Thursday 17 October 2019

ವಿಜ್ಞಾನ ನಾಟಕದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ


ವಿಜ್ಞಾನ ನಾಟಕದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ





ಚಾಮರಾಜನಗರದ ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ ಜರುಗಿದ ಮೈಸೂರು ವಿಭಾಗಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸಿದ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ “ಕಾರ್ಬನ್‌ ಲೋಕ” ನಾಟಕ ಪ್ರಥಮಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆವರ್ತಕೋಷ್ಠಕ ವಿಷಯವನ್ನಿಟ್ಟುಕೊಂಡು ಕಾರ್ಬನ್‌ ಧಾತುವನ್ನು ಪ್ರಧಾನವಾಗಿಟ್ಟುಕೊಂಡ ಈ ನಾಟಕವು ಕಾರ್ಬನ್‌ ಮತ್ತು ಅದರ ಸಂಯುಕ್ತಗಳು ನಮ್ಮ ಬದುಕಿಗೆ ಹೇಗೆ ಉಪಕಾರಿಯಾಗಿದೆ ಮತ್ತು ಅಪಾಯಕಾರಿಯಾಗಿದೆ ಎಂದು ತಿಳಿಸುವ ಪ್ರಯತ್ನವಾಗಿದೆ ಈ ಪ್ರಯೋಗ.
ರಷ್ಯಾದ ರಸಾಯನಶಾಸ್ತ್ರ ವಿಜ್ಞಾನಿ ಡಿಮಿಟ್ರಿ ಮೆಂಡಲೀವ್‌ ರಚಿಸಿದ ಆಧುನಿಕ ಆವರ್ತಕೋಷ್ಠಕಕ್ಕೆ 150ವರ್ಷ ತುಂಬಿದ ಸಂದರ್ಭದಲ್ಲಿ 2019ನ್ನು ಅಂತರರಾಷ್ಟ್ರೀಯ ಆವರ್ತಕೋಷ್ಠಕ ವರ್ಷವಾಗಿ ಆಚರಿಸಲಾಗುತ್ತಿದೆ. ಹೀಗಾಗಿ ವಿಜ್ಞಾನ ನಾಟಕ ಸ್ಪರ್ಧೆಗೂ ಆವರ್ತಕೋಷ್ಠಕವನ್ನೂ ಒಂದು ವಿಷಯವಾಗಿ ನೀಡಲಾಗಿದೆ.


ದ್ವಿತೀಯ ಸ್ಥಾನವನ್ನು ಚಾಮರಾಜನಗರ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆ ಗುಂಬಳ್ಳಿಯ ಮಕ್ಕಳು ಪಡೆದರೆ ಮೂರನೇ ಬಹುಮಾನವನ್ನು ಕೊಡಗು ಜಿಲ್ಲೆಯ ಮಕ್ಕಳು ಪಡೆದರು.
ನಮ್ಮ ಶಾಲೆಯು ನಾಲ್ಕು ವರ್ಷಗಳ ಹಿಂದೆ ರಾಜ್ಯಮಟ್ಟದಲ್ಲಿ ಸಮಾಧಾನಕರ ಬಹುಮಾನ ಪಡೆದಿದ್ದು ಇದೀಗ ಮತ್ತೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ನಾಟಕದಲ್ಲಿ ಕಾರ್ಬನ್‌ ಪಾತ್ರದಲ್ಲಿ ಎಸ್. ಅನಿತ, ಕಲ್ಲಿದ್ದಿಲು ಪಾತ್ರದಲ್ಲಿ ಡಿ.ಕೆ. ಶಿವಪ್ರಸಾದ್‌, ಕಾಡಿಗೆ ಪಾತ್ರದಲ್ಲಿ ಎಮ್.ಪಿ.ನೇತ್ರಾವತಿ, ಅಜ್ಜಿಯ ಪಾತ್ರದಲ್ಲಿ ಆರ್. ಸಹನ, ವಿದ್ಯಾರ್ಥಿನಿಯ ಪಾತ್ರದಲ್ಲಿ ರಕ್ಷಿತಾ, ಅಪ್ಪನ ಪಾತ್ರದಲ್ಲಿ ಆರ್. ಅಭಿಷೇಕ, ಸಂಗೀತದಲ್ಲಿ ಎಸ್. ಅಭಿಷೇಕ ಮತ್ತು ತಾಂತ್ರಿಕ ನಿರ್ವಹಣೆಯಲ್ಲಿ ಪಿ. ಮನು ಭಾಗವಹಿಸಿದ್ದರು.