಸ್ಪೂರ್ತಿ ಚೈತನ್ಯ ತುಂಬುವಂಥದ್ದಾಗಿತ್ತು. ಅವರು 9ನೇ ತರಗತಿಯಲ್ಲಿದ್ದಾಗ ಟಿ.ಬಿ. ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಂದೆಯೊಂದಿಗೆ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಔಷಧಿಗೆ ಹೋಗಬೇಕಾಗಿತ್ತಂತೆ. ಆಗ ವೈದ್ಯರು ಸಿಗುತ್ತಿರುಲಿಲ್ಲ. ಕಾರಣ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿದ್ದರೂ ತಮ್ಮದೇ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಾ ರೋಗಿಗಳಿಗೆ ಸಿಗುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಶಕ್ತಿ ತಮ್ಮ ತಂದೆಗೆ ಇರಲಿಲ್ಲ. ವೈದ್ಯರು ಸಿಗದೆ ಬಸ್ಸು ನಿಲ್ದಾಣದಲ್ಲಿ ದಿನೇಶ್ ಅವರ ತಂದೆ ಕಣ್ಣೀರಿಟ್ಟರಂತೆ. ಅವರು ಅತ್ತಿದ್ದು ಕಾಯಿಲೆಯಿಂದಾಗಿಯಲ್ಲ ಈ ಸಮಾಜಿಕ ವ್ಯವಸ್ಥೆ ಬಡರೋಗಿಯನ್ನು ನಡೆಸಿಕೊಂಡ ಪರಿಗೆ. ಅಂದು ಡಾ. ದಿನೇಶ್ ತಮ್ಮ ತಂದೆಗೆ ಎರಡು ಮಾತು ಕೊಟ್ಟಿದ್ದರಂತೆ

1.     ಮುಂದೆ ತಾನು ಈ ಸಮಾಜದ ನಾಲ್ಕು ಜನರಿಗೆ ನೆರವಾಗುವಂತೆ ಬದುಕುತ್ತೇನೆ.
2.     ಕುಂದಾಪುರದಲ್ಲಿ ಉಚಿತವಾಗಿ ಔಷಧಿಯನ್ನು ನೀಡುವಂತ ಒಂದು ಆಸ್ಟತ್ರೆಯನ್ನು ಕಟ್ಟಿಸುತ್ತೇನೆ ಎಂದು.



ಮೊದಲನೆಯ ಮಾತಿನಂತೆ ದಿನೇಶ್ ಸಮಾಜವನ್ನು ಕಾಡುತ್ತಿರುವ ಕ್ಯಾನ್ಸರ್ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿದಿದ್ದು 19 ದೇಶಗಳಲ್ಲಿ ಆ ಔಷಧಿ ರೋಗಿಗಳ ಮೇಲೆ ಪ್ರಯೋಗವಾಗುತ್ತಿದೆ. ಮತ್ತು ಮೆದುಳಿನ ಕ್ಯಾನ್ಸರ್ ಗೆ ಕಂಡುಹಿಡಿದರುವ ಔಷಧಿ ಇನ್ನೇನು ರೋಗಿಗಳ ಮೇಲೆ ಪ್ರಯೋಗಗೊಳ್ಳಲು ಸಿದ್ಧವಾಗಿದೆ ಎಂದು ತಮ್ಮ ತಂದೆಯನ್ನು ನೆನೆದು ಭಾವುಕವಾದರು ದಿನೇಶ್. ಎರಡನೇ ಮಾತಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ, ಆ ದಿನಕ್ಕಾಗಿ ಶ್ರಮಿಸುತ್ತಿದ್ದೇನೆ ಎಂದು ತಾವು ಕ್ಯಾನ್ಸರ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡದ್ದನ್ನು ವಿವರಿಸಿದರು.

ವಿಜ್ಞಾನಿಯಾಗ ಬೇಕಾದರೆ ಏನು ಓದಬೇಕು? ನಮ್ಮ ಮನಸ್ಥಿತಿಗಳು ಹೇಗಿರಬೇಕು? ಎಂದಮು 9ನೇ ತರಗತಿಯ ಜಿ. ಅನನ್ಯ ಕೇಳಿದ ಪ್ರಶ್ನೆಗೆ ದಿನೇಶ್ ಅವರು ಉತ್ತರ ನೀಡುತ್ತಾ, ವಿಜ್ಞಾನಿ ಎಂದರೆ ವಿಶೇಷವಾದ ಜ್ಞಾನವುಳ್ಳ ಎಲ್ಲರೂ ವಿಜ್ಞಾನಿಗಳೆ. ಆದರೆ ವಿಜ್ಞಾನದ ಪರಿಭಾಷೆಯಲ್ಲಿ ಅಂದರೆ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ವಿಜ್ಞಾನಿಯಾಗಬೇಕೆಂದರೆ ಮೊದಲು ಆಸಕ್ತಿ ಇರಬೇಕು, ಕುತೂಹಲ ಇರಬೇಕು, ತಾಳ್ಮೆ ಸಹನೆ ಇರಬೇಕು. ಸೋಲು ಗೆಲುವುಗಳನ್ನು ಸ್ವೀಕರಿಸುವ ಗುಣವಿರಬೇಕು, ಉತ್ಸಾಹವಿರಬೇಕು, ಸಮಾಜಕ್ಕಾಗಿ ಏನಾದರೂ ಒಳಿತನ್ನು ನೀಡಬೇಕೆಂಬ ಹಂಬಲವನ್ನು ಹೊಂದಿರಬೇಕು. ಕಠಿಣ ಪರಿಶ್ರಮ ಪಡಬೇಕು. ಮುಖ್ಯವಾಗಿ ತನಗೆ ಆಸಕ್ತಿಯಿದೆಯೇ ಎಂದು ತನ್ನನ್ನು ತಾನು ಗುರುತಿಸಿಕೊಳ್ಳಬೇಕು.




ಒಂದರಿಂದ ಹತ್ತನೇ ತರಗತಿಯವರೆಗಿನ ಜ್ಞಾನ ಮೂಲಜ್ಞಾನ. ಈ ಮೂಲಜ್ಞಾನವನ್ನು ಮನಸ್ಸಿನಲ್ಲಿ ಉಳಿಯುವಂತೆ ಓದಬೇಕು. ಪರೀಕ್ಷೆಯಲ್ಲಿ ಗಳಿಸುವ ಅಂಕ ನಮ್ಮ ಜ್ಞಾನದ ಪ್ರತಿಫಲ ಅಲ್ಲ, ನಮ್ಮ ನೆನಪಿನ ಶಕ್ತಿಯ ಸಾಮರ್ಥ್ಯ. ವಿದ್ಯಾರ್ಥಿಗಳಲ್ಲಿ ಮೂರು ವಿಧ.
1)    ಪರೀಕ್ಷೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನಿರೀಕ್ಷಿಸಿದಷ್ಟು ಅಂಕಗಳು ಬರದೇ ಇದ್ದರೆ ತನ್ನ ಪಾಲಿಗೆ ಜೀವನವೇ ಮುಗಿದು ಹೋಯ್ತು ಎಂದು ತಿಳಿದವರು.
2)    ಪರೀಕ್ಷೆಯನ್ನು ಗಂಭೀರವಾಗಿಯೇ ಸ್ವೀಕರಿಸಿ ತಮ್ಮ ಪ್ರಯತ್ನ ಮಾಡ್ತಾರೆ ತಾವು ನಿರೀಕ್ಷಿಸಿದಷ್ಟು ಅಂಕ ಬರದಿದ್ದಲ್ಲಿ ಅದನ್ನು ಧನಾತ್ಮಕವಾಗಿ ಸ್ವೀಕರಿಸುತ್ತಾರೆ.
3)    ಯಾವುದನ್ನೂ ಗಂಭೀರವಾಗಿ ಸ್ವೀಕರಿಸದೆ ತಮ್ಮ ಪಾಡಿಗೆ ತಾವಿರುವವರು.


ಜಗತ್ತಿನಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರ್ಯಾರೂ ತುಂಬಾ ಚನ್ನಾಗಿ ಓದಿ ನೂರಕ್ಕೆ ನೂರು ಅಂಕಗಳಿಸಿದವರಲ್ಲ. ಹಾಗಾಗಿ ಯಾವಾಗಲೂ ಓದುವಾಗ ಜ್ಞಾನ ಸಂಪಾದನೆಗಾಗಿ ಓದಬೇಕು. ಜ್ಞಾನ ಸಂಪಾದನೆ ಮುಖ್ಯವಾದಾಗ ಓದುವ ಆಸಕ್ತಿ ಬೆಳೆಯುತ್ತದೆ, ಪ್ರೀತಿ ಹುಟ್ಟುತ್ತದೆ. ಓದನ್ನು ಎಂಜಾಯ್ ಮಾಡ್ತಿರ, ಹಾಗೆ ಕುಷಿಯಿಂದ ಓದಿದ್ದು ಜ್ಞಾನವಾಗಿ ಜೀರ್ಣವಾಗುತ್ತದೆ. ಆಗ ಪರೀಕ್ಷೆ ಬಹಳ ಸುಲಭವಾಗುತ್ತದೆ. ಜೀವನದಲ್ಲಿ ಯಾವುದೇ ಕೆಲಸ ಮಾಡಿ ಆದರೆ ಮುಖ್ಯವಾಗಿ ಪ್ರಯತ್ನ ಕಠಿಣ ಪರಿಶ್ರಮವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ.

Tuesday 25 February 2020

ಹೆಗ್ಗಡಹಳ್ಳಿಯಂತ ಶಾಲೆ ಮತ್ತೊಂದಿಲ್ಲ : ಶ್ರೀ ಎಸ್. ಸುರೇಶ್ ಕುಮಾರ್



ಹೆಗ್ಗಡಹಳ್ಳಿಯಂತ ಶಾಲೆ ಮತ್ತೊಂದಿಲ್ಲ : ಶ್ರೀ ಎಸ್. ಸುರೇಶ್ ಕುಮಾರ್



ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಇಡೀ ರಾಜ್ಯದ ಮಕ್ಕಳ ಮುಂದೆ ಒಂದು ಆದರ್ಶದ ದಾರಿಯನ್ನು ತೆರೆದಿಟ್ಟಿದ್ದಾರೆ. ಮಕ್ಕಳು ದನಿ ಎತ್ತಿದರೆ, ಹೆಗ್ಗಡಹಳ್ಳಿಯ ಮಕ್ಕಳ ರೀತಿ ಸಾತ್ವಿಕ ಪ್ರತಿಭಟನೆ ಮಾಡಿದರೆ ಪರಿಣಾಮಕಾರಿಯಾಗಿರುತ್ತದೆ. ಶಿಕ್ಷಣ ಇಲಾಖೆಯವರು ಈ ಶಾಲೆಯನ್ನು ಗುರುತಿಸಿದ್ದಕ್ಕಿಂತ ಹೆಚ್ಚು ದೊಡ್ಡ ದೊಡ್ಡ ಕಂಪೆನಿಗಳು ಗುರುತಿಸಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ತಿಳುವಳಿಕೆ ಬುದ್ಧಿ ಹೇಳಿರುವಂತ ಶಾಲೆ ಇದ್ದರೆ ಅದು ಹೆಗ್ಗಡಹಳ್ಳಿಯ ಶಾಲೆ. ಇಡೀ ರಾಜ್ಯದಲ್ಲಿ ಈ ರೀತಿಯ ಮತ್ತೊಂದು ಶಾಲೆ ಎಲ್ಲೂ ಇಲ್ಲ. ಅಂತಹ ಶಾಲೆಗೆ ನಾನಿಂದು ಬಂದಿದ್ದೇನೆ ಎಂದು ಹರ್ಷವ್ಯಕ್ತಪಡಿಸಿದರು. ಎರಡನೇ ಬಾರಿ ಈ ಶಾಲೆಗೆ ಬಂದಿದ್ದೇನೆ ಎಂದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಹೆಮ್ಮೆಯಿಂದ ಹೇಳಿದರು. 25-02-2020 ರಂದು ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವರು “ನಿಮ್ಮ ಕಸ ನಿಮಗೆ ಅಭಿಯಾನದ ಕುರಿತು ಅಭಿಮಾನದ ಮಾತುಗಳನ್ನಾಡಿ ಎಂಟನೇ ಕಂತಿನ ಕಸವನ್ನು ಹತ್ತು ಕಂಪೆನಿಗಳಿಗೆ ಕಳಿಸುವ ಮಕ್ಕಳ ಚಳುವಳಿಗೆ ಬೆಂಬಲವಾಗಿ ನಿಂತರು.

ಪ್ಲಾಸ್ಟಿಕ್ ನಿಂದಾಗುವ ಅಪಾಯ ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಬಿಡಲಿಕ್ಕೆ ಆಗುತ್ತಿಲ್ಲ. ಬಿಡದೆ ಇದ್ದರೆ ಅದು ಭಸ್ಮಾಸುರ ಆಗುತ್ತದೆ. ನಿಮ್ಮ ಭವಿಷ್ಯಕ್ಕಾಗಿ ನಿಮ್ಮ ಹೋರಾಟ ನಿರಂತರವಾಗಿರಲಿ. ಕೇವಲ ಪ್ಲಾಸ್ಟಿಕ್ ವಿರುದ್ಧವಷ್ಟೇ ಅಲ್ಲ ಸಮಾಜದಲ್ಲಿ ನಡೆಯುವ ಯಾವುದೇ ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆಯ ದನಿ ಇರಬೇಕು. ಮುಂದೆ ಪರೀಕ್ಷೆ ಹತ್ತಿರ ಬರುತ್ತಿದೆ ಚನ್ನಾಗಿ ಓದಿ. ಮೊಬೈಲ್ ನಿಂದ ದೂರವಿರಿ ಎಂದು ಹೇಳಿದರು. ಮಕ್ಕಳು ಇದೇ ಸಂದರ್ಭದಲ್ಲಿ ಜಗದ್ವಿಖ್ಯಾತ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಕುರಿತ ಪುಸ್ತಕವನ್ನು ನೀಡಿದರು. ನಿಮ್ಮಲ್ಲಿ ಯಾರು ಗ್ರೇಟಾ? ಎಂದು ಸಚಿವರು ಕೇಳಿದಾಗ “ನಾವೆಲ್ಲರೂ ಎಂದು ಉತ್ತರಿಸಿದರು.

ಶಾಸಕ ಶ್ರೀ ಹರ್ಷವರ್ಧನ್ ಮಾತನಾಡಿ ಎಸ್.ಎಸ್.ಎಲ್.ಸಿ. ಜೀವನದ ಅತ್ಯಂತ ಪ್ರಮುಖ ಪರೀಕ್ಷೆ ಚನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಿ. ಈ ಪ್ರಮಾಣಪತ್ರ ಬದುಕಿನುದ್ದಕ್ಕೂ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಪರೀಕ್ಷಾ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ನಿಮ್ಮ ಕಸ ನಿಮಗೆ ಅಭಿಯಾನದ ಎಂಟನೇ ಕಂತಿನ ಕಸವನ್ನು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಮತ್ತು ಶಾಸಕರು ಮತ್ತು ಮಕ್ಕಳು ಪೋಸ್ಟ್ ಮಾಸ್ಟರ್ ಸುರೇಶ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಪಾಂಡುರಂಗ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ. ಎನ್. ರಾಜು ಇಲಾಖೆಯ ಹಿರಿಯ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರಾದ ಎ. ಎಂ. ಲಿಂಗರಾಜು ಅವರು ಹಾಜರಿದ್ದರು.




Monday 17 February 2020

LIVE INTERACTION WITH EDUCATION MINISTER S. SURESH KUMAR IN GHS HEGGADAH...




ಶಿಕ್ಷಣ ಸಚಿವರಾದ ಶ್ರೀ ಎಸ್. ಸುರೇಶ್ ಕುಮಾರ್ ಅವರೊಂದಿಗೆ ನೇರ ವಿಡಿಯೋ ಸಂವಾದ.

ನಮ್ಮ ಶಾಲೆಯಲ್ಲಿ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಪ್ರಸಿದ್ಧರೊಂದಿಗೆ ನೇರ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಇದರ ಅಂಗವಾಗಿ ಶಿಕ್ಷಣ ಸಚಿವರೊಂದಿಗೆ ಸಂವಾದ ನಡೆಯಿತು. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆಯ ಕುರಿತು ಕಿವಿಮಾತು ಹೇಳಿ ಸರ್ ಎಂದು ಕೇಳಿಕೊಂಡಾಗ ಅವರು ಒಪ್ಪಿಕೊಂಡರು. ಅದರಂತೆ ಫೆಬ್ರವರಿ 6 ರಂದು ಮದ್ಯಾಹ್ನ 2:30 ಸಚಿವರು ಸಮಯ ನೀಡಿದರು. ಅವರು ಬೆಂಗಳೂರಿನಿಂದ ಲೈವ್ ಆಗಿ ನಮ್ಮ ಮಕ್ಕಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ನಂಜನಗೂಡು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ. ಎನ್. ರಾಜು ಅವರೊಂದಿಗೆ ಮಾತನಾಡಿ ತಾಲೂಕಿನಲ್ಲಿ ನಡೆಯುತ್ತಿರುವ ಪರೀಕ್ಷೆಯ ತಯಾರಿ ಕುರಿತು ಮಾಹಿತಿ ಪಡೆದರು.
ವಿಡಿಯೋ ಕರೆಯ ಮೂಲಕ ಹೀಗೆ ಸಂವಾದ ನಡೆಸುವುದು ಸಾಧ್ಯವಾಗಿದ್ದು ತಂತ್ರಜ್ಞಾನ ಮತ್ತು ಶಿಕ್ಷಕರ ಮೇಲೆ ನಂಬಿಕೆ, ಶಿಕ್ಷಕರನ್ನು ಹುರುದುಂಬಿಸುವ ಸಚಿವರಿಂದಾಗಿ. ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಶಾಲೆಗಳಲ್ಲಿ ನಡೆಯುತ್ತಿರುವ ಒಳ್ಳೆಯ ಕಾರ್ಯಗಳನ್ನು ಗಮನಿಸಿದ ತಕ್ಷಣ ಅಂತಹ ಶಾಲೆ, ಶಿಕ್ಷಕರನ್ನು ಸಂಪರ್ಕಿಸಿ ಬೆನ್ನುತಟ್ಟುವ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಶಿಕ್ಷಕರ ಅಚ್ಚುಮೆಚ್ಚಿನ ಸಚಿವರಾಗಿದ್ದಾರೆ.
ನಮ್ಮ ಶಾಲೆಯ ನಿಮ್ಮ ಕಸ ನಿಮಗೆ ಅಭಿಯಾನದ ಕುರಿತು ಪತ್ರಿಕೆಗಳಲ್ಲಿ ಬಂದ ಸುದ್ಧಿಯನ್ನು ನೋಡಿ ನಮ್ಮ ಶಾಲೆಯನ್ನು ಹುಡುಕಿಕೊಂಡು ಬಂದಿದ್ದರು. ಅಲ್ಲಿಂದ ನಮ್ಮ ಶಾಲೆಯ ಬಗ್ಗೆ ಗಮನಿಸುತ್ತಾ, ಶೈಕ್ಷಣಿಕ ಮಾಹಿತಿಗಳನ್ನು ಆಗಾಗ ತಿಳಿದು ಮೆಚ್ಚುಗೆ ಸೂಚಿಸುತ್ತಿದ್ದರು. ಹಾಗಾಗಿಯೇ ಮಕ್ಕಳೊಂದಿಗೆ ನೇರ ಸಂವಾದಕ್ಕೆ ಕೇಳಿಕೊಂಡಾಗ ಅತ್ಯಂತ ಸಂತೋಷದಿಂದ ಒಪ್ಪಿಕೊಂಡರು. ಹೀಗೆ ಶಿಕ್ಷಣ ಸಚಿವರೊಂದಿಗೆ ನೇರ ಸಂವಾದ ನಮ್ಮ ಶಾಲೆಯಲ್ಲಿ ಸಾಧ್ಯವಾಯಿತು. ಅದಕ್ಕಾಗಿ ಸಚಿವರಿಗೆ ಮಕ್ಕಳೆಲ್ಲರ ಪರವಾಗಿ ವಂದನೆಗಳು.

ನಮ್ಮ ಶಾಲೆಯ ಸಂವಾದ ನಂತರ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಚಿವರು ಬರೆದ ಬರಹ